ಬೆಂಗಳೂರು: ಕಳೆದ ತಿಂಗಳು ದೇಶದ ನೂತನ ಸಂಸತ್ಭವನ ಉದ್ಘಾಟನೆ ಸಮಯದಲ್ಲಿ ಭಾರತೀಯ ರಾಜರ ಸಾಂಸ್ಕೃತಿಕ ಹೆಗ್ಗುರುತು ರಾಜದಂಡವಾದ ಸೆಂಗೋಲ್ ಅನ್ನು ವೈದಿಕ ಧರ್ಮದ ಆಚಾರ್ಯರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರ ಮಾಡಲಾಗಿತ್ತು. ಇದು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದಲ್ಲದೆ ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳು ಮತ್ತು ಎಡಪಂಥೀಯರಿಂದ ವಿರೋಧವೂ ವ್ಯಕ್ತವಾಗಿತ್ತು.
ಇದೀಗ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮಿಳುನಾಡು ಮೂಲದ ಸಂಘನೆಯೊಂದು ಸಾಮಾಜಿಕ ನ್ಯಾಯಕ್ಕಾಗಿ ಸೆಕ್ಯೂಲರ್ ಸೆಂಗೋಲ್ ವಿತರಣೆ ಮಾಡಿದೆ. ತಮಿಳುನಾಡಿನ ಮಧುರೈನ ಮಕ್ಕಳ್ ಸಮುದಾಯ ನಿಧಿ ಪೆರ್ವೈ (ಜನರ ಸಾಮಾಜಿಕ ನ್ಯಾಯ ಮಂಡಳಿ)ಯು ಶನಿವಾರ ಸಂಜೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪೆರಿಯಾರ್ ಅವರ ವಿಗ್ರಹವನ್ನು ಹೊಂದಿರುವ ಸಾಮಾಜಿಕ ನ್ಯಾಯದ ಸೆಂಗೋಲ್ ಅನ್ನು ನೀಡಿ ಗೌರವಿಸಿದೆ. ಸಮುದಾಯ ನಿಧಿ ಪೆರ್ವೈ ಅಧ್ಯಕ್ಷ ಮನೋಹರನ್, ಗಣೇಶನ್ ಸೇರಿದಂತೆ 30ಕ್ಕೂ ಹೆಚ್ಚು ಮಂದಿ ಮುಖಂಡರು ಮುಖ್ಯಮಂತ್ರಿಗಳಿಗೆ ಚಿನ್ನ ಲೇಪಿತ ಸೆಂಗೋಲನ್ನು ವಿತರಣೆ ಮಾಡಿದ್ದಾರೆ.
ಮುಖ್ಯಮಂತ್ರಿಗಳಿಗೆ ಸೆಂಗೋಲ್ ಅನ್ನು ಉಡುಗೊರೆಯಾಗಿ ನೀಡುವ ಮೂಲಕ ಪ್ರಜಾಪ್ರಭುತ್ವದಲ್ಲಿ ಸಾಮಾಜಿಕ ನ್ಯಾಯವನ್ನು ಉಳಿಸಲು ಬಯಸುತ್ತದೆ. ಸಂಘಟನೆಯ ಮುಖ್ಯಸ್ಥರು ತಿಳಿಸಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಇನ್ನು ಸೆಂಗೋಲ್ ಎನ್ನುವುದು ಅಧಿಕಾರ ಮತ್ತು ಶಕ್ತಿಯನ್ನು ಸೂಚಿಸುವ ರಾಜದಂಡ ಅಥವಾ ದಂಡವಾಗಿದೆ. ತಮಿಳು ಸಂಸ್ಕೃತಿಯಲ್ಲಿ, ಇದು ಸದಾಚಾರವನ್ನು ಸೂಚಿಸುತ್ತದೆ. ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಂಸತ್ತಿನ ಕಟ್ಟಡದಲ್ಲಿ ‘ಸೆಂಗೋಲ್’ ಸ್ಥಾಪಿಸಿದ್ದರು. ತಮಿಳುನಾಡಿನ ಐತಿಹಾಸಿಕ ಸೆಂಗೋಲ್ ಅನ್ನು ಆಗಸ್ಟ್ 14, 1947 ರಂದು ಅಧಿಕಾರ ವರ್ಗಾವಣೆಗೆ ಅಧಿಕೃತವಾಗಿ ಬಳಸಲಾಯಿತು. ಲಾರ್ಡ್ ಮೌಂಟ್ಬ್ಯಾಟನ್ ಅವರು ಜವಾಹರಲಾಲ್ ನೆಹರು ಅವರಿಗೆ ಸ್ವಾತಂತ್ರ್ಯವನ್ನು ಸಾಧಿಸುವುದನ್ನು ಸಂಕೇತಿಸಲು ಒಂದು ಚಿಹ್ನೆಯನ್ನು ಆಯ್ಕೆ ಮಾಡಲು ಕೇಳಿಕೊಂಡಿದ್ದರು. ಈ ವೇಳೆ ಸ್ವತಂತ್ರ ಭಾರತದ ಸರ್ಕಾರಕ್ಕೆ ಸಾರ್ವಭೌಮತ್ವದ ವಸ್ತು ಸೂಚಕ ಅಗತ್ಯವಿತ್ತು. ಇಲ್ಲಿ ‘ಸೆಂಗೋಲ್” ಕಲ್ಪನೆ ಬಂದಿತು.
ಸ್ವಾತಂತ್ರ ಬಂದಾಗ ಭಾರತದ ಗವರ್ನರ್-ಜನರಲ್ ಆಗಿದ್ದ ಸಿ. ರಾಜ ಗೋಪಾಲಾಚಾರಿ ಅವರೊಂದಿಗೆ ಜವಾಹರಲಾಲ್ ನೆಹರು ಅವರು ಸಮಾಲೋಚಿಸಿ ತಮಿಳುನಾಡಿನಲ್ಲಿ ಒಬ್ಬ ರಾಜ ಅಧಿಕಾರ ಮುಕ್ತಾಯಗೊಳಿಸಿ ತನ್ನ ಅಧಿಕಾರವನ್ನು ಹಸ್ತಾಂತರ ಮಾಡುವ ತಮಿಳುನಾಡು ರಾಜವಂಶದ ಪದ್ದತಿಯನ್ನು ಅನುಸರಿಸಲು ಶಿಫಾರಸು ಮಾಡಿದರು. ಚೋಳರ ಸೆಂಗೋಲ್ ಸಂಪ್ರದಾಯದಲ್ಲಿ ರಾಜದಂಡವನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ರಾಜಾಜಿಗೆ ನೀಡಲಾಗಿತ್ತು. ಇದಾದ ನಂತರ ಸೆಂಗೋಲ್ ಅಭಿವೃದ್ಧಿ ಮಾಡಿ ವಿತರಣೆ ಮಾಡಲಾಗಿತ್ತು.
ಇತ್ತೀಚೆಗೆ ಉದ್ಘಾಟನೆಗೊಂಡ ಸಂಸತ್ ಭವನದಲ್ಲಿ ಸಭಾಧ್ಯಕ್ಷರ ಆಸನದ ಪಕ್ಕದಲ್ಲಿ ವಿಧ್ಯುಕ್ತವಾಗಿ ರಾಜದಂಡ (ಸೆಂಗೋಲ್) ಅಳವಡಿಸಲಾಗಿದೆ. ಹೊಸ ಸಂಸತ್ ಭವನದಲ್ಲಿ ಇದನ್ನು ಸ್ಥಾಪಿಸುವ ಮೊದಲು, ತಮಿಳುನಾಡಿನ ವಿವಿಧ ಮಠಗಳ ಪ್ರಧಾನ ಅರ್ಚಕರು ಮೋದಿ ಅವರಿಗೆ ಐತಿಹಾಸಿಕ ‘ಸೆಂಗೋಲ್’ ಹಸ್ತಾಂತರಿಸಿದರು. ಅಮೃತ ಕಾಲದ ರಾಷ್ಟ್ರೀಯ ಚಿಹ್ನೆಯಾಗಿ ಸೆಂಗೋಲ್ ಅನ್ನು ಅಳವಡಿಸಿಕೊಳ್ಳುವ ನಿರ್ಧಾರವನ್ನು ಪ್ರಧಾನಿ ಮೋದಿ ತೆಗೆದುಕೊಂಡರು. ಆದರೆ ವಿಪಕ್ಷಗಳು ಮೋದಿ ಅವರು ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಬಲವನ್ನು ಹೆಚ್ಚಿಸಿಕೊಳ್ಳಲು ಮತ್ತು ಆ ಮೂಲಕ ನೆಲೆ ಊರಲು ಸೆಂಗೋಲ್ ನ್ನು ಬಳಸಿಕೊಳ್ಳುತಿದ್ದಾರೆ ಎಂದು ಆರೋಪಿಸಿದ್ದವು.