ಮನುಷ್ಯನ ರೀತಿಯಲ್ಲಿಯೇ ಯೋಚಿಸುವ, ತರ್ಕ ಮಾಡುವಂತಹ ‘ಕೃತಕ ಬುದ್ಧಿಮತ್ತೆ’ (Artificial Intelligence) ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಲಿದೆ.
ಮಾನವನ ಬುದ್ಧಿಶಕ್ತಿಯಿಂದಲೇ ಜನ್ಮತಾಳಿದ ಈ ತಂತ್ರಜ್ಞಾನ ಈಗ ಮಾನವನಿಗೇ ಸವಾಲೆಸೆಯುತ್ತಿದೆ. ಮುಂದಿನ 5-10 ವರ್ಷಗಳಲ್ಲಿ ಇದು ಮನುಷ್ಯನ ಬುದ್ಧಿಶಕ್ತಿ ಸಾಮರ್ಥ್ಯವನ್ನು ಮೀರಿಸುತ್ತದೆ. 50 –100 ವರ್ಷಗಳಲ್ಲಿ ವಿಶ್ವದ ಒಟ್ಟಾರೆ ಜನರ ಬುದ್ಧಿಶಕ್ತಿಯನ್ನು ಒಟ್ಟುಗೂಡಿಸಿದರೂ ಇದಕ್ಕೆ ಸರಿಸಾಟಿಯಾಗಲಾರದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಇಷ್ಟು ತಂತ್ರಜ್ಞಾನದ ಮೇಲೆ ಅವಲಂಬಿತರಾಗಿರುವ ನಾವು ಮೊದಲು ಕೃತಕ ಬುದ್ದಿಮತ್ತೆ ಎಂದರೇನು ಎಂದು ತಿಳಿಯುವ ಅಗತ್ಯತೆಯಿದೆ.
ಕೃತಕ ಬುದ್ಧಿಮತ್ತೆ ಎಂದರೇನು?
ಸರಳವಾಗಿ ಹೇಳುವುದಾದರೆ ಇದು ಒಂದು ಕಂಪ್ಯೂಟರ್ ಪ್ರೋಗ್ರಾಮ್. ಇದು ಇಷ್ಟಕ್ಕೇ ಸೀಮಿತವಾಗಿದ್ದರೆ ಇದರ ಬಗ್ಗೆ ಹೆಚ್ಚು ಚರ್ಚಿಸುವ ಅವಶ್ಯಕತೆ ಇರುತ್ತಿರಲಿಲ್ಲ. ಆದರೆ, ಇದು ಸಾಮಾನ್ಯ ಕಂಪ್ಯೂಟರ್ ಪ್ರೋಗ್ರಾಮ್ ಅಲ್ಲ. ಇನ್ನೂ ಸಾಮಾನ್ಯವಾಗಿ ಹೇಳಬೇಕೆಂದರೆ ಮನುಷ್ಯನ ದೇಹದಲ್ಲಿ ಮೆದುಳು ಹೇಗೆ ಕಾರ್ಯ ನಿರ್ವಹಿಸುತ್ತದೆಯೋ ಹಾಗೆ ಇದನ್ನು ಕೃತಕ ಮೆದಳು ಎಂದು ಹೇಳಬಹುದು.
ತನಗೆ ಒಪ್ಪಿಸಿದ ಮತ್ತು ಪೂರ್ವದಲ್ಲಿ ನಿಗದಿಪಡಿಸಿದ ಕಾರ್ಯಗಳನ್ನು ಗಮನಿಸುತ್ತಾ, ತಪ್ಪುಗಳನ್ನು ತಿದ್ದಿಕೊಳ್ಳುತ್ತಾ, ನಿರಂತರವಾಗಿ ಹೊಸ ವಿಷಯಗಳನ್ನು ತಿಳಿಯುತ್ತಾ ಕಲಿಯುತ್ತಿದೆ. ಪರಿಸ್ಥಿತಿಗಳಿಗೆ ಅನುಗುಣವಾಗಿ ತಾನೇ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದೆ.
ವ್ಯಕ್ತಿಗೆ ಬೇಕಾದ ವಿಷಯವನ್ನು ಸುಲಭವಾಗಿ ಕಣ್ಣ ಮುಂದೆ ತರುವ ಗಣಕಯಂತ್ರಗಳು ಮತ್ತು ಚಾಲಕನ ಸಹಾಯವಿಲ್ಲದೇ ಚಲಿಸುತ್ತಿರುವ ಇಲೋನ್ ಮಸ್ಕನ ಟಸ್ಲಾ ದಂತಹ ವಾಹನಗಳು ಈ ತಂತ್ರಜ್ಞಾನಕ್ಕೆ ಒಂದು ಉದಾಹರಣೆಯಾಗಿದೆ.
ನಿರ್ದಿಷ್ಟ ವ್ಯಕ್ತಿಗೆ ಫೋನ್ ಮಾಡಬೇಕು ಎಂದ ಕೂಡಲೇ ‘ಓಕೆ ಗೂಗಲ್’ ಹೇಗೆ ಮಾಡುತ್ತಿದೆ? ಇದಷ್ಟೇ ಅಲ್ಲ ಕೊರ್ಟೊನಾ, ಸಿರಿಯಂತಹ ಡಿಜಿಟಲ್ ಅಸಿಸ್ಟಂಟ್ಗಳು ಮಾಡುತ್ತಿರುವ ಕೆಲಸವನ್ನು ಗಮನಿಸಿದ್ದೀರಾ?ನಮ್ಮ ಆಲೋಚನೆಗಳನ್ನು ಗ್ರಹಿಸಿ ಅದಕ್ಕೆ ಅನುಗುಣವಾದ ಕೆಲಸಗಳನ್ನು ಮಾಡುತ್ತಿರುವ ಇವೆಲ್ಲಾ ಕೃತಕ ಬುದ್ಧಿಮತ್ತೆಯ ರೂಪಗಳೇ. ಹೀಗೆ ನಮಗೆ ಅರಿವಿಲ್ಲದಂತೆ ಇದು ನಮ್ಮ ಜೀವನಕ್ಕೆ ಕಾಲಿಟ್ಟಿದೆ. ಇದೆಲ್ಲದರ ನಡುವೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್’ನ ಪೂರ್ವಾಪರ ತಿಳಿಯುವುದು ಅಗತ್ಯ.
ಆರ್ಟಿಫಿಶಿಯಲ್ ಇಂಟಲಿಜೆನ್ಸ್’ ಬಳಕೆಗೆ ಬಂದಿದ್ದು ಯಾವಾಗ?
ಕೃತಕ ಬುದ್ಧಿಮತ್ತೆ 1956ರಿಂದಲೇ ಬಳಕೆಗೆ ಬಂದಿದೆ. ಎಲ್ಐಎಸ್ಪಿ ಎನ್ನುವ ಪ್ರೊಗ್ರಾಮಿಂಗ್ ಲಾಂಗ್ವೇಜ್ ಅಭಿವೃದ್ಧಿಪಡಿಸಿದ ಜಾನ್ ಮೆಕ್ಕಾರ್ತಿ ಎನ್ನುವ ವಿಜ್ಞಾನಿ ಇದಕ್ಕೆ ‘ಆರ್ಟಿಫಿಶಿಯಲ್ ಇಂಟಲಿಜೆನ್ಸ್’ ಎಂಬ ಹೆಸರನ್ನು ಸೂಚಿಸಿದರು.
ವಿಶೇಷವೇನು?
ಸುತ್ತಮುತ್ತಲಿನ ಪರಿಸರ, ಪರಿಸ್ಥಿತಿಗಳನ್ನು ಗ್ರಹಿಸಿ ಪ್ರತಿಕ್ರಿಯಿಸುವ ಗುಣ, ಭಾಷೆಗಳನ್ನು ಗುರುತಿಸುವಿಕೆ, ಹೀಗೆ ಸಾಮಾನ್ಯ ಉಪಕರಣಗಳಿಂದ ಹಿಡಿದು ಸ್ವಯಂ ಆಗಿ ಕಲಿಯುವ ಯಂತ್ರವಾಗಿದೆ ಎಂದು ಸರಳ ಭಾಷೆಯಲ್ಲಿ ಹೇಳಬಹುದು.
ಯಾವುದೇ ಒಂದು ಹೊಸ ತಂತ್ರಜ್ಞಾನ ಬೆಳಕಿಗೆ ಬಂದರೆ ಅದರ ಗುಣ ಮತ್ತು ಅವಗುಣ ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ಧಂತೆ ಆದ್ದರಿಂದ ನಾಣ್ಯದ ಎರಡು ಭಾಗಗಳನ್ನು ತಿಳಿಯುವುದು ಅತ್ಯಗತ್ಯ.
ಆರ್ಟಿಫಿಶಿಯಲ್ ಇಂಟಲಿಜೆನ್ಸ್ನ ದುಷ್ಪರಿಣಾಮಗಳು
• ಮಾನವೀಯತೆ ಕೊರತೆ
ಮನುಷ್ಯ ಎಷ್ಟೇ ಕ್ರೂರಿ ಅಥವಾ ನಿರ್ದಯಿಯಾಗಿದ್ದರು ಅದು ಕೇವಲ ಒಂದು ಮಿತಿಯಲ್ಲಿ ಮಾತ್ರ ಕಡೆಗೆ ಎಂತವರಿಗಾದರೂ ಕರುಣೆ ಹುಟ್ಟುತ್ತದೆ. ಆದರೆ ಕೃತಕ ಬುದ್ಧಿಮತ್ತೆಯಲ್ಲಿಅದನ್ನು ಅಪೇಕ್ಷೆಪಡಲು ಸಾಧ್ಯವಿಲ್ಲ. ಅದು ತನಗೆ ನೀಡಿದ ಆಜ್ಞೆಯನ್ನು ಮಾತ್ರ ಪಾಲಿಸುತ್ತದೆ ಅದಕ್ಕೆ ಯಾವುದೇ ಭಾವನೆಗಳ ಹಂಗಿಲ್ಲ.
• ತಪ್ಪುಗಳನ್ನು ಸರಿಪಡಿಸುವ ವಿಧಾನ ತಿಳಿದಿಲ್ಲ
ಆರ್ಟಿಫಿಶಿಯಲ್ ಇಂಟಲಿಜೆನ್ಸ್ಗೆ ತನಗೆ ನೀಡಿರುವ ಕಮಾಂಡಗಳನ್ನು ಅಚ್ಚುಕಟ್ಟಾಗಿ ಮಾಡುವುದಷ್ಟೇ ತಿಳಿದಿದೆ ಅನ್ನು ಬಿಟ್ಟು ತನ್ನ ತಪ್ಪುಗಳನ್ನು ಅರಿತು ಸರಿ ಪಡಿಸಿಕೊಳ್ಳುವ ಸಾಮರ್ಥ್ಯ ಆರ್ಟಿಫಿಶಿಯಲ್ ಇಂಟಲಿಜೆನ್ಸ್’ಇಲ್ಲ.
• ಉದ್ಯೋಗ ನಷ್ಟ
ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನಿಂದ ಜಗತ್ತಿನಲ್ಲಿ ಸುಮಾರು 30ಕೋಟಿಗಿಂತಲೂ ಅಧಿಕ ಜನ ತಮ್ಮ ಉದ್ಯೋಗವನ್ನು ಕಳೆದುಕೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದರೆ ಮತ್ತೊಂದು ವರದಿಯ ಪ್ರಕಾರ ಇದು 9 ಕೋಟಿ ಜನರಿಗೆ ಹೊಸ ಉದ್ಯೋಗವನ್ನು ಕಲ್ಪಿಸಲಿದೆ ಆದರೆ 30 ಕೋಟಿ ಜನರಿಗೆ ತುಲನೆ ಮಾಡಿದರೆ 9 ಕೋಟಿ ಸಂಖ್ಯೆಯು ತುಂಬ ಕಡಿಮೆ ಮಟ್ಟದ್ದಾಗುತ್ತದೆನ ಆದ್ದರಿಂದ ಜಾಗತೀಕ ಮಟ್ಟದಲ್ಲಿ ಉದ್ಯೋಗವನ್ನು ಕಳೆದುಕೊಳ್ಳುವವರ ಸಂಖ್ಯೆ ಗಣನೀಯ ಏರಿಕೆಯಾಗಲಿದೆ.
• ಸ್ವಜನ ಪಕ್ಷಪಾತ ಮತ್ತು ತಾರತಮ್ಯ
ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮಾನವನಿಂದಲೇ ನಿರ್ಮಿಸಲ್ಪಟ್ಟಿದ್ದು ಅದರಲ್ಲಿ ದತ್ತಾಂಶಗಳನ್ನು ಸಂಗ್ರಹಿಸುವ ಮತ್ತು ಆಜ್ಞಾಪಾಲನೆಯ ನಿಯಂತ್ರಣವು ಅದರ ಮಾಲಕನ ಬಳಿಯಿರುತ್ತದೆ. ಒಂದು ವೇಳೆ ಮಾಲಿಕ ತಪ್ಪಾದ ಮಾಹಿತಿ ಅಥವಾ ಆಜ್ಞೆಯನ್ನು ನೀಡಿ ಸ್ವಜನ ಪಕ್ಷಪಾತದಂತಹ ಪ್ರಕ್ರಿಯೆಗಳು ನಡೆಯಬಹುದು. ಇದಕ್ಕೆ ಜ್ವಲಂತ ಉದಾರಣೆಯಾಗಿ ಕಳೆದ ವಾರ ಅಮೇರಿಕಾದಲ್ಲಿ ಕಪ್ಪು ವರ್ಣೀಯ ವ್ಯಕ್ತಿಯನ್ನು ಹೊಟೆಲ್ ನಲ್ಲಿ ಪ್ರವೇಶ ನಿರಾಕರಿಸಿದ ಘಟನೆ ಬೆಳಕಿಗೆ ಬಂದಿದೆ.
• ಸುಳ್ಳು ಸುದ್ದಿ ಮತ್ತು ನಕಲಿ ಖಾತೆಗಳ ಸೃಷ್ಟಿ
ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನಲ್ಲಿ ಸುಳ್ಳು ಸುದ್ದಿ ಮತ್ತು ನಕಲಿ ಖಾತೆಗಳ ಸೃಷ್ಟಿಗೆ ಯಾವುದೇ ಮಿತಿ ಇಲ್ಲದಂತಾಗುತ್ತದೆ. ಅನೇಕ ಖ್ಯಾತನಾಮರ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಯನ್ನು ಸೃಷ್ಠಿಮಾಡಿ ಅದರ ದುರುಪಯೋಗವನ್ನು ಮಾಡಿಕೊಳ್ಳಬಹುದು ಮತ್ತು ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿಯನ್ನು ಸರಾಗವಾಯಿ ಎಲ್ಲಕಡೆಗಳಲ್ಲಿ ಹರಡಬಹುದು.
• ಖಾಸಗಿತನಕ್ಕೆ ಕುತ್ತು
ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನಿಂದ ಜನರ ಖಾಸಗಿತನಕ್ಕೆ ಕುತ್ತು ಬರುವುದಂತು ಖಂಡಿತ ಈಗಾಗಲೇ ಚೀನಾದಂತಹ ದೇಶದಲ್ಲಿ Face Reading Technology ಅನ್ನು ಬಳಸಿ ವ್ಯಕ್ತಿಯ ಚಲನವಲನ ಆತನ ರಾಜಕೀಯ ವಿಚಾರಗಳ ಮೇಲೆ ನಿಗಾ ಇಡಲಾಗುತ್ತಿದೆ. ಇದರಿಂದ ವ್ಯಕ್ತಿ ಸ್ವಾತಂತ್ರ್ಯಕ್ಕೆ ಕುತ್ತು ತಂದಂತಾಗುತ್ತದೆ. ಇನ್ನು ಭಾರತದಂತಹ ದೇಶದಲ್ಲಿ ಸಾಮಾಜಿಕ ಜಾಲತಾಣಗಳ ಅಕೌಂಟ ಹ್ಯಾಕ್ ಆಗುವುದು ಸಾಮಾನ್ಯವಾಗಿದೆ. ಇದೇ ರೀತಿ ಮುಂದುವರೆದರೆ ಮುಂದೆ ಒಂದು ದಿನ ಬ್ಯಾಂಕ ಅಕೌಂಟಗಳು ಮತ್ತು ಖಾಸಗಿ ಮಾಹಿತಿಗಳು ಗೌಪ್ಯತೆಯನ್ನು ಕಳೆದುಕೊಳ್ಳುವುದು ಸಾಮಾನ್ಯವಾಗುತ್ತದೆ. ಆದ್ದರಿಂದಲೇ ಹೇಳುವುದು
ಕೃತಕ ಬುದ್ಧಿಮತ್ತೆ ಏನೇ ಇರಲಿ, ನಿಮ್ಮ ಬುದ್ಧಿ ಕೃತಕವಾಗದಿರಲಿ!