ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ವೇ ಟೋಲ್ ರೇಟು ಈಗಲೇ ತುಂಬಾ ಜಾಸ್ತಿ ಎಂದು ಜನ ಸಿಟ್ಟಾಗಿದ್ರು. ಆದ್ರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಟೋಲ್ ದರವನ್ನು ಇನ್ನಷ್ಟು ಹೆಚ್ಚಳ ಮಾಡಿ ಸವಾರರಿಗೆ ಶಾಕ್ ನೀಡಿದೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಶುಲ್ಕವನ್ನು ಸದ್ದಿಲ್ಲದೆ ಶೇ.22ರಷ್ಟು ಏರಿಕೆ ಮಾಡಲಾಗಿದೆ.
ಈ ಹೊಸ ದರ ಜೂ.1ರಿಂದಲೇ ಜಾರಿಯಲ್ಲಿದ್ದರೂ ಯಾರ ಗಮನಕ್ಕೂ ಬಂದಿರಲಿಲ್ಲ. ಫಾಸ್ಟ್ಟ್ಯಾಗ್ ಇರುವ ಕಾರಣ ಇದುವರೆಗೆ ವಾಹನ ಸವಾರರ ಗಮನಕ್ಕೆ ಬಂದಿರಲಿಲ್ಲ. ಇದೀಗ ಶುಲ್ಕ ಏರಿಕೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
3 ತಿಂಗಳಲ್ಲೇ ಟೋಲ್ ಹೆಚ್ಚಳ:
ಟೋಲ್ ಸಂಗ್ರಹಕ್ಕೆ ಸಂಬಂಧಿಸಿದಂತೆ ಆರಂಭದ ದಿನಗಳಿಂದಲೂ ಒಂದಿಲ್ಲೊಂದು ವಿವಾದ ಸೃಷ್ಟಿಯಾಗುತ್ತಲೆ ಇದೆ. ಮೊದಲ ಹಂತದ ರಸ್ತೆಗೆ ಫೆಬ್ರವರಿ 28 ರಿಂದಲೇ ಟೋಲ್ ಶುಲ್ಕ ಸಂಗ್ರಹಣೆಗೆ ಹೆದ್ದಾರಿ ಪ್ರಾಧಿಕಾರ ಮುಂದಾಗಿತ್ತು. ಸಾರ್ವಜನಿಕ ವಿರೋಧದ ಹಿನ್ನೆಲೆಯಲ್ಲಿ ಮಾರ್ಚ್ 14ರಿಂದ ಶುಲ್ಕ ಜಾರಿಗೆ ಬಂತು. ಬಳಿಕ ಏಪ್ರಿಲ್ 1 ರಿಂದ ಪರಿಷ್ಕೃತ ಶುಲ್ಕವನ್ನು ಜಾರಿಗೊಳಿಸುವುದಾಗಿ ಹೆದ್ದಾರಿ ಪ್ರಾಧಿಕಾರ ಪ್ರಕಟಿಸಿತು. ಸಾರ್ವಜನಿಕ ಆಕ್ರೋಶದ ಹಿನ್ನೆಲೆಯಲ್ಲಿ ವಾಪಸ್ ಪಡೆದಿತ್ತು. ಈಗ ಎರಡೂ ತಿಂಗಳ ಬಳಿಕ ಸದ್ದಿಲ್ಲದೆ ದರ ಏರಿಕೆ ಮಾಡಿದೆ. ಶುಲ್ಕ ಏರಿಕೆ ವಿಷಯವನ್ನು ಪ್ರಾಧಿಕಾರದ ಮೂಲಗಳು ಖಚಿತಪಡಿಸಿವೆ.
ಯಾವ್ಯಾವ ವಾಹನಕ್ಕೆ ಎಷ್ಟು ಹಚ್ಚಳವಾಗಿದೆ?
*ಕಾರ್, ವ್ಯಾನ್, ಜೀಪ್ಗಳ ಏಕಮುಖ ಸಂಚಾರ- ರೂ.135 ರಿಂದ ರೂ.165 (30 ರೂ ಹೆಚ್ಚಳ).
*ಲಘು ವಾಹನಗಳು, ಮಿನಿ ಬಸ್ಗಳ ಏಕಮುಖ – ರೂ.220ರಿಂದ ರೂ 270 (50ರೂ ಹೆಚ್ಚಳ).
*ಟ್ರಕ್, ಬಸ್, 2 ಆಕ್ಸೆಲ್ ವಾಹನಗಳ ಏಕಮುಖ ಸಂಚಾರ – ರೂ.460 ರಿಂದ ರೂ.565 (105 ಹೆಚ್ಚಳ).
* 3 ಆಕ್ಸೆಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರ – ರೂ. 500 ರಿಂದ ರೂ.615 (115 ರೂ ಹೆಚ್ಚಳ).
*ಭಾರಿ ವಾಹನಗಳ ಏಕಮುಖ ಸಂಚಾರ -ರೂ. 720 ರಿಂದ ರೂ. 885 (165 ಹೆಚ್ಚಳ).
*7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್ ವಾಹನಗಳ ಏಕಮುಖ ಸಂಚಾರ – ರೂ.880ರಿಂದ ರೂ.1,080 (200 ರೂ.ಹೆಚ್ಚಳ)