ಮೇಕೆದಾಟು ಪಾದಯಾತ್ರೆಯ ಸಂದರ್ಭದಲ್ಲಿ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೇರಿದಂತೆ ಹಲವರ ವಿರುದ್ಧ ದಾಖಲಿಸಿದ್ದ ಒಂದು ಪ್ರಕರಣ ಸೇರಿದಂತೆ ಒಟ್ಟು ಐದು ಪ್ರಕರಣಗಳನ್ನು ಶುಕ್ರವಾರ ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ.
ರಾಮನಗರ ಜಿಲ್ಲೆಯ ರಾಮನಗರ ಗ್ರಾಮಾಂತರ, ಸಾತನೂರು ಮತ್ತು ಐಜೂರು ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳ ರದ್ದು ಕೋರಿ ಡಿ ಕೆ ಶಿವಕುಮಾರ್ ಅರ್ಜಿಗಳನ್ನು ಸಲ್ಲಿದ್ದರು. ಈ ಸಂಬಂಧ ಅರ್ಜಿಗಳನ್ನು ಶುಕ್ರವಾರ ವಿಚಾರಣೆ ನಡೆಸಿರುವ ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಮೇಲ್ಮನವಿ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ದಾಖಲಾಗಿದ್ದ ಎಫ್ಐಆರ್ಗಳನ್ನು ರದ್ದುಪಡಿಸಿದೆ.
ಕೋವಿಡ್ ನಿಯಮಗಳನ್ನು ಉಲ್ಲಂಘಿಸದಂತೆ ನಿರ್ದೇಶಿಸಿ ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆಯಡಿ ಅಧಿಸೂಚನೆ ಹೊರಡಿಸಲಾಗಿತ್ತು. ಇದನ್ನು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ ಅಡಿ ಹೊರಡಿಸಿಲ್ಲ. ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕ್ರಮ ಜರುಗಿಸಲು ಸರ್ಕಾರ ಮುಂದಾಗಿದ್ದು, ಅದಕ್ಕೆ ಕಾನೂನಿನಡಿ ಅವಕಾಶವಿಲ್ಲ. ಹಾಗಾಗಿ ಅರ್ಜಿದಾರರ ವಿರುದ್ಧದ ಎಫ್ಐಆರ್ ರದ್ದುಪಡಿಸಲಾಗುತ್ತಿದೆ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.
ಮೇಕೆದಾಟು ಆಣೆಕಟ್ಟು ನಿರ್ಮಾಣ ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷವು 2022ರ ಜನವರಿಯಲ್ಲಿ ಪಾದ್ರೆಯಾತ್ರೆ ನಡೆಸಿತ್ತು. ಆ ಸಂದರ್ಭದಲ್ಲಿ ಕೋವಿಡ್ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ರಾಮನಗರ ಗ್ರಾಮೀಣ ಠಾಣೆಯಲ್ಲಿ ಪ್ರಕರಣದಲ್ಲಿ ದಾಖಲಾಗಿತ್ತು. ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ದಿವಂಗತ ಧ್ರುವನಾರಾಯಣ್, ಟಿ ಬಿ ಜಯಚಂದ್ರ, ಎಚ್ ಆಂಜನೇಯ, ಸಚಿವರಾದ ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ, ಅಂಜಲಿ ನಿಂಬಾಳ್ಕರ್, ಸಲೀಂ ಅಹ್ಮದ್, ಕೆ ರಾಜು, ಡಾ. ರವೀಂದ್ರ, ಕುಸುಮಾ, ಪಾರ್ವತಮ್ಮ ಆರೋಪಿಗಳಾಗಿದ್ದರು. ಈ ಪ್ರಕರಣ ವಜಾಗೊಂಡಿದೆ
ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಪಾದಯಾತ್ರೆ ನಡೆಸಲಾಗಿದೆ ಎಂದು ಹಂತ ಹಂತವಾಗಿ ಹಲವು ಕಡೆ ಡಿ ಕೆ ಶಿವಕುಮಾರ್ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಸಾತನೂರು ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು, ಕನಕಪುರ ಮತ್ತು ಐಜೂರು ಪೊಲೀಸ್ ಠಾಣೆಯಲ್ಲಿ ತಲಾ ಒಂದು ಎಫ್ಐಆರ್ ದಾಖಲಾಗಿತ್ತು. ಈ ಎಲ್ಲ ಪ್ರಕರಣವನ್ನು ಹೈ ಕೋರ್ಟ್ ರದ್ದು ಪಡಿಸಿದೆ. ಹಾಗೆಯೇ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ಗೆ ತಡೆ ನೀಡಿ ವಿಚಾರಣೆಯನ್ನು ಮುಂದೂಡಲಾಗಿದೆ.