ನಮ್ಮ ಚರ್ಮದ ಆರೈಕೆ ಮಾಡುವಲ್ಲಿ ವಿಟಮಿನ್ ಇ ಪಾತ್ರ ತುಂಬಾನೇ ದೊಡ್ಡದು. ತ್ವಚೆಯ ಆರೈಕೆಯಲ್ಲಿ ವಿಟಮಿನ್ ಇ ಎಣ್ಣೆಯನ್ನು ಬಹುತೇಕರು ಬಳಸುತ್ತಾರೆ. ಆದರೆ ಸರಿಯಾದ ರೀತಿಯಲ್ಲಿ ಬಳಸುವುದಿಲ್ಲ. ವಿಟಮಿನ್-ಇ ಅನ್ನು ಬಳಸುವ ಸರಿಯಾದ ವಿಧಾನ, ಸರಿಯಾದ ಸಮಯವನ್ನು ಇಲ್ಲಿ ತಿಳಿಸಲಾಗಿದೆ.
ವಿಟಮಿನ್ ಇ ಎಣ್ಣೆ ಸ್ಕಿನ್ ನ ಆರೈಕೆಯಲ್ಲಿ ಸಹಾಯ ಮಾಡುತ್ತದೆ. ವಿಟಮಿನ್ ಇ ಯಲ್ಲಿ ಆಂಟಿ-ಆಕ್ಸಿಡೆಂಟ್ ಗಳು ಹೆಚ್ಚಿನ ಪ್ರಮಾಣದ್ದು ಇದು ಚರ್ಮದಲ್ಲಿನ ರಕ್ತದ ಚಲನೆಯನ್ನು ಸುಧಾರಿಸುತ್ತದೆ.
ವಿಟಮಿನ್ ಇ ಯನ್ನು ಮುಖಕ್ಕೆ ಈ ರೀತಿಯಾಗಿ ಬಳಸಿ:
ವಿಟಮಿನ್ ಇ ಬಳಸುವ ಮೊದಲು ಕ್ಲೆನ್ಸರ್ ನಿಂದ ಮುಖವನ್ನು ಸ್ವಚ್ಛಗೊಳಿಸಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆದು ನಂತರ ಶುದ್ಧ ವಿಟಮಿನ್ ಇ ಎಣ್ಣೆಯನ್ನು ಸ್ವಲ್ಪ ಬೇರೆ ಎಣ್ಣೆಯ ಜೊತೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಬೇಕು. 2 ಹನಿ ವಿಟಮಿನ್ ಇ ಎಣ್ಣೆ ಜೊತೆ 10 ಹನಿ ಜೊಜೊಬಾ ಎಣ್ಣೆ, ಬಾದಾಮಿ ಎಣ್ಣೆ ಅಥವಾ ತೆಂಗಿನ ಎಣ್ಣೆ ಬಳಸಿದರೆ ಉತ್ತಮ.
ರಾತ್ರಿ ಮಲಗುವ ಅರ್ಧ ಗಂಟೆ ಮೊದಲು ಇದನ್ನು ಬಳಸಬೇಕು. ಉತ್ತಮ ಫಲಿತಾಂಶಗಳಿಗಾಗಿ ವಾರಕ್ಕೆ ಒಂದು ಅಥವಾ ಎರಡು ಬಾರಿ ಈ ವಿಧಾನವನ್ನು ಮಾಡಬೇಕು.
ಅಲ್ಲದೆ ಮಾತ್ರೆ ರೂಪದಲ್ಲೂ ಕೂಡ ನುಂಗಬಹುದು. ವಿಟಮಿನ್ ಇ ಅನ್ನು ಚರ್ಮದ ವಿಶೇಷ ಆರೈಕೆಗಾಗಿ ಮೌಖಿಕವಾಗಿಯೂ ತೆಗೆದುಕೊಳ್ಳಬಹುದು. ಇವು ದೇಹದ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಬಲ್ಲವು. ತ್ವಚೆಯು ಕಾಂತಿಯುತವಾಗಿ ಹಾಗೂ ಯಂಗ್ ಆಗಿ ಕಾಣುತ್ತದೆ. ಆದರೆ ವಯಸ್ಕರಿಗೆ ವಿಟಮಿನ್ ಇ ಸೇವನೆಯು ದಿನಕ್ಕೆ 15 ಮಿಗ್ರಾಂ ಗಿಂತ ಮೀರಬಾರದು. ವಿಟಮಿನ್ ಇ ಅನ್ನು ಬಳಸುವುದರಿಂದ ಹೈಪರ್ಪಿಗ್ಮೆಂಟೇಶನ್ ಸಮಸ್ಯೆಯನ್ನು ಕಡಿಮೆಯಾಗುತ್ತದೆ. ವಯಸ್ಸಾದ ಲಕ್ಷಣಗಳು ಮತ್ತು ಸುಕ್ಕುಗಳನ್ನು ತಡೆಗಟ್ಟುವಲ್ಲಿ ಇದು ತುಂಬಾ ಸಹಾಯಕವಾಗಿದೆ. ಮೊಡವೆಯ ಕಲೆಗಳ ಸಮಸ್ಯೆಯನ್ನು ಸಹ ಇದು ನಿವಾರಿಸುತ್ತದೆ.
ತುಟಿಯ ಆರೈಕೆಗೆ ಕೂಡ ವಿಟಮಿನ್ ಇ ಸಹಕಾರಿಯಾಗಿದೆ. ಇದು ಒಡೆದ ಮತ್ತು ಒಣ ತುಟಿಗಳ ಸಮಸ್ಯೆಯನ್ನು ದೂರಮಾಡಿ ತುಟಿಗಳನ್ನು ಮೃದುವಾಗಿಸುತ್ತದೆ. ವಿಟಮಿನ್ ಇ ಬಳಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಏಕೆಂದರೆ ಇದರ ಅತಿಯಾದ ಬಳಕೆಯಿಂದ ನಿಮಗೆ ಕೆಲವು ಅಡ್ಡ ಪರಿಣಾಮಗಳೂ ಉಂಟಾಗಬಹುದಾದ ಸಾಧ್ಯತೆ ಎದುರಾಗಬಹುದು.