ಉದ್ಯೋಗಸ್ಥ ಯುವ ಪೋಷಕರ ಜಗಳದಲ್ಲಿ 8 ತಿಂಗಳ ಮಗು ಪಿಂಕಿ ಭಿಕ್ಷಾಟನೆ ಮಾಡುವವರ ಕೈ ಸೇರುತ್ತಾಳೆ. ಮನೆಗೆಲಸದ ಸಣ್ಣಮ್ಮನ ಹಣದ ಆಸೆ ಅಥವಾ ಅನಿವಾರ್ಯತೆಗೆ ಶಪಿಸಬೇಕೋ, ಮುಗ್ಧತೆಗೆ ಕನಿಕರ ವ್ಯಕ್ತಪಡಿಸಬೇಕೋ ತಿಳಿಯದ ಸ್ಥಿತಿ. ಯಾವುದೋ ದುರ್ಬಲ ಕ್ಷಣಗಳಲ್ಲಿ ಬಹಳಷ್ಟು ಜನ ಗಂಭೀರ ಸಮಸ್ಯೆಗಳ ಸುಳಿಗೆ ಹೇಗೆಲ್ಲ ಸಿಲುಕಿಕೊಳ್ಳುತ್ತಾರೆಂಬುದು ಕಣ್ಣಿಗೆ ಕಟ್ಟುವಂತೆ ʼಪಿಂಕಿ ಎಲ್ಲಿʼ ಚಿತ್ರದಲ್ಲಿ ನೈಜ್ಯವಾಗಿ ತೋರಿಸಲಾಗಿದೆ.
ಕಳೆದುಕೊಂಡ ಮಗುವನ್ನು ಹುಡುಕಲು ಸಣ್ಣಮ್ಮ ಪಡುವ ಪಾಡು, ತನ್ನ ಕ್ರೈಮ್ ಪಾರ್ಟ್ನರ್ನ ಮೇಲೆ ತೋರುವ ಅನುಕಂಪ, ಆಕೆಯ ನಿರ್ಲಕ್ಷ್ಯ ನಡೆ, ಕುಡಿಯುವ ಚಟಕ್ಕೆ ತೋರುವ ಪ್ರತಿರೋಧ, ನಡೆಯಲಾರದ ಸ್ಥಿತಿಯಲ್ಲಿದ್ದಾಗ ಆಕೆಯನ್ನೂ ಕರುಣೆಯಿಂದ ನೋಡುವ ಬಗೆ, ಆಕೆ ತನ್ನ ಮೊಮ್ಮಗುವನ್ನೇ ಕಳೆದುಕೊಳ್ಳುವಂತೆ ಗೋಳಾಡುವ ಪರಿ, ಕೊನೆಗೂ ಮೊಬೈಲ್ ಆನ್ ಮಾಡಿ ಮಗು ಕೊಂಡೊಯ್ದವರು ಸಿಕ್ಕಿದ್ದಾರೆಂದು ಒಡತಿಗೆ ಹೇಳುವ ಕ್ಷಣಗಳೆಲ್ಲ ನಟನೆ ಎನ್ನಿಸುವುದೇ ಇಲ್ಲ. ಸಣ್ಣಮ್ಮನ ನೈಜ ನಟನೆ, ಉತ್ತರ ಕರ್ನಾಟಕದ ಆಡುಭಾಷೆ ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡಿತು.
ಕುತೂಹಲ ಕಾಯ್ದುಕೊಳ್ಳುವ ಪಿಂಕಿ: ಸೈಯ್ಯದ್ ಪಾಳ್ಯದ ಗಲ್ಲಿಯ ಚಿತ್ರಣ, ಬಿಬಿಎಂಪಿ ಕಾರ್ಮಿಕಳೊಬ್ಬಳ ಅಸಹಾಯಕತೆ, ಕದ್ದ ಮಗುವನ್ನು ಮಾರಾಟ ಮಾಡಲೊಪ್ಪದೇ ಸಾಕಿ ಬೆಳೆಸಬೇಕೆಂಬ ಉಮೇದು ಚಿತ್ರದಲ್ಲಿ ತುಂಬಾ ಉತ್ತಮವಾಗಿ ಮೂಡಿಬಂದಿದೆ. ಬಗೆಬಗೆಯ ಕೋನಗಳಲ್ಲಿ ಚಿತ್ರ ನೋಡುಗರ ಕುತೂಹಲವನ್ನು ಕೊನೆಯವರೆಗೆ ಇಂಟರೆಸ್ಟಿಂಗ್ ಆಗಿ ಕಥೆಯನ್ನು ಕೊಂಡೊಯ್ಯಲಾಗಿದೆ.
ಪಾಂಡವಪುರ ಅಭಿನಯ ಪ್ರಸ್ತುತ ಉದ್ಯೋಗಸ್ಥ ಮಹಿಳೆಯರು ಎದುರಿಸುವ ನಾನಾ ಸಮಸ್ಯೆಗಳ ಎತ್ತಿ ತೋರಿಸಲಾಗಿದೆ. ಕುಟುಂಬದ ಹೆಣಗಾಟವೇನಿದರೂ ಹೆಣ್ಣು ಮಕ್ಕಳದ್ದೇ, ಮಗುವಿನ ಲಾಲನೆ- ಪಾಲನೆಗೆ ಮೀಸಲೆಂಬ ಬೇರೂರಿದ ಮನಸ್ಥಿತಿಯ ಮಧ್ಯೆ ಉದ್ಯೋಗ, ಸ್ವಂತಿಕೆ, ಸ್ವಾವಲಂಬನೆ ಪ್ರತಿಪಾದನೆಯ ಆಲೋಚನೆಯ ಹೆಣ್ಮಗಳೊಬ್ಬಳು ದುಡುಕಿ ಇಡುವ ಅಥವಾ ನಂಬಿ ನಡೆವ ಒಂದು ತಪ್ಪು ಹೆಜ್ಜೆ ಮತ್ತಿನ್ನಾವುದೋ ಅಸ್ಥಿರ, ಅತಂತ್ರ ಸ್ಥಿತಿಯನ್ನು ಆಕೆಗೆ ತಂದೊಡ್ಡುವುದು ಎಂಬುದನ್ನು ಚಿತ್ರದುದ್ದಕ್ಕೂ ಬಿಂದು ಪಾತ್ರದ ಗೋಳಾಟ ವೀಕ್ಷಕರಲ್ಲಿ ಕಣ್ಣೀರು ತರಿಸುವಂತಿದೆ.
ಮನೆಗೆಲಸದವರು ಪಾಲಕರಿಗೆ ಗೊತ್ತಾಗದಂತೆ ಭಿಕ್ಷೆ ಬೇಡುವವರಿಗೆ ಚಿಕ್ಕ ಮಕ್ಕಳನ್ನು ಹಣಕ್ಕಾಗಿ ಬಳಸಿಕೊಳ್ಳುವ ನೈಜ ಘಟನೆಯ ಎಳೆಯೊಂದನ್ನು ತೆರೆ ಮೇಲೂ ನೈಜವಾಗಿ ಚಿತ್ರಿಸುವಲ್ಲಿ ನಿರ್ದೇಶಕ ಮತ್ತು ಚಿತ್ರತಂಡ ಯಶಸ್ವಿಯಾಗಿದ್ದಾರೆ.
ಟಿಪಿಕಲ್ ಗಂಡನ ಪಾತ್ರದಲ್ಲಿ ನಟ ದೀಪಕ್ ಸುಬ್ರಹ್ಮಣ್ಯ, ಎಡಬಿಡಂಗಿ ಬಾಯ್ ಫ್ರೆಂಡ್ ಗಿರೀಶ್ ಪಾತ್ರಕ್ಕೆ ನಟ ಅನೂಪ್ ಶೂನ್ಯ ನ್ಯಾಯ ಒದಗಿಸಿದ್ದಾರೆ.
ಚಿತ್ರದಲ್ಲೆಲ್ಲೂ ನಾಟಕೀಯತೆ, ಫೈಟಿಂಗ್, ಹಾಡುಗಳ ಅಬ್ಬರವಿರದೇ ಸಾಮಾಜಿಕ ಜವಾಬ್ದಾರಿ, ಮಾನವೀಯ ಎಳೆಯೊಂದಿಗೆ ಸಹಜವೆಂಬಂತೆ ಚಿತ್ರ ಮೂಡಿಬಂದಿದೆ. ಕಥೆ, ಸಂಭಾಷಣೆಗಳು ಚುಟುಕಾಗಿ, ಚುರುಕಾಗಿ ಮುಗಿದು ಹೋಗುವುದರಿಂದ ನೋಡುಗರಿಗೆ ಆಗುವ ಎಳೆದಾಟದ ಅಷ್ಟೇನಿಲ್ಲ.
ಎಲ್ಲಾ ಪಾತ್ರಗಳು ನೋಡುಗರನ್ನೂ ತಮ್ಮೊಂದಿಗೆ ಕೊನೆಯವರೆಗೆ ಮನಃಪೂರ್ವಕವಾಗಿ ಒಪ್ಪಿಕೊಳ್ಳುವಂತೆ ಮಾಡಿದೆ.