ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಅಮೆರಿಕಾಗೆ ಅಧಿಕೃತವಾಗಿ ಭೇಟಿ ನೀಡಲಿದ್ದು, ಜೂನ್ 21 ಮೋದಿ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ನೇತೃತ್ವ ವಹಿಸಲಿದ್ದಾರೆ.
ಇದೇ ತಿಂಗಳ 21ರಂದು ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿರುವ ಉತ್ತರ ಲಾನ್ನಲ್ಲಿ ಬೆಳಿಗ್ಗೆ 8 ರಿಂದ 9 ಗಂಟೆಯ ವರೆಗೆ ನಡೆಯಲಿರುವ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ವಿಶ್ವಸಂಸ್ಥೆ ಆಯೋಜಿಸಿರುವ ಯೋಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಹ್ವಾನ ನೀಡಲಾಗಿದೆ.
ಐತಿಹಾಸಿಕ ಯೋಗ ಕಾರ್ಯಕ್ರಮದಲ್ಲಿ ವಿಶ್ವಸಂಸ್ಥೆಯ ಉನ್ನತ ಅಧಿಕಾರಿಗಳು ರಾಯಭಾರಿಗಳು ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಮತ್ತು ಜಾಗತಿಕ ಮತ್ತು ಡಯಾಸ್ಪೊರಾ ಸಮುದಾಯದ ಪ್ರಮುಖ ಸದಸ್ಯರು ಭಾಗವಹಿಸುವ ನಿರೀಕ್ಷೆಯಿದೆ.
ಈ ಬಗ್ಗೆ ಮಾಹಿತಿ ನೀಡಿರುವ ವಿಶ್ವಸಂಸ್ಥೆಯ ಸಮನ್ವಯಕಾರ ಶೋಂಬಿ ಶಾರ್ಪ್ “ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 21 ರಂದು ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಯೋಗ ಅಧಿವೇಶನವನ್ನು ಮುನ್ನಡೆಸಲಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನ ಜಾರಿಗೆ ಬಂದ ಮೇಲೆ ಜಗತ್ತಿನ ಪ್ರತಿಯೊಬ್ಬರೂ ಯೋಗದ ಮಹತ್ವವನ್ನು ತ್ವರಿತವಾಗಿ ಅರ್ಥಮಾಡಿಕೊಂಡಿದ್ದಾರೆ. ತಾವೂ ಅಳವಡಿಸಿಕೊಂಡಿದ್ದಾರೆ. ಅಂತರಾಷ್ಟ್ರೀಯ ಯೋಗ ದಿನವನ್ನು 175 ದೇಶಗಳು ಬಹಳ ಬೇಗನೆ ಬೆಂಬಲಿಸಿದವು. ನಾವು ಅಂತರಾಷ್ಟ್ರೀಯ ಕ್ಯಾಲೆಂಡರ್ ಅನ್ನು ನೋಡಿದಾಗ ಯೋಗದ ಮಹತ್ವ ನಮಗೆಲ್ಲರಿಗೂ ಅರ್ಥವಾಗುತ್ತದೆ. ಯೋಗಕ್ಕೆ ಅಂತರಾಷ್ಟ್ರೀಯ ಮನ್ನಣೆ ನೀಡುವಂತೆ ಒತ್ತಾಯಿಸುತ್ತಿರುವ ಮತ್ತು ಅಂತರಾಷ್ಟ್ರೀಯ ದಿನಾಚರಣೆಯನ್ನು ಬೆಂಬಲಿಸಿದ ಪ್ರಧಾನಿ ಮೋದಿ ನೇತೃತ್ವದಲ್ಲಿ ಈ ಬಾರಿ ಯೋಗ ದಿನಾಚರಣೆ ನಡೆಯುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಹೇಳಿದ್ದಾರೆ.
ಮೊದಲ ಬಾರಿಗೆ ಯೋಗದ ಬಗ್ಗೆ ಪ್ರಸ್ತಾಪ ಮಾಡಿದ್ದ ಮೋದಿ:
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 69 ನೇ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗದ ಪ್ರಸ್ತಾಪವನ್ನು ಮೊದಲು ಪರಿಚಯಿಸಿದರು. ‘ಯೋಗವು ನಮ್ಮ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಯೋಗವು ಮನಸ್ಸು ಮತ್ತು ದೇಹದ ಏಕತೆಯನ್ನು ಸಾಕಾರಗೊಳಿಸುತ್ತದೆ.ಯೋಗ ಕೇವಲ ವ್ಯಾಯಾಮವಲ್ಲ, ಇದು ನಮ್ಮೊಂದಿಗೆ, ಪ್ರಪಂಚ ಮತ್ತು ಪ್ರಕೃತಿಯ ಏಕತೆಯ ಅರ್ಥವನ್ನು ಕಂಡುಕೊಳ್ಳುವ ಒಂದು ಮಾರ್ಗವಾಗಿದೆ. ನಮ್ಮ ಆರೋಗ್ಯಕ್ಕೂ ಇದು ಉತ್ತಮ ಮಾರ್ಗವಾಗಿದೆ’ ಎಂದು ತಿಳಿಸಿದ್ದರು.