ಭಾರತದ ಕುಸ್ತಿ ಫೆಡರೇಶನ್ ಚುನಾವಣೆಯು ಮುಂದಿನ ತಿಂಗಳು ಜುಲೈ 4 ರಂದು ನಡೆಯಲಿದೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ ಸೋಮವಾರ ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ಮಹೇಶ್ ಮಿತ್ತಲ್ ಕುಮಾರ್ ಅವರನ್ನು ಚುನಾವಣಾಧಿಕಾರಿಯಾಗಿ ಒಲಿಂಪಿಕ್ ಸಂಸ್ಥೆ ನೇಮಿಸಿದೆ.
ಭಾರತೀಯ ಒಲಿಂಪಿಕ್ ಸಂಸ್ಥೆ ಭಾರತದ ಕುಸ್ತಿ ಫೆಡರೇಶನ್ ಕಾರ್ಯಕಾರಿ ಸಮಿತಿಯ ಚುನಾವಣೆಗಳನ್ನು ನಡೆಸಲಿದೆ. ಭಾರತದ ಕುಸ್ತಿ ಫೆಡರೇಶನ್ ಚುನಾವಣೆಗಳನ್ನು ನಡೆಸಲು ನ್ಯಾಯಮೂರ್ತಿ ಮಹೇಶ್ ಮಿತ್ತಲ್ ಕುಮಾರ್ ಅವರನ್ನು ಚುನಾವಣಾಧಿಕಾರಿಯಾಗಿ ನೇಮಿಸಲಾಗುತ್ತಿದೆ. ಜತೆಗೆ ಅವರಿಗೆ ಒಬ್ಬ ಸಹಾಯಕ ಚುನಾವಣಾಧಿಕಾರಿ ಮತ್ತು ಇತರ ಸಿಬ್ಬಂದಿಯನ್ನು ನೇಮಿಸಲು ಅವಕಾಶ ನೀಡಲಾಗುವುದು ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ ತಿಳಿಸಿದೆ.
ಕೇಂದ್ರಾಡಳಿತ ಪ್ರದೇಶಗಳಾದ ಚಂಡೀಗಢ ಮತ್ತು ದೆಹಲಿ ಸೇರಿದಂತೆ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ 25 ಅಂಗಸಂಸ್ಥೆಗಳನ್ನು ಹೊಂದಿದೆ. ಪ್ರತಿ ರಾಜ್ಯ ಘಟಕವು ಇಬ್ಬರು ಪ್ರತಿನಿಧಿಗಳನ್ನು ಕಳುಹಿಸಬಹುದು ಮತ್ತು ಪ್ರತಿ ಪ್ರತಿನಿಧಿಯು ಒಂದು ಮತವನ್ನು ಹೊಂದಿರುತ್ತಾರೆ. ಹಾಗಾಗಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಚುನಾವಣೆಯಲ್ಲಿ 50 ಮತಗಳನ್ನು ಒಳಗೊಂಡಿರುತ್ತದೆ.
ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಸಂವಿಧಾನದ ಪ್ರಕಾರ, ರಾಜ್ಯ ಘಟಕಗಳು ತಮ್ಮ ಕಾರ್ಯಕಾರಿ ಸಂಸ್ಥೆಗಳ ಸದಸ್ಯರಾಗಿರುವ ಪ್ರತಿನಿಧಿಗಳನ್ನು ಮಾತ್ರ ನಾಮನಿರ್ದೇಶನ ಮಾಡಬಹುದು.
ಮಹಿಳಾ ಕುಸ್ತಿ ಪಟುಗಳು ಲೈಗಿಂಕ ದೌರ್ಜನ್ಯ ಆರೋಪ ಮಾಡಿದ್ದರಿಂದಾಗಿ ಬ್ರಿಜ್ಭೂಷಣ್ ಸಿಂಗ್ ಅಧ್ಯಕ್ಷರಾಗಿದ್ದ ಹಾಲಿ ಸಮಿತಿಯನ್ನು ಈಗಾಗಲೇ ನಿಷ್ಕ್ರೀಯಗೊಳಿಸಲಾಗಿತ್ತು.
ಕೆಲ ದಿನಗಳ ಹಿಂದೆ ಚುನಾವಣೆಯನ್ನು ಜೂ.30ರೊಳಗೆ ನಡೆಸುವುದಾಗಿ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದರು. ಸದ್ಯ ಜುಲೈ 4 ಕ್ಕೆ ಚುನಾವಣೆ ನಿಗದಿಯಾಗಿದ್ದು, ಭಾರತೀಯ ಕುಸ್ತಿ ಫೆಡರೇಷನ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಇದರ ಪ್ರಕ್ರಿಯೆಗಳು ನಡೆಯಲಿವೆ. ಆದರೆ ವರದಿಗಳ ಪ್ರಕಾರ, ಚುನಾವಣಾಧಿಕಾರಿ ಮಹೇಶ್ ಮಿತ್ತಲ್ ಚುನಾವಣಾ ದಿನಾಂಕವನ್ನು ಅಂತಿಮಗೊಳಿಸಲಿದ್ದು, ಜುಲೈ 4 ರಂದು ಅಥವಾ ಕೆಲ ದಿನ ತಡವಾಗಿಯೂ ಚುನಾವಣೆ ನಡೆಸಬಹುದು.