ಇಂದಿನ ದಿನಗಳಲ್ಲಿ ಕ್ಯಾಲ್ಸಿಯಂ ಕೊರತೆ ಸಾಮಾನ್ಯ ಸಮಸ್ಯೆಯಾಗಿದೆ. ಆಧುನಿಕ ಜೀವನ ಶೈಲಿ, ಆಹಾರ ಪದ್ದತಿ, ಅನಾರೋಗ್ಯಕರ ವಾತಾವರಣಗಳಿಂದಾಗಿ ಜನರು ಕ್ಯಾಲ್ಸಿಯಂ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೇಹದಲ್ಲಿ ಕಾಣಿಸಿಕೊಳ್ಳುವ ಕ್ಯಾಲ್ಸಿಯಂ ಕೊರತೆಯಿಂದಾಗಿ, ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಹಲ್ಲು ಮತ್ತು ಮೂಳೆಗಳು ಬಲಿಷ್ಠವಾಗಲು, ಕೀಲು ನೋವು ತಡೆಗಟ್ಟಲು, ದೇಹದಲ್ಲಿ ರಕ್ತ ಪರಿಚಲನೆ ಸುಗಮವಾಗಲು, ಸ್ನಾಯುಗಳು ಬಲಿಷ್ಠವಾಗಿರಲು, ಹಾರ್ಮೋನು ಮತ್ತು ತೂಕವನ್ನು ಸಮತೋಲನದಲ್ಲಿಡಲು ನಮ್ಮ ದೇಹಕ್ಕೆ ಕ್ಯಾಲ್ಸಿಯಂನ ಅಗತ್ಯವಿರುತ್ತದೆ.
ಕ್ಯಾಲ್ಸಿಯಂ ಕೊರತೆ ಲಕ್ಷಣಗಳು:
ಸ್ನಾಯು ಸೆಳೆತ:
ಸ್ನಾಯು ಸೆಳೆತ ಕ್ಯಾಲ್ಸಿಯಂ ಕೊರತೆಯ ಆರಂಭಿಕ ಲಕ್ಷಣವಾಗಿದೆ. ನಡೆಯುವಾಗ ತೊಡೆ ಮತ್ತು ತೋಳುಗಳಲ್ಲಿ, ಕಂಕುಳಿನಲ್ಲಿ ನೋವು ಕಂಡುಬರುತ್ತದೆ. ಕೈ, ತೋಳು, ಪಾದ, ಕಾಲು ಮತ್ತು ಬಾಯಿಯ ಸುತ್ತ ಜೋಮು ಹಿಡಿದಂತಾಗುವುದು ಹಾಗೂ ಕಚಗುಳಿ ಇಟ್ಟಂತಹ ಸಂವೇದನೆ ಉಂಟುಗುತ್ತದೆ.
ಮೆದುಳಿನ ಸಮಸ್ಯೆ :
ಕ್ಯಾಲ್ಸಿಯಂ ಕೊರತೆಯಿಂದ ಅತ್ಯಧಿಕ ಆಯಾಸ, ಆಲಸ್ಯ ಭಾವನೆ, ಶಕ್ತಿಹೀನತೆ, ಏಕಾಗ್ರತೆ ಇಲ್ಲದಿರುವುದು, ಮರೆಗುಳಿತನ ಮತ್ತು ಗೊಂದಲದಂತಹ ಮಾನಸಿಕ ಸಮಸ್ಯೆಗೆ ಕಾರಣವಾಗುತ್ತದೆ.
ಉಗುರು ಮತ್ತು ಚರ್ಮ:
ನಿಮ್ಮ ಕಾಲು ಮತ್ತು ಕೈಗಳ ಉಗುರು ದುರ್ಬಲವಾಗಿದ್ದರೆ ಅಥವಾ ಸುಲಭದಲ್ಲಿ ತುಂಡಾಗಿ ಹೋಗುತ್ತದೆ ಎಂದರೆ ನೀವು ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಿದ್ದೀರಿ ಎಂದು ಅರ್ಥೈಸಿಕೊಳ್ಳಬಹುದು. ಅಥವಾ ನಿಮ್ಮ ಉಗುರುಗಳು ಸರಿಯಾಗಿ ಬೆಳೆಯದಿದ್ದರೆ ಕ್ಯಾಲ್ಸಿಯಂ ಕೊರತೆಯು ಇದಕ್ಕೆ ಕಾರಣವಾಗಿರುತ್ತದೆ. ದೀರ್ಘಕಾಲೀನ ಕ್ಯಾಲ್ಸಿಯಂ ಸಮಸ್ಯೆಯು ಚರ್ಮ ಸಮಸ್ಯೆಯನ್ನು ಉಂಟು ಮಾಡುತ್ತದೆ. ಚರ್ಮ ಒಣಗಿದಂತಿದ್ದು ಕೆರೆತದಿಂದ ಕೂಡಿರುತ್ತದೆ.
ಸಂಧಿಮೂಳೆ ಮೂಳೆಸವೆತ:
ಕ್ಯಾಲ್ಸಿಯಂ ಕೊರತೆಯು ಸಂಧಿಮೂಳೆ ಮತ್ತು ಮೂಳೆಸವೆತಗಳಿಗೆ ಕಾರಣವಾಗುತ್ತದೆ. ಸಂಧಿಮೂಳೆಸವೆತ ಮೂಳೆಯ ಖನಿಜ ಸಾಂದ್ರತೆಯನ್ನು ಕಡಿಮೆ ಮಾಡುವುದರಿಂದ ಮೂಳೆಸವೆತಕ್ಕೆ ಕಾರಣವಾಗುತ್ತದೆ. ಮೂಳೆಸವೆತ ಮೂಳೆಗಳನ್ನು ತೆಳುವಾಗಿಸಿ ಮುರಿತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಹಲ್ಲುಗಳ ಸಮಸ್ಯೆ:
ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯು ಹಲ್ಲುಗಳ ಮೇಲೂ ಪರಿಣಾಮ ಬೀರಬಹುದು. ನಿಮ್ಮ ಹಲ್ಲುಗಳು ಕೊಳೆಯಲು ಪ್ರಾರಂಭಿಸುತ್ತವೆ ಮತ್ತು ಅವು ದಿನದಿಂದ ದಿನಕ್ಕೆ ದುರ್ಬಲವಾಗುವುದರಿಂದ ಕುಳಿಗಳಿಗೆ ಗುರಿಯಾಗುತ್ತವೆ.
ನಿದ್ರಾಹೀನತೆ:
ನೀವು ಕ್ಯಾಲ್ಸಿಯಂ ಕೊರತೆಯನ್ನು ಹೊಂದಿದ್ದರೆ, ದೇಹವು ಅಗತ್ಯವಾದ ಮೆಲಟೋನಿನ್ ಪ್ರಮಾಣವನ್ನು ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ, ರಾತ್ರಿಯಿಡೀ ನಿದ್ರೆ ಬಾರದಿರುವ ಸ್ಥಿತಿ ಉಂಟಾಗುತ್ತದೆ.
ಕ್ಯಾಲ್ಸಿಯಂಯುಕ್ತ ಆಹಾರಗಳು:
ಹಾಲು, ಬಾದಾಮಿ, ಮೊಟ್ಟೆ, ಚೀಸ್, ಮೊಸರು, ರಾಗಿ, ಕಡಲೆ , ಹಸಿರು ಸೊಪ್ಪು ತರಕಾರಿಗಳು, ದ್ವಿದಳ ಧಾನ್ಯಗಳು ಮತ್ತು ಕಾಳುಗಳು, ಒಣ ಹಣ್ಣುಗಳು, ಕಿತ್ತಳೆ ಅಥವಾ ದ್ರಾಕ್ಷಿಯಂತಹ ಸಿಟ್ರಸ್ ಹಣ್ಣುಗಳ ಸೇವನೆಯಿಂದ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಮಟ್ಟವನ್ನು ಕಾಪಾಡಿಕೊಳ್ಳಬಹುದು.