ಗರ್ಭಿಣಿಯಾಗಿದ್ದಾಗ ಸ್ಟ್ರೆಚ್ ಮಾರ್ಕ್ಸ್ ಬೀಳುವುದು ತುಂಬಾನೇ ಸಹಜ, ಕೆಲವರಿಗೆ ಅಷ್ಟಾಗಿ ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಳ್ಳುವುದಿಲ್ಲ, ಅದೇ ಇನ್ನು ಕೆಲವರಿಗೆ ಹೊಟ್ಟೆ ಮೇಲೆ ಕಪ್ಪು ಬಿಳುಪಿನ ಬರೆ ಎದ್ದು ಕಾಣುವಂತೆ ಬಿದ್ದಿರುತ್ತದೆ. ಹೆರಿಗೆಯಾದ ನಂತರವೂ ಕೆಲವೊಬ್ಬರಿಗೆ ಸ್ಟ್ರೆಚ್ ಮಾರ್ಕ್ ಗೆರೆ ಮಾತ್ರ ಹಾಗೇ ಉಳಿದುಕೊಂಡು ಬಿಡುತ್ತೆ. ಅಂತಹ ಸ್ಟ್ರೆಚ್ ಮಾರ್ಕ್ನಿಂದ ಮುಕ್ತಿ ಪಡೆಯಲು ಇಲ್ಲಿದೆ ಮನೆಮದ್ದು.
ತೆಂಗಿನ ಎಣ್ಣೆ:
ತೆಂಗಿನ ಎಣ್ಣೆಯನ್ನು ಸಾಮಾನ್ಯವಾಗಿ ಹಲವಾರು ರೋಗಗಳಿಗೆ ಔಷಧವಾಗಿ ಬಳಕೆ ಮಾಡಲಾಗುತ್ತದೆ. ಚರ್ಮದ ಹಲವು ಸಮಸ್ಯೆಗಳಿಗೆ ತೆಂಗಿನ ಎಣ್ಣೆ ಉತ್ತಮ ಆಯ್ಕೆ. ಇದರಲ್ಲಿ ಅಮಿನೋ ಕೊಬ್ಬಿನಾಮ್ಲವಿದ್ದು, ಇದನ್ನು ಸೇವನೆ ಮಾಡಿದರೆ, ಚರ್ಮದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಸತ್ತ ಚರ್ಮದ ಕೋಶಗಳನ್ನು ತೆಗೆದು ಹೊಸ ಚರ್ಮ ಬರಲು ಸಹಾಯ ಮಾಡುತ್ತದೆ.
ಹರಳೆಣ್ಣೆ:
ಹರಳೆಣ್ಣೆ ಹಲವು ಆರೋಗ್ಕಕರ ಪ್ರಯೋಜನಗಳನ್ನು ಹೊಂದಿದೆ. ಸ್ಟ್ರೆಚ್ ಮಾರ್ಕ್ ಇರುವ ಕಡೆ ಹರಳೆಣ್ಣೆ ಹಚ್ಚಿದರೆ, ಚರ್ಮ ಒಣಗುವುದನ್ನು ತಪ್ಪಿಸಬಹುದು. ಅಲ್ಲದೇ ಚರ್ಮ ಒರಟಾಗುವುದಿಲ್ಲ. ಇನ್ನು ಇದನ್ನು ನೀವು ನಿಯಮಿತವಾಗಿ ಮಾಡುವುದು ಒಳ್ಳೆಯದು.
ಮೊಟ್ಟೆಯ ಬಿಳಿ ಭಾಗ:
ಮೊಟ್ಟೆಯ ಬಿಳಿಭಾಗ ಪ್ರೋಟೀನ್ ಭರಿತವಾಗಿರುತ್ತದೆ. ಇದು ಚರ್ಮದ ಕಲೆ ನಿವಾರಿಸಲು ಸಹಾಯ ಮಾಡುತ್ತೆ. ಜೊತೆಗೆ ಚರ್ಮವು ಹೊಳೆಯುವಂತೆ ಮಾಡುತ್ತೆ. ಸ್ಟ್ರೆಚ್ಮಾರ್ಕ್ ಇರುವ ಕಡೆ ಮೊಟ್ಟೆಯ ಬಿಳಿ ಭಾಗವನ್ನು ಹಚ್ಚಿ. ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ.
ಆಲೋವೆರಾ:
ಆಲೋವೆರಾ ಚರ್ಮದ ಹಲವು ಸಮಸ್ಯೆಗಳಿಗೆ ರಾಮಬಾಣ ಎಂದು ಹೇಳಲಾಗುತ್ತದೆ. ಇದರಲ್ಲಿ, ವಿಟಮಿನ್, ಖನಿಜಾಂಶಗಳು ಸಮೃದ್ಧವಾಗಿದೆ. ನೀವು ಸ್ಟ್ರೆಚ್ ಮಾರ್ಕ್ ಇರುವ ಜಾಗಕ್ಕೆ ಅಲೋವೆರಾವನ್ನು ಹಚ್ಚಿ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ ಅಥವಾ ತೊಳೆಯಿರಿ.
ಆಲಿವ್ ತೈಲ:
ಆಲಿವ್ ತೈಲದಲ್ಲಿ ವಿಟಮಿನ್ ಎ, ಡಿ ಮತ್ತು ಇ ಇದೆ. ಈ ಎಲ್ಲಾ ವಿಟಮಿನ್ ಗಳು ಚರ್ಮದ ಆರೋಗ್ಯಕ್ಕೆ ಉತ್ತಮ. ಇದು ಚರ್ಮದಲ್ಲಿನ ಸತ್ತ ಕೋಶಗಳನ್ನು ಕಿತ್ತು ಹಾಕಿ, ಚರ್ಮವನ್ನು ಮೊಶ್ಚಿರೈಸ್ ಮಾಡುತ್ತದೆ. ಸ್ಟ್ರೆಚ್ ಮಾರ್ಕ್ ಕಾರಣದಿಂದ ತುರಿಕೆ ಉಂಟಾಗುತ್ತದೆ. ಇದರಿಂದ ಮುಕ್ತಿ ಪಡೆಯಲು ಆಲಿವ್ ಆಯಿಲ್ ಬಳಕೆ ಮಾಡಿ.
ನಿಂಬೆ ರಸ:
ತಾಜಾ ನಿಂಬೆ ಹಣ್ಣನ್ನು ಕತ್ತರಿಸಿ ರಸ ತೆಗೆದು ಅದನ್ನು ಕಲೆಗಳ ಮೇಲೆ ನಿಧಾನವಾಗಿ ಹಚ್ಚಿ. 10-12 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಚರ್ಮವನ್ನು ತೊಳೆಯಿರಿ. ಹೀಗೆ ದಿನಕ್ಕೆ ಎರಡು – ಮೂರು ಬಾರಿ ಮಾಡುವುದರಿಂದ ಕಲೆಗಳು ಗಣನೀಯವಾಗಿ ಕಡಿಮೆಯಾಗುತ್ತದೆ.
ಜೇನುತುಪ್ಪ:
ಜೇನುತುಪ್ಪದಲ್ಲಿರುವ ನಂಜುನಿರೋಧಕ ಗುಣವು ಸ್ಟ್ರೆಚ್ಮಾರ್ಕ್ ಕಡಿಮೆ ಮಾಡುತ್ತದೆ. ಹತ್ತಿಯಲ್ಲಿ ಜೇನುತುಪ್ಪವನ್ನು ಅದ್ದಿ, ಸ್ಟ್ರೆಚ್ಮಾರ್ಕ್ ಇರುವ ಜಾಗದಲ್ಲಿ ಇರಿಸಿ, ಅದು ಒಣಗುವವರೆಗೆ ಹಾಗೆ ಬಿಡಿ, ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಅಥವಾ ಜೇನುತುಪ್ಪವನ್ನು ಉಪ್ಪು ಮತ್ತು ಗ್ಲಿಸರಿನ್ನೊಂದಿಗೆ ಬೆರೆಸಿ, ಈ ಮಿಶ್ರಣವನ್ನು ಸ್ಟ್ರೆಚ್ ಮಾರ್ಕ್ಇರುವ ಜಾಗಕ್ಕೆ ಲೇಪಿಸಿ, ಒಣಗಿದ ನಂತರ ನೀರಿನಿಂದ ತೊಳೆಯಿರಿ.