ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಪ್ರವಾಸಿಗರನ್ನು ಕರೆದೊಯ್ಯಲು ಬಳಸಲಾಗುವ ಜಲಾಂತರ್ಗಾಮಿ ಅಟ್ಲಾಂಟಿಕ್ ಸಾಗರದಲ್ಲಿ ಸೋಮವಾರ ನಾಪತ್ತೆಯಾಗಿದೆ ಎಂದು ವರದಿಯಾಗಿದೆ.
ಅಮೆರಿಕದ ಕರಾವಳಿ ಕಾವಲು ಪಡೆ ಈ ಬಗ್ಗೆ ಮಾಹಿತಿ ನೀಡಿದೆ. ನಾಪತ್ತೆಯಾಗಿರುವ ಜಲಂತರ್ಗಾಮಿ ನೌಕೆಯನ್ನು ಪತ್ತೆ ಹಚ್ಚಲು ಶೋಧ ಕಾರ್ಯ ಮುಂದುವರೆಸಲಾಗಿದೆ.
900 ಮೈಲುಗಳಷ್ಟು ಸಮುದ್ರದ ಮೇಲ್ಮೈಯಲ್ಲಿ ಶೋಧಕಾರ್ಯ ಮುಂದುವರೆದಿದ್ದು, ಶಬ್ಧಗಳನ್ನು ಗ್ರಹಿಸಲು ಸೋನಾರ್ ಅನ್ನು ಬಳಸಿಕೊಳ್ಳಲಾಗುತ್ತಿದೆ. ಸೋನಾರ್ 13,000 ಅಡಿಗಳಷ್ಟು ಆಳವಿರುವ ನೀರಿನ ಕೆಳಗಿನ ಶಬ್ದವನ್ನು ಗ್ರಹಿಸುತ್ತದೆ.
ಈ ಜಲಾಂತರ್ಗಾಮಿ ಒಂದು ಬಾರಿ 5 ಜನರನ್ನು ಹೊತ್ತೊಯ್ಯಬಹುದು ಎನ್ನಲಾಗಿದ್ದು ಟೈಟಾನಿಕ್ ಹಡಗು ದುರಂತದ ಅವಶೇಷಗಳನ್ನು ವೀಕ್ಷಿಸುವ ಪೂರ್ಣ ಡೈವ್ ಸುಮಾರು 8 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ನಾಲ್ಕು ದಿನಗಳ ಆಮ್ಲಜನಕದ ಪೂರೈಕೆಯೊಂದಿಗೆ ನೀರಿನೊಳಗೆ ಧುಮುಕುವ ಸಾಮರ್ಥ್ಯವನ್ನು ಹೊಂದಿರುವ ಸಬ್ಮರ್ಸಿಬಲ್ ಇದಾಗಿದೆ.
ನಾಪತ್ತೆಯಾಗಿರುವ ಜಲಾಂತರ್ಗಾಮಿಯಲ್ಲಿ ಓಷನ್ಗೇಟ್ ಎಕ್ಸ್ಪೆಡಿಶನ್ಸ್ ಕಂಪನಿಗೆ ಸೇರಿದ್ದು, ಅದರಲ್ಲಿ ಐದು ಜನರಿದ್ದರು, ಒಬ್ಬ ಪೈಲಟ್ ಮತ್ತು ನಾಲ್ವರು ಮಿಷನ್ ಸ್ಪೆಷಲಿಸ್ಟ್ಗಳು ಎಂದು ಹೇಳಲಾಗುತ್ತಿದೆ. ಸಿಬ್ಬಂದಿ ಸೇರಿ ಅದರಲ್ಲಿದ್ದ ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
ಸಬ್ಮರಿನ್ ವೈಶಿಷ್ಟ್ಯವೇನು?
ಇದೊಂದು ಸಂಶೋಧನೆ ಮತ್ತು ಸಮೀಕ್ಷೆಯ ಸಬ್ಮರ್ಸಿಬಲ್ ಆಗಿದ್ದು, ಐದು ಜನರನ್ನು ಒಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ, ಸಾಮಾನ್ಯವಾಗಿ ಪೈಲಟ್ ಮತ್ತು ನಾಲ್ಕು “ಮಿಷನ್ ತಜ್ಞರು” ಅಂದರೆ ಪುರಾತತ್ವಶಾಸ್ತ್ರಜ್ಞರು, ಸಾಗರ ಜೀವಶಾಸ್ತ್ರಜ್ಞರು ಅಥವಾ ಪ್ರವಾಸಿಯಾಗಿ ಅನುಭವವನ್ನು ಪಡೆಯಲು ಇಷ್ಟಪಡುವವರು ಹೋಗಬಹುದಾಗಿದೆ.
ಟೈಟಾನಿಯಂ ಮತ್ತು ಫಿಲಮೆಂಟ್ ಕಾರ್ಬನ್ ಫೈಬರ್ ನಿಂದ ಸಬ್ ಮರಿನ್ನ್ನು ತಯಾರಿಸಲಾಗಿದೆ. 6.7 ಮೀಟರ್ ಉದ್ದ ಹಾಗೂ 10,432 ಕೆಜಿ ತೂಕವನ್ನು ಹೊಂದಿದೆ. ಅಂದರೆ ಸುಮಾರು ಆರು ಸರಾಸರಿ ಗಾತ್ರದ ಕಾರುಗಳಿಗೆ ಸಮನಾಗಿರುತ್ತದೆ ಮತ್ತು 4,000 ಮೀಟರ್ (13,120 ಅಡಿ) ಆಳಕ್ಕೆ ಡೈವಿಂಗ್ ಮಾಡುವ ಸಾಮರ್ಥ್ಯವನ್ನುಈ ಸಬ್ಮರಿನ್ ಹೊಂದಿದೆ.
ಇದರಲ್ಲಿ ವೀಕ್ಷಿಸಲು ಕ್ಯಾಮೆರಾಗಳು, ದೀಪಗಳು ಮತ್ತು ಸ್ಕ್ಯಾನರ್ಗಳ ಬ್ಯಾಟರಿಗಳಿದ್ದ, ಸಂವಹನ ನಡೆಸಲು ಎಲೋನ್ ಮಸ್ಕ್ನ ಸ್ಟಾರ್ಲಿಂಕ್ ಉಪಗ್ರಹ ತಂತ್ರಜ್ಞಾನವನ್ನು ಬಳಸುತ್ತದೆ. ಸಬ್ಮರಿನ್ನಲ್ಲಿ 96 ಗಂಟೆಗಳ ಕಾಲ ಆಮ್ಲಜನಕದ ಪೂರೈಕೆಯನ್ನು ಮಾಡುವಷ್ಟು ಆಮ್ಲಜನಕ ಸಂಗ್ರಹವಿದೆ ಎಂದು ಹೇಳಲಾಗಿದೆ.
ಟೈಟಾನಿಕ್ ಹಡಗು ಎಲ್ಲಿದೆ :
ಟೈಟಾನಿಕ್ ಹಡಗು 1912 ತನ್ನ ಮೊದಲ ಪ್ರಯಾಣದಲ್ಲೇ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿತು. ಈ ದುರಂತದಲ್ಲಿ 1,500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಈ ಹಡಗಿನ ಅವಶೇಷವನ್ನು 1985ರಲ್ಲಿ ಕಂಡುಹಿಡಿಯಲಾಯಿತು.ಈ ಹಡಗನ್ನು ಹುಡುಕಲು ವಿಶೇಷ ಕಾರ್ಯಾಚರಣೆಯನ್ನು ನಡೆಸಲಾಯಿತು. ಹಡಗು ನ್ಯೂಫೌಂಡ್ಲ್ಯಾಂಡ್ನ 600 ಕಿಲೋಮೀಟರ್ಗಳಷ್ಟು ಅಟ್ಲಾಂಟಿಕ್ನ 3,800 ಮೀಟರ್ಗಳಷ್ಟು ಕೆಳಭಾಗದಲ್ಲಿ ಇದೆ.