ನಾವು ಆಕಳಿಸುತ್ತಾ ಇರುವಾಗ ಸಾಮಾನ್ಯವಾಗಿ ನೋಡಿದವರು ಹೇಳುತ್ತಾರೆ ನಿಮ್ಮನ್ನು ಯಾರೋ ನೆನಪು ಮಾಡುತ್ತಿದ್ದಾರೆ. ನಿಮ್ಮ ಬಗ್ಗೆ ಯಾರೋ ಮಾತನಾಡುತ್ತಿದ್ದರೆ ಎಂದು. ಇದನ್ನು ಕೇಳಿದಾಗೆಲ್ಲ ಮನಸ್ಸಿಗೆ ಬರುವ ಪ್ರಶ್ನೆಯೊಂದೆ ನಿಜವಾಗಿಯೂ ಆಕಳಿಕೆ ಬರಲು ಕಾರಣ ಇದೆನಾ?
ಆಕಳಿಕೆಯನ್ನು ಸಾಮಾನ್ಯವಾಗಿ ದಣಿದ ಅಥವಾ ಬೇಸರದ ಪ್ರತಿಕ್ರಿಯೆ ಅಂತ ಹೇಳಲಾಗುತ್ತದೆ. ಆದರೆ ಕೆಲವರು ವ್ಯಾಯಾಮ ಮಾಡುವಾಗ ಅಥವಾ ಹಾಡುವಾಗ ಕೂಡ ಹೆಚ್ಚಾಗಿ ಆಕಳಿಸುತ್ತಾರೆ ಎಂದು ವರದಿಯಾಗಿದೆ. ಆದ್ದರಿಂದ, ಇದು ನಮಗೆ ನಿದ್ರೆ ಅಥವಾ ಬೇಸರದ ಸಂಕೇತವಲ್ಲ ಎಂದು ಸ್ಪಷ್ಟವಾಗುತ್ತದೆ.
ಅಷ್ಟೇ ಅಲ್ಲದೇ ಆಕಳಿಕೆ ಸಾಂಕ್ರಾಮಿಕ ಎನ್ನುವ ಅನುಮಾನ ಹೆಚ್ಚಿನವರಲ್ಲಿ ಕಾಡುತ್ತದೆ. ಯಾಕೆಂದರೆ , ಬೇರೆ ವ್ಯಕ್ತಿಗಳು ಆಕಳಿಸುವುದನ್ನು ನೋಡುವಾಗಲು ಕೂಡ ನಿಮಗೆ ಆಕಳಿಕೆ ಬರುತ್ತದೆ. ನೀವು ನೋಡಬೇಕಾಗಿಲ್ಲ. ಕೆಲವೊಮ್ಮೆ, ಆಕಳಿಕೆ ಬಗ್ಗೆ ಕೇಳುವುದು ಅಥವಾ ಅದರ ಬಗ್ಗೆ ಯೋಚಿಸುವಾಗ ಕೂಡ ಆಕಳಿಕೆ ಬರುತ್ತದೆ. ನೀವು ಇದನ್ನು ಈಗ ಓದುತ್ತಿರುವಾಗ ಕೂಡ ಆಕಳಿಸುತ್ತಿರಬಹುದು.
ನಾವೇಕೆ ಆಕಳಿಸುತ್ತೇವೆ?
ತಜ್ಞರ ಪ್ರಕಾರ ಮೆದುಳಿನಿಂದ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಆಕಳಿಕೆ ಉಂಟಾಗುತ್ತದೆ. ಮೆದುಳು ನಿಧಾನಗೊಂಡಾಗ ಮತ್ತು ದೇಹಕ್ಕೆ ಆಮ್ಲಜನಕ ಅಗತ್ಯವಿದೆ ಎಂದು ಸೂಚಿಸುವ ಪ್ರತಿಕ್ರಿಯೆ ಇದಾಗಿದೆ. ಫಿಸಿಯಾಲಜಿ ಆಂಡ್ ಬಿಹೇವಿಯರ್ ಜರ್ನಲ್ ನಲ್ಲಿ ಪ್ರಕಟವಾದ ಅದ್ಯಯನವೊಂದರಲ್ಲಿ, 120 ಜನರ ಆಕಳಿಕೆ ಅಭ್ಯಾಸವನ್ನು ಅಧ್ಯಯನ ಮಾಡಲಾಯಿತು ಮತ್ತು ಈ ಆಕಳಿಕೆ ಚಳಿಗಾಲದಲ್ಲಿ ಕಡಿಮೆ ಸಂಭವಿಸುತ್ತದೆ ಎಂದು ಆ ಅಧ್ಯಯನ ಕಂಡುಹಿಡಿದಿದೆ. ಅಲ್ಲದೆ ಜನರು ಆಕಳಿಸಲು ಮತ್ತೊಂದು ಕಾರಣವೆಂದರೆ ದೇಹವು ಸ್ವತಃ ಎಚ್ಚರಗೊಳ್ಳಲು ಬಯಸುತ್ತದೆ ಆದ್ದರಿಂದ ಶ್ವಾಸಕೋಶಗಳು ಮತ್ತು ಅವುಗಳ ಅಂಗಾಶವನ್ನು ವಿಸ್ತರಿಸಲು ಆಕಳಿಕೆಯು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ಆಕಳಿಕೆ ಸಾಂಕ್ರಾಮಿಕವೇ?
ಅಧ್ಯಯನಗಳ ಪ್ರಕಾರ, ಆಕಳಿಕೆಯು ಸಾಂಕ್ರಾಮಿಕವಾಗಿದೆ. ತಜ್ಞರು ಆಕಳಿಕೆಯನ್ನು ಎರಡು ವಿಧವಾಗಿ ವರ್ಗೀಕರಿಸುತ್ತಾರೆ. ಸ್ವತಃ ಸಂಭವಿಸುವ ಆಕಳಿಕೆ- ಇದನ್ನು ಸ್ವಯಂ ಪ್ರೇರಿತ ಆಕಳಿಕೆ ಎಂದು ಕರೆಯುತ್ತಾರೆ. ಇನ್ನೊಂದು ಬೆರೊಬ್ಬ ವ್ಯಕ್ತಿ ಆಕಳಿಸುವುದನ್ನು ನೋಡಿದ ನಂತರ ಉಂಟಾಗುವ ಆಕಳಿಕೆ- ತಜ್ಞರು ಇದನ್ನು ಸಾಂಕ್ರಾಮಿಕ ಆಕಳಿಕೆ ಎಂದು ಕರೆಯುತ್ತಾರೆ. ಯಾರಾದರೂ ಆಕಳಿಸುವುದನ್ನು ಕಂಡು ನೀವು ಕೂಡಾ ಆಕಳಿಸಲು ಪ್ರಾರಂಭಿಸುತ್ತೀರಿ. ಇದನ್ನೇ ಸಾಂಕ್ರಾಮಿಕ ಆಕಳಿಕೆ ಎಂದು ಕರೆಯುತ್ತಾರೆ. ಒಂದು ಸಂಶೋಧನೆಯ ಪ್ರಕಾರ ಮೆದುಳಿನ ತಾಪಮಾನವನ್ನು ನಿಯಂತ್ರಿಸುವಲ್ಲಿ ಆಧಾರವಾಗಿರುವ ಕಾರ್ಯವಿಧಾನದಿಂದ ಸ್ವಾಭಾವಿಕ ಮತ್ತು ಸಾಂಕ್ರಾಮಿಕ ಆಕಳಿಕೆಗಳು ಉದ್ಭವಿಸುತ್ತದೆ. ಆದ್ದರಿಂದ ಅನೇಕ ಸಂಶೋದಕರು ಸಾಂಕ್ರಾಮಿಕ ಆಕಳಿಕೆಯು ಸರಳವಾದ ಒಂದು ಪ್ರಕ್ರಿಯೆಯಾಗಿದೆ ಎಂದು ಹೇಳುತ್ತಾರೆ. ಬೇರೊಬ್ಬರು ಆಕಳಿಸುವುದನ್ನು ನೋಡಿದ ನಂತರ ನೀವು ಆಕಳಿಸಿದರೆ, ನೀವಿಬ್ಬರೂ ಒಂದೇ ರೀತಿಯ ಹವಾಮಾನದೊಂದಿಗೆ ಒಂದೇ ಪ್ರದೇಶದಲ್ಲಿರುವ ಸಾಧ್ಯತೆ ಇರುತ್ತದೆ. ಪ್ರತಿಯಾಗಿ ನಿಮ್ಮ ಎರಡೂ ಮೆದುಳುಗಳು ತಾಪಮಾನದ ಹೊಂದಾಣಿಕೆಗೆ ಪ್ರತಿಕ್ರಿಯಿಸುತ್ತದೆ.
ಆಕಳಿಕೆಯನ್ನು ಕಡಿಮೆ ಮಾಡಲು ಈ ರೀತಿ ಮಾಡಿ:
ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ:
ನೀವು ಅತಿಯಾದ ದಣಿವು ಮತ್ತು ನಿದ್ರಾಹೀನತೆಯನ್ನು ಅನುಭವಿಸಿದರೆ, ಆಳವಾದ, ದೀರ್ಘವಾದ ಉಸಿರನ್ನು ತೆಗೆದುಕೊಳ್ಲಲು ಮತ್ತು ನಿಮ್ಮ ಮೂಗಿನ ಮೂಲಕ ವ್ಯಾಯಾಮ ಮಾಡಲು ಪ್ರಯತ್ನಿಸಿ. ನಿರಂತರ ಆಕಳಿಕೆಯು ನಿಮ್ಮ ದೇಹಕ್ಕೆ ಆಮ್ಲಜನಕದ ಅಗತ್ಯವಿದೆ ಎಂಬುದರ ಸೂಚನೆಯಾಗಿದೆ.
ತೇವಾಂಶ ಅಗತ್ಯ:
ವೈದ್ಯರ ಪ್ರಕಾರ, ನಿರ್ಜಲೀಕರಣ ಮತ್ತು ನಿಶ್ಯಕ್ತಿಯು ಸುಸ್ತು ಅಥವಾ ಆಕಳಿಕೆಗೆ ಕಾರಣವಾಗಬಹುದು. ಆದ್ದರಿಂದ ದಿನವಿಡೀ ಸಾಕಷ್ಟು ನೀರು ಅಥವಾ ದ್ರವ ಪದಾರ್ಥಗಳನ್ನು ಸೇವಿಸಲು ಮರೆಯದಿರಿ. ಏಕೆಂದರೆ ಜಲಸಂಚಯನವು ಆಕಳಿಕೆಯನ್ನು ಬಾರದಂತೆ ತಡೆಗಟ್ಟಲು ಸಹಾಯ ಮಾಡುತ್ತದೆ.
ಸದಾ ಸಕ್ರಿಯವಾಗಿರಿ:
ಸೋಮಾರಿತನದ ವಿಶ್ರಾಂತಿ ಜೀವನಶೈಲಿಯನ್ನು ಹೊಂದಿರುವ ಜನರು ಹೆಚ್ಚು ಆಕಳಿಸುತ್ತಾರೆ. ಆದ್ದರಿಂದ ಯಾವಾಗಲು ಸಕ್ರಿಯವಾಗಿರಿ. ಏನನ್ನಾದರೂ ಮಾಡಲು ನಿಮ್ಮ ಮೆದುಳನ್ನು ಉತ್ತೇಜಿಸುವುದು ಮುಖ್ಯವಾಗಿದೆ. ನಿಮ್ಮ ದೇಹ ಆಕಳಿಕೆಗೆ ಒಳಗಾದಾಗಲೆಲ್ಲಾ, ನಿಮ್ಮ ಮನಸ್ಸನ್ನು ಬೇರೆಡೆಗೆ ತಿರುಗಿಸಲು 5 ರಿಂದ 10 ನಿಮಿಷಗಳ ಕಾಲ ಒಂದು ಸಣ್ಣ ನಡಿಗೆ ಅಥವಾ ಜಾಗಿಂಗ್ ಮಾಡಿ.
ಸರಿಯಾಗಿ ನಿದ್ರೆ ಮಾಡಿ:
ಪ್ರತಿದಿನ ಕನಿಷ್ಟ 7 ರಿಂದ 9 ಗಂಟೆಗಳ ಕಾಲ ಚೆನ್ನಾಗಿ ನಿದ್ರೆಯನ್ನು ಮಾಡುವುದು ಆರೋಗ್ಯದ ದೃಷ್ಟಿಯಿಂದ ಮುಖ್ಯವಾಗಿದೆ. ಇದು ದಣಿವನ್ನು ತಪ್ಪಿಸಿ ಆಕಳಿಕೆ ಬರದಂತೆ ಮಾಡಲು ಸಹಾಯಕವಾಗಿದೆ. ನಿದ್ರೆಯ ಕೊರತೆ ಅನೇಕ ಅಪಾಯಕಾರಿ ಮತ್ತು ಮಾರಣಾಂತಿಕ ಅಡ್ಡ ಪರಿಣಾಮಗಳನ್ನು ಬೀರಬಹುದು.
ಶೀತಾಹಾರಗಳನ್ನು ಸೇವಿಸಿ:
ನೀವು ಆಕಳಿಸಲು ಪ್ರಾರಂಭಿಸಿದ ತಕ್ಷಣ ಶೀತವಾಗಿರುವ ತಿಂಡಿಗಳನ್ನು ಸೇವಿಸಿ.