ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ 200 ಯೂನಿಟ್ ವಿದ್ಯುತ್ ಉಚಿತ ನೀಡುತ್ತೇವೆ ಎಂದು ಘೋಷಿಸಿತ್ತು. ಈ ನಡುವೆ ಮೇ ತಿಂಗಳ ವಿದ್ಯುತ್ ಬಿಲ್ ತೀವ್ರ ಏರಿಕೆಯಿಂದ ಲಕ್ಷಾಂತರ ಜನರು ಚಿಂತೆಗೀಡಾಗಿದ್ದಾರೆ.
ಕೆಲವು ಮನೆಗಳಿಗೆ ವಿದ್ಯುತ್ ಬಿಲ್ ನಲ್ಲಿ 1000 ರೂ. ಏರಿಕೆಯಾದರೆ ಮತ್ತೆ ಕೆಲವು ಮನೆಗಳಿಗೆ ಬರೋಬ್ಬರಿ 18,000 ರೂ. ಬಿಲ್ ಬಂದಿದೆ. ಹಲವು ಕಡೆಗಳಲ್ಲಿ ಬಿಲ್ ದರ ಕೇವಲ 150-250 ರೂ. ಮಾತ್ರ ಬಂದಿದ್ದು, ಜನರು ಬಿಲ್ ಕಟ್ಟಬೇಕಿದೆಯಾ ಇಲ್ಲವಾ ಎಂದು ತಿಳಿಯದೆ ಕಂಗಾಲಾಗಿದ್ದಾರೆ.
ಕೆಲವು ನಾಗರೀಕರು, ವ್ಯಾಪಾರಿಗಳು ಬಿಲ್ ಕಟ್ಟಲು ನಿರಾಕರಿಸಿದರೆ, ಉದ್ಯಮ ಸಂಘಗಳು ತಮ್ಮ ಸದಸ್ಯರಿಗೆ ಬಿಲ್ ನ ಶೇ.70ರಷ್ಟು ಮೊತ್ತವನ್ನು ಮಾತ್ರ ಪಾವತಿ ಮಾಡಿ, ನಂತರ ಬೇಕಿದ್ದರೆ ಪ್ರತಿಭಟನೆ ನಡೆಸಿ ಎಂದು ಮನವಿ ನೀಡಿದೆ.
ಇದರ ನಡುವೆಯೂ ಗ್ರಾಹಕರು, ವಿದ್ಯುತ್ ಕಾಯಿದೆ 2003 ರ ಅಡಿಯಲ್ಲಿ ಕಳೆದ ಆರು ತಿಂಗಳಲ್ಲಿ ಪಡೆದಿರುವ ಕನಿಷ್ಠ ಬಿಲ್ ಮೊತ್ತವನ್ನು ಮಾತ್ರ ಪಾವತಿಸಬಹುದು. ಈ ಮೂಲಕ ಪ್ರತಿಭಟಿಸುವ ಹಕ್ಕನ್ನು ಕಾನೂನು ಒದಗಿಸಿದೆ. ಇದರಿಂದ ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದಿಲ್ಲ. ಬದಲಿಗೆ ವಿದ್ಯುತ್ ಕಡಿತವಿಲ್ಲದೆ ಗ್ರಾಹಕರು ಉಪವಿಭಾಗದ ಕಚೇರಿಗೆ ಭೇಟಿ ನೀಡಿ ತಮ್ಮ ಪ್ರತಿಭಟನೆಯನ್ನು ಲಿಖಿತವಾಗಿ ದಾಖಲಿಸಬೇಕು ಎಂದು ಎಫ್ಕೆಸಿಸಿಐ ವಿದ್ಯುತ್ ಸಮಿತಿಯ ಮಾಜಿ ಅಧ್ಯಕ್ಷ ಎಂ ಜಿ ಪ್ರಭಾಕರ್ ತಿಳಿಸಿದ್ದಾರೆ.
ನಾಗರೀಕರು ಮೇ ತಿಂಗಳ ಬಿಲ್ ಮೊತ್ತದ ವಿರುದ್ಧ ಕಾನೂನು ರೀತಿಯಲ್ಲಿ ಪ್ರತಿಭಟಿಸಬಹುದು ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.