ಸುರಕ್ಷಿತ ಪ್ರಯಾಣವೆಂದರೆ ರೈಲು ಪ್ರಯಾಣ ಎಂಬ ಯೋಚನೆ ಹಲವರಲ್ಲಿತ್ತು ಆದರೆ ಇತ್ತೀಚೆಗೆ ನಡೆದ ಸರಣಿ ರೈಲು ದುರಂತ ಇದನ್ನು ಸುಳ್ಳು ಮಾಡಿದೆ. ಈ ಘಟನೆಯಿಂದಾಗಿ ಟ್ರಾವೆಲ್ ಇನ್ಯುರೆನ್ಸ್ ಕುರಿತ ಮಹತ್ವದ ಚರ್ಚೆ ಮುನ್ನಲೆಗೆ ಬಂದಿದೆ.
ಭಾರತೀಯ ರೈಲ್ವೆ ತೀರಾ ಕಡಿಮೆ ಬೆಲೆಗೆ ಟ್ರಾವೆಲ್ ಇನ್ಷೂರೆನ್ಸ್ ಅವಕಾಶ ನೀಡಿದೆ. ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ರೈಲು ಟಿಕೆಟ್ ಬುಕ್ ಮಾಡುವಾಗ ಟಿಕೆಟ್ ದರಕ್ಕೆ ಹೆಚ್ಚುವರಿಯಾಗಿ 35 ಪೈಸೆ ಕೊಟ್ಟರೆ ಪ್ರತಿ ಪ್ರಯಾಣಿಕರಿಗೆ ಪ್ರಯಾಣ ವಿಮೆ ಪಡೆಯಲು ಅವಕಾಶ ಕಲ್ಪಿಸಿದೆ. ಈ ಸೌಲಭ್ಯದ ಅಡಿಯಲ್ಲಿ ಐಆರ್ ಸಿಟಿಸಿ ರೈಲ್ವೆ ಪ್ರಯಾಣದ ವೇಳೆಯಲ್ಲಿ ಪ್ರಯಾಣಿಕ ಅಪಘಾತದಿಂದ ಮರಣ ಹೊಂದಿದರೆ, ಕಾಯಂ ಅಂಗವೈಕಲ್ಯಕ್ಕೆ ತುತ್ತಾದರೆ ಅಥವಾ ಆಸ್ಪತ್ರೆಗೆ ಸೇರ್ಪಡೆಗೊಂಡರೆ 10ಲಕ್ಷ ರೂ. ತನಕ ವಿಮಾ ಕವರೇಜ್ ಒದಗಿಸುತ್ತದೆ. ಒಡಿಶಾ ರೈಲ್ವೆ ದುರಂತದಲ್ಲಿ ಸಾವನ್ನಪ್ಪಿದವರಿಗೆ ತಲಾ 10ಲಕ್ಷ ರೂ. ವಿಮೆ ಸಿಗಲಿದೆ. ಇನ್ನು ತೀವ್ರ ಗಾಯಗೊಂಡವರಿಗೆ 2ಲಕ್ಷ ರೂ. ಹಾಗೂ ಸಣ್ಣಪುಟ್ಟ ಗಾಯಗೊಂಡವರಿಗೆ 50 ಸಾವಿರ ರೂ. ನೆರವು ದೊರೆಯಲಿದೆ. ಹಾಗಾದರೆ ಈ ಪ್ರಯಾಣ ವಿಮೆ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ.
ವಿಮೆ ಪಡೆಯುವುದು ಹೇಗೆ?
ಈ ಯೋಜನೆ ಐಆರ್ ಸಿಟಿಸಿ ವೆಬ್ ಸೈಟ್ ಅಥವಾ ಅಪ್ಲಿಕೇಷನ್ ಮೂಲಕ ಇ-ಟಿಕೆಟ್ ಬುಕ್ ಮಾಡುವ ಭಾರತೀಯ ನಾಗರಿಕರಿಗೆ ಮಾತ್ರ ಅನ್ವಯಿಸುತ್ತದೆ. ವಿದೇಶಿ ಪ್ರಜೆಗಳು ಈ ಯೋಜನೆ ಪ್ರಯೋಜನ ಪಡೆಯಲು ಅರ್ಹತೆ ಹೊಂದಿಲ್ಲ. ಈ ಸೌಲಭ್ಯವನ್ನು ಸಿನ್ ಎಫ್/ಆರ್ ಎಸಿ/ಸಿಎನ್ ಎಫ್ ಪಾರ್ಟ್ ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ಮಾತ್ರ ನೀಡಲಾಗುತ್ತದೆ. ಟಿಕೆಟ್ ಗಳನ್ನು ಬುಕ್ ಮಾಡಿದ ಬಳಿಕ ಗ್ರಾಹಕರು ಎಸ್ ಎಂಎಸ್ ಹಾಗೂ ಇ-ಮೇಲ್ ಐಡಿ ಮೂಲಕ ವಿಮಾ ಕಂಪನಿಗಳಿಂದ ನೇರವಾಗಿ ಪಾಲಿಸಿ ಮಾಹಿತಿಗಳನ್ನು ಪಡೆಯುತ್ತಾರೆ. ಇದರ ಜೊತೆಗೆ ನಾಮನಿರ್ದೇಶನ ಭರ್ತಿ ಮಾಡುವ ಲಿಂಕ್ ಕೂಡ ಪಡೆಯುತ್ತಾರೆ. ಪಾಲಿಸಿ ಸಂಖ್ಯೆಯನ್ನು ಐಆರ್ ಸಿಟಿಸಿ ಪುಟದಲ್ಲಿರುವ ಟಿಕೆಟ್ ಬುಕ್ಕಿಂಗ್ ಹಿಸ್ಟರಿಯಲ್ಲಿ ನೋಡಬಹುದು. ಇನ್ನು ಈ ಪ್ರಯಾಣ ವಿಮೆಯನ್ನು ಸೀಟ್ ಇಲ್ಲದೆ ಟಿಕೆಟ್ ಬುಕ್ ಮಾಡಿದ 5 ವರ್ಷದ ಕೆಳಗಿನ ಮಕ್ಕಳಿಗೆ ನೀಡಲಾಗದು.
ಈ ವಿಮಾ ಪಾಲಿಸಿಗಳು ವಿಮಾ ಕಂಪನಿಗಳು ಹಾಗೂ ಪ್ರಯಾಣಿಕರ ನಡುವಿನ ಒಪ್ಪಂದವಾಗಿದೆ . ಪ್ರಯಾಣಿಕರು ವಿಮೆ ಆಯ್ಕೆ ಮಾಡಿಕೊಂಡ ಬಳಿಕ ಕ್ಲೇಮ್ ಪ್ರಕ್ರಿಯೆ ಇವರಿಬ್ಬರ ನಡುವೆ ನಡೆಯುತ್ತದೆ. ಅಂದರೆ ವಿಮಾ ಕಂಪನಿ ಪಾಲಿಸಿ ನೀಡಿಕೆ ಹಾಗೂ ಕ್ಲೇಮ್ ಸೆಟ್ಲಮೆಂಟ್ ಗೆ ಜವಾಬ್ದಾರರಾಗಿರುತ್ತಾರೆ. ಪ್ರಯಾಣಿಕರು ಅಥವಾ ನಾಮಿನಿ ರೈಲು ಅಪಘಾತವಾದ 4 ತಿಂಗಳೊಳಗೆ ವಿಮೆ ಕ್ಲೇಮ್ ಮಾಡಬಹುದು. ವಿಮಾ ಕಂಪನಿಯನ್ನು ಸಂಪರ್ಕಿಸುವ ಮೂಲಕ ಅವರು ಈ ಕೆಲಸ ಮಾಡಬಹುದು. ಒಂದು ವೇಳೆ ನಾಮಿನಿಯನ್ನು ಹೆಸರಿಲ್ಲದೆ ಇದ್ದಲ್ಲಿ ಕಾನೂನುಬದ್ಧ ವಾರಸುದಾರರಿಗೆ ಸೆಟ್ಲಮೆಂಟ್ ಮಾಡಬಹುದು.
ಎಷ್ಟು ಕವರೇಜ್ ನೀಡಲಾಗುತ್ತೆ?
*ಮರಣ ಹೊಂದಿದ ಸಂದರ್ಭದಲ್ಲಿ 10ಲಕ್ಷ ರೂ.
*ಕಾಯಂ ಅಂಗವೈಕಲ್ಯ ಹೊಂದಿದ್ದರೆ 10ಲಕ್ಷ ರೂ.
*ಕಾಯಂ ಭಾಗಶಃ ಅಂಗವೈಕಲ್ಯ ಹೊಂದಿದ್ದರೆ 7.5ಲಕ್ಷ ರೂ. ತನಕ
*ಗಾಯಕ್ಕೆ ಆಸ್ಪತ್ರೆ ವೆಚ್ಚ 2ಲಕ್ಷ ರೂ.
*ಮೃತದೇಹದ ಸಾಗಣೆಗೆ 10 ಸಾವಿರ ರೂ.