ಬಹುನಿರೀಕ್ಷಿತ ಸೂಪರ್ ಹಿಟ್ ಸಿನಿಮಾಗಳು ಒಟಿಟಿಯಲ್ಲಿ ಈ ವಾರ ಬಿಡುಗಡೆಯಾಗುತ್ತಿದ್ದು, ಒಟಿಟಿ ಸಿನಿಮಾ ಪ್ರಿಯರು ಸಖತ್ ಖುಷಿಯಾಗಿದ್ದಾರೆ. ಅವತಾರ್ 2, 2018 ಹಾಗೂ ಕಸ್ಟಡಿ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳು ಬಿಡುಗಡೆಯಾಗಲಿದೆ.
ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಸೂಪರ್ ಹಿಟ್ ಸಿನಿಮಾಗಳು:
ಅವತಾರ್ 2:
ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಕಲೆಕ್ಷನ್ನಲ್ಲಿ ದಾಖಲೆ ಬರೆದಿದ್ದ ಅವತಾರ್ 2 ಸಿನಿಮಾ ಈಗ ಒಟಿಟಿಗೆ ಬಂದಿದೆ. ಜೇಮ್ಸ್ ಕ್ಯಾಮರಾನ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಕೇವಲ ಇಂಗ್ಲಿಷ್ ಮಾತ್ರವಲ್ಲದೆ ಭಾರತದ ಹಲವು ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆ ಆಗಿತ್ತು. ಡಿಸೆಂಬರ್ 16 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ವಿಶ್ವದಾದ್ಯಂತ ಭಾರಿ ದೊಡ್ಡ ಮೊತ್ತ ಗಳಿಕೆ ಮಾಡಿತ್ತು. ಇದೀಗ ಈ ಸಿನಿಮಾ ಡಿಸ್ನಿ ಹಾಟ್ಸ್ಟಾರ್ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಡಿಸ್ನಿಯಲ್ಲಿ ಉಚಿತವಾಗಿ ಈ ಸಿನಿಮಾವನ್ನು ಇಂಗ್ಲೀಷ್ ಮಾತ್ರವೇ ಅಲ್ಲದೆ ಭಾರತದ ಹಲವು ಭಾಷೆಗಳಲ್ಲಿ ವೀಕ್ಷಿಸಬಹುದಾಗಿದೆ.
2018:
ಮಲಯಾಳಂನಲ್ಲಿ ಸದ್ದು ಮಾಡಿ, ಕಲೆಕ್ಷನ್ ವಿಚಾರದಲ್ಲಿಯೂ ದಾಖಲೆ ಬರೆದ 2018 ಸಿನಿಮಾ ಸಹ ಈ ವಾರ ಒಟಿಟಿಗೆ ಬರಲಿದೆ. ಟೊವಿನೋ ಥಾಮಸ್ ಸೇರಿ ಇನ್ನೂ ಹಲವು ಮಾಲಿವುಡ್ ಕಲಾವಿದರು ನಟಿಸಿರುವ ಈ ಸಿನಿಮಾ ಸೋನಿ ಲಿವ್ ನಲ್ಲಿ ಜೂನ್ 9ರಿಂದ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಅತ್ಯಂತ ಕಡಿಮೆ ಬಜೆಟ್ನಲ್ಲಿ ಅದ್ಭುತವಾದ ಗ್ರಾಫಿಕ್ಸ್ ಗಳನ್ನು ಬಳಸಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ಈ ಸಿನಿಮಾವು ಒಟಿಟಿಯಲ್ಲಿ ಬಿಡುಗಡೆ ಆಗುತ್ತಿರುವುದನ್ನು ವಿರೋಧಿಸಿ ಕೇರಳದ ಚಿತ್ರಮಂದಿರ ಮಾಲೀಕರು ಪ್ರತಿಭಟನೆ ನಡೆಸಿದ್ದಾರೆ.
ಕಸ್ಟಡಿ
ಟಾಲಿವುಡ್ ನಟ ನಾಗಚೈತನ್ಯ ನಾಯಕನಾಗಿ ನಟಿಸಿದ್ದ ಕಸ್ಟಡಿ ಸಿನಿಮಾ ಸಹ ಒಟಿಟಿಗೆ ಬರಲಿದೆ. ಮೇ 12ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ, ಅಲ್ಲಿ ಹೆಚ್ಚು ಸದ್ದು ಮಾಡಿರಲಿಲ್ಲ. ಇದೀಗ ಅಮೆಜಾನ್ ಪ್ರೈಮ್ಗೆ ಸಿನಿಮಾ ಬಂದಿದ್ದು ಜೂನ್ 9 ರಿಂದ ಸಿನಿಮಾ ಸ್ಟ್ರೀಮ್ ಆಗಲಿದೆ. ತೆಲುಗು ತಮಿಳು, ಮಲಯಾಳಂ, ಕನ್ನಡ, ಹಿಂದಿ ಭಾಷೆಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ. ಸಿನಿಮಾದಲ್ಲಿ ನಾಗ ಚೈತನ್ಯ ಜೊತೆಗೆ ಕೃತಿ ಶೆಟ್ಟಿ ನಟಿಸಿದ್ದಾರೆ.
ಬ್ಲಡಿ ಡ್ಯಾಡಿ:
ಬ್ಲಡಿ ಡ್ಯಾಡಿ 2011 ರ ಫ್ರೆಂಚ್ ಸಿನಿಮಾ ನ್ಯೂಟ್ ಬ್ಲಾಂಚೆಯ ರೀಮೆಕ್ ಸಿನಿಮಾವಾಗಿದ್ದು, ಶಾಹಿದ್ ಕಪೂರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಲಡಿ ಡ್ಯಾಡಿ ಸಿನಿಮಾ ಜಿಯೋ ಸಿನಿಮಾದಲ್ಲಿ ಉಚಿತವಾಗಿ ಸ್ಟ್ರೀಮಿಂಗ್ ಆರಂಭಿಸಲಿದೆ. ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಈ ಸಿನಿಮಾ ಜೂನ್ 9ರಿಂದ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಈ ಸಿನಿಮಾಗಳ ಜತೆಗೆ ಇನ್ನೂ ಹಲವು ಸಿನಿಮಾಗಳೂ ಈ ವಾರ ಒಟಿಟಿಯಲ್ಲಿ ರಿಲೀಸ್ ಆಗಲಿವೆ.