ಸೋಮವಾರದ ಸುದ್ದಿಯ ಆಗರ: ಇಲ್ಲಿದೆ ಈ ದಿನದ ನ್ಯೂಸ್ ರೌಂಡ್ ಅಪ್
ಫೆನ್ಸಿಂಗ್ʼನ ಹಾಲಿ ವಿಶ್ವ ಚಾಂಪಿಯನ್ ಗೆ ಸೋಲುಣಿಸಿ ಸೆಮಿ ಫೈನಲ್ ಗೆ ಲಗ್ಗೆ ಇಟ್ಟ ಭಾರತ
ಭಾರತದ ಒಲಿಂಪಿಯನ್ ಸಿ ಎ ಭವಾನಿ ದೇವಿ ಅವರು ಫೆನ್ಸಿಂಗ್ ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.
ಸೋಮವಾರ ಚೀನಾದ ವುಕ್ಸಿಯಲ್ಲಿ ನಡೆದ ಏಷ್ಯನ್ ಫೆನ್ಸಿಂಗ್ ಚಾಂಪಿಯನ್ ಶಿಪ್ ನ ಮಹಿಳೆಯರ ಸ್ಪರ್ಧೆಯ ಸೆಮಿ ಫೈನಲ್ಸ್ಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಸೆಮಿಫೈನಲ್ ನಲ್ಲಿ ಭಾರತ ಮತ್ತು ಉಜ್ಬೇಕಿಸ್ತಾನ್ ನ ಝೈನಾಬ್ ದೈಬೆಕೋವಾ ಮುಖಾಮುಖಿಯಾಗಲಿದೆ. ಈ ಮೂಲಕ ಭಾರತ ತನ್ನ ಚೊಚ್ಚಲ ಪದಕ ಗಳಿಸುವುದನ್ನು ಖಚಿತಪಡಿಸಿದೆ.
ಕ್ವಾರ್ಟರ್ ಫೈನಲ್ನಲ್ಲಿ ಭಾರತ ಹಾಲಿ ವಿಶ್ವ ಚಾಂಪಿಯನ್ ಜಪಾನ್ನ ಮಿಸಾಕಿ ಎಮುರಾ ಅವರನ್ನು 15-10 ರಿಂದ ಸೋಲಿಸುವ ಮೂಲಕ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.
2022 ರ ವಿಶ್ವ ಫೆನ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಮಿಸಾಕಿ ಮಹಿಳೆಯರ ಸೇಬರ್ ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು.
ದೆಹಲಿಯಲ್ಲಿ ಮೂರು ದಿನಗಳ ಅಂತಾರಾಷ್ಟ್ರೀಯ ಆಟಿಕೆ ಮೇಳ
ಜುಲೈ 8ರಿಂದ ಅಂತಾರಾಷ್ಟ್ರೀಯ ಆಟಿಕೆ ಮೇಳ ರಾಜಧಾನಿ ದೆಹಲಿಯಲ್ಲಿ ಆರಂಭವಾಗಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಟಾಯ್ ಅಸೋಸಿಯೇಷನ್ ಆಫ್ ಇಂಡಿಯಾ, 14ನೇ ಟಾಯ್ ಬಿಜ್ ಇಂಟರ್ನ್ಯಾಶನಲ್ ಬಿ2ಬಿ ಎಕ್ಸ್ಪೋ 2023, ದಕ್ಷಿಣ ಏಷ್ಯಾದಲ್ಲೇ ಅತಿ ದೊಡ್ಡ ಮೇಳವಾಗಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ಸುಮಾರು 25 ದೇಶಗಳಿಂದ ಕನಿಷ್ಠ 5000 ಖರೀದಿದಾರರು ಹಾಗೂ ಉದ್ಯಮಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದಿದೆ.
ದೆಹಲಿಯ ಪ್ರಗತಿ ಮೈದಾನದಲ್ಲಿ ಈ ಮೇಳ ನಡೆಯಲಿದ್ದು, ಸುಮಾರು 250ಕ್ಕೂ ಹೆಚ್ಚು ಭಾರತೀಯ ಬ್ರ್ಯಾಂಡ್ ಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿವೆ. 20ಕ್ಕೂ ಹೆಚ್ಚು ಜಾಗತಿಕ ಸಂಸ್ಥೆಗಳ ಸಿಇಒಗಳು ಭೇಟಿ ನೀಡಲಿದ್ದಾರೆ.
ಈ ಮೂಲಕ ಭಾರತೀಯ ಆಟಿಕೆ ತಯಾರಕರಿಗೆ ಜಾಗತಿಕ ಪ್ರೇಕ್ಷಕರು ಸಿಗಲಿದ್ದು, ಹೊಸ ಗ್ರಾಹಕರು, ಪಾಲುದಾರರನ್ನು ಆಕರ್ಷಿಸಲು ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಲು ಅವಕಾಶವಾಗಲಿದೆ.
ರಣಜಿ ಟ್ರೋಫಿ: ಒಂದೇ ಗುಂಪಲ್ಲಿ ಕರ್ನಾಟಕ, ತಮಿಳುನಾಡು, ಇಲ್ಲಿದೆ ವೇಳಾಪಟ್ಟಿ
ಕರ್ನಾಟಕ ಹಾಗೂ ತಮಿಳುನಾಡು ಕ್ರಿಕೆಟ್ ತಂಡಗಳು ದೇಶಿ ಪಂದ್ಯಗಳಲ್ಲಿ ಎದುರಾಳಿಗಳಾಗಿ ಕಾದಾಡಿದರೆ ಇದೀಗ 2023-2024ರ ರಣಜಿ ಕ್ರಿಕೆಟ್ ಟ್ರೋಫಿಯಲ್ಲಿ ಒಂದೇ ತಂಡದಿಂದ ಕಣಕ್ಕಿಳಿಯಲಿದೆ.
ಮುಂದಿನ ವರ್ಷ ಅಂದರೆ 2024ರ ಜನವರಿ 5 ರಿಂದ ಮಾರ್ಚ್ 14ರವರೆಗೆ 70 ದಿನಗಳ ಕಾಲ ರಣಜಿ ಟ್ರೋಫಿ ಟೂರ್ನಿ ನಡೆಯಲಿದ್ದು, ಕರ್ನಾಟಕ ಹಾಗೂ ತಮಿಳುನಾಡು ತಂಡಗಳು ಎಲೀಟ್ ವಿಭಾಗದ ಸಿ ಗುಂಪಿನಲ್ಲಿ ಸ್ಪರ್ಧಿಸಲಿವೆ.
ಎಲ್ಲಾ ತಂಡಗಳನ್ನು 5 ಗುಂಪುಗಳಾಗಿ ವಿಂಗಡಿಸಲಾಗಿದೆ.
ಗುಂಪು ಎ: ಸೌರಾಷ್ಟ್ರ, ಜಾರ್ಖಂಡ್, ಮಹಾರಾಷ್ಟ್ರ, ವಿದರ್ಭ, ರಾಜಸ್ಥಾನ, ಹರಿಯಾಣ, ಮಣಿಪುರ.
ಗುಂಪು ಬಿ: ಬಂಗಾಳ, ಆಂಧ್ರ, ಮುಂಬೈ, ಕೇರಳ, ಛತ್ತೀಸ್ಗಢ, ಉತ್ತರ ಪ್ರದೇಶ, ಅಸ್ಸಾಂ, ಬಿಹಾರ.
ಗುಂಪು ಸಿ: ಕರ್ನಾಟಕ, ಪಂಜಾಬ್, ರೈಲ್ವೆ, ತಮಿಳುನಾಡು, ಗೋವಾ, ಗುಜರಾತ್, ತ್ರಿಪುರ, ಚಂಡೀಗಢ
ಗುಂಪು ಡಿ: ಮಧ್ಯಪ್ರದೇಶ, ಉತ್ತರಾಖಂಡ, ಹಿಮಾಚಲ, ಬರ್ದಾ, ದೆಹಲಿ, ಒಡಿಶಾ, ಪುದುಚೇರಿ, ಜಮ್ಮು ಮತ್ತು ಕಾಶ್ಮೀರ
ಪ್ಲೇಟ್ ಗುಂಪು: ನಾಗಾಲ್ಯಾಂಡ್, ಹೈದರಾಬಾದ್, ಮೇಘಾಲಯ, ಸಿಕ್ಕಿಂ, ಮಿಜೋರಾಂ, ಅರುಣಾಚಲ.
ಪ್ರಧಾನಿ ಮೋದಿ ಅಮೆರಿಕ ಪ್ರವಾಸ: ಹೀಗಿದೆ ಕಾರ್ಯಕ್ರಮಗಳ ವಿವರ
ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 21 ರಿಂದ ಜೂನ್ 24ರವರೆಗೆ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಪ್ರಧಾನಿ ಅವರನ್ನು ಸ್ವಾಗತಿಸಲು ಸಾವಿರಾರು ಅನಿವಾಸಿ ಭಾರತೀಯರು ತುದಿಗಾಲಿನಲ್ಲಿ ನಿಂತಿದ್ದಾರೆ.
ಹಾಗಿದ್ರೆ ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳ ವೇಳಾಪಟ್ಟಿ ಇಲ್ಲಿದೆ..
ಜೂನ್ 20ರಂದೇ ಮೋದಿ ಅವರು ಅಮೆರಿಕಗೆ ತೆರಳಲಿದ್ದಾರೆ. ಜೂನ್ 21ರಂದು ಯೋಗ ದಿನಾಚರಣೆ ಹಿನ್ನೆಲಯಲ್ಲಿ ವಿಶ್ವಸಂಸ್ಥೆಯಲ್ಲಿ ಮೋದಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.
ಜೂನ್ 22 ರಂದು ಅಮೆರಿಕ ಸಂಸತ್ತಿನ ಉಭಯ ಸದನಗಳ ಸದಸ್ಯರು ಭಾಗವಹಿಸುವ ಯುಎಸ್ ಕಾಂಗ್ರೆಸ್ ನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಜೂನ್ 23ರಂದು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಗೂ ಪ್ರಮುಖ ಕಂಪನಿಗಳ ಸಿಇಒ ಗಳ ಜತೆ ಸಭೆ ನಡೆಯಲಿದೆ. ನಂತರ ಅಮೆರಿಕದಲ್ಲಿರುವ ಸಾವಿರಾರು ಅನಿವಾಸಿ ಭಾರತೀಯರನ್ನುದ್ದೇಶಿಸಿ ವಾಷಿಂಗ್ಟನ್ ನಲ್ಲಿ ಮಾತನಾಡಲಿದ್ದಾರೆ.