ನಾರೀಮಣಿಯರಿಗೂ ಕಿಟಿಕಿಗೂ ಅವಿನಾಭಾವ ಸಂಬಂಧವಿರಬಹುದೇನೋ..!? ಯಾವುದೇ ಪುರುಷನಿಗೆ ಕಿಟಿಕಿಗೆ ಸಂಬಂಧ ಪಟ್ಟಂತೆ ಹೋಲುವ ಯಾವುದೇ ಬಿರುದುಗಳಿಲ್ಲ. ಆದರೆ ಕಿಟಿಕಿ ಕಾಮಾಕ್ಷಿ, ಕಿಂಡಿ ಕನಕಮ್ಮ, ವಿಂಡೋ ವಿನ್ಸಿಯಾ, ಕರ್ಟನ್ ಕೈರಾಬೀ, ಗವಾಕ್ಷಿ ಗಾಯತ್ರಿ, ಇತ್ಯಾದಿ ವ್ಯಂಗ್ಯ ನಾಮಾವಳಿಗಳು ಇವೆ.
ನಿಜ..ರಸ್ತೆಯಲ್ಲಿಯೋ,ಅಂಗಳದಲ್ಲಿಯೋ ಏನಾದರೂ ಶಬ್ದವಾದರೆ ಗಂಡಸರು ಪೇಪರ್ ಓದುತ್ತಾ ಇದ್ದರೆ, ಟಿ.ವಿ. ವೀಕ್ಷಿಸುತ್ತಿದ್ದರೆ ಅಲುಗಾಡಲಾರರು. ಅದೇ ಹೆಣ್ಣುಮಕ್ಕಳು ಅಡುಗೆ ಕೋಣೆಯ ಕಿಟಕಿಯಿಂದಲೋ, ಶಯನಗೃಹದ ಕಿಟಿಕಿಯಿಂದಲೋ, ಸ್ನಾನ ಮಾಡುತ್ತಿದ್ದರೆ ಅಲ್ಲಿಯ ಪುಟ್ಟ ಗವಾಕ್ಷಿಯಿಂದಲೋ, ಎಲ್ಲಿಂದ ರಸ್ತೆ, ಅಂಗಳ ಕಾಣುತ್ತದೋ ಅಲ್ಲಿಂದ ಕಣ್ಣು ತೂರಿಸುವರು..,ಸೀರೆ,ನೈಟಿ, ತರಕಾರಿ, ಹಾಲು ಮೊಸರು, ಬಳೆ, ಪ್ಲಾಸ್ಟಿಕ್ ಸಾಮಾಗ್ರಿಗಳು, ಕಸಬರಿಕೆ ಮಾರುವವರು ಬಂದರೆ, ಹಳೆ ಪಾತ್ರೆ, ಕಸ ಕೊಂಡೊಯ್ಯುವವರು ಯಾರೇ ಇರಲಿ ಮೊದಲು ಕಿಟಿಕಿಯಿಂದ ವೀಕ್ಷಿಸಿ ತಮಗೆ ಬೇಕಾದರೆ ಮಾತ್ರ ಮುಂಬಾಗಿಲೋ ಹಿಂಬಾಗಿಲು ತೆಗೆದು ಮುಂದಿನ ಕೆಲಸ ನಿರ್ವಹಿಸುವರೇ ಹೊರತು ಬಾಗಿಲು ತೆಗೆಯಲಾರರು. ಅಕ್ಕಪಕ್ಕದ ಮನೆ, ಎದುರಿನ ಮನೆ, ಹಿಂದಿನ ಮನೆಯ ರಹಸ್ಯ, ಸಂತಸ, ಕದನ ಕೋಲಾಹಲ ಎಲ್ಲವನ್ನೂ ಗುಪ್ತಚರ ಇಲಾಖೆಗಿಂತಲೂ ನಿಖರವಾಗಿ ವೀಕ್ಷಿಸಿ ತೀರ್ಮಾನ ಕೊಡಬಲ್ಲರು..ಕೇವಲ ಕಿಟಿಕಿಯಿಂದಲೋ,ಕಿಟಕಿಯ ತೆರೆಯ ಮರೆಯಿಂದಲೋ..ಇದಂತೂ ಹೆಮ್ಮೆಯ ವಿಷಯ.
ಬಿಡಿ…ಕೇವಲ ಕಿಟಿಕಿಯಿಂದ ವೀಕ್ಷಣೆ ಮಾಡುವುದಷ್ಟರಿಂದಲೇ ಮಹಿಳೆಯರಿಗೂ ಕಿಟಿಕಿಗೂ ಇರುವ ಸಂಬಂಧವನ್ನು ಅಳೆಯುವುದು ಸರಿಯಾ.!!!? ಖಂಡಿತಾ ಒಪ್ಪುವಂತಹ ವಿಷಯವಲ್ಲ. ಮನಸ್ಸಿಗೆ ನೋವಾದಾಗ,ನಿರಾಸೆಯಾದಾಗ, ಅವ್ಯಕ್ತ ಬೇಸರವಾದಾಗ,ಯಾರೊಂದಿಗೂ ಹೇಳಿಕೊಳ್ಳಲಾಗದ ಬೇಸರ,ದುಃಖವಾದಾಗ, ಮನಸ್ಸಿಗೆ ಶೂನ್ಯತಾ ಭಾವ ಆವರಿಸಿದಾಗ ಕಿಟಿಕಿಗೆ ತಲೆಕೊಟ್ಟು ಮನಸಾರೆ ಅಳುವುದೋ, ಕಣ್ಣೀರಿನ ಅಭಿಷೇಕ ಮಾಡುವುದೋ ಅಥವಾ ಮೌನರೋದನವನ್ನು ಹೆತ್ತಮ್ಮನ ಮಡಿಲಿನಷ್ಟೇ ಮಮತೆಯಿಂದ ಸಹಿಸಿಕೊಳ್ಳುವುದು ಕೂಡಾ ಈ ಕಿಟಿಕಿಗಳೇ..
ಧ್ಯಾನಕ್ಕೆ ಕೂತು ಎಲ್ಲವನ್ನೂ ಮರೆತಂತೆ ಎಲ್ಲವೂ ಮರೆತು ಹೋದಂತಾಗುವುದು ಈ ಕಿಟಿಕಿಗಳ ಸ್ಪರ್ಶದಿಂದಲೇ.. ಆ ಸಮಯದಲ್ಲಿ ಕಿಟಿಕಿಯಿಂದ ಯಾವುದೇ ಪ್ರಾಕೃತಿಕ ಸೌಂದರ್ಯವಾಗಲೀ, ಅಕ್ಕಪಕ್ಕದ ಮನೆಗಳ ಆಗುಹೋಗುಗಳಾಗಲೀ ಗೊತ್ತೇ ಆಗದಂತಹ ನೀರವತೆಯನ್ನು, ಸಮಾಧಾನವನ್ನು ಕೊಡುವುದು ಕಿಟಿಕಿಯ ಕಂಬಿಗಳೇ ಎಂದರೆ ತಪ್ಪಾಗಲಾರದು.
ನವನವೀನ ಫ್ಯಾಷನ್ , ಸೀರೆ ಒಡವೆ, ಕೃತಕ ಆಭರಣಗಳನ್ನು ಕಣ್ತುಂಬಿಸಿಕೊಳ್ಳಲು ಈ ಕಿಟಿಕಿಗಳೇ ಸಾಕು. ಸದ್ದಿಲ್ಲದೆ ಅವುಗಳಲ್ಲಿ ನಮ್ಮ ಆಯ್ಕೆಯನ್ನೂ, ಅವುಗಳ ವಿಮರ್ಶೆಯನ್ನೂ ಮಾಡಬಹುದು..,ಹಂಚಿಕೊಳ್ಳಬಹುದಾದರೆ ಇತರರೊಡನೆ ಹಂಚಿಕೊಳ್ಳಬಹುದು. ಇತ್ತೀಚೆಗೆ ಬೇಕಾದರೆ ಯಾರಿಗೂ ತಿಳಿಯದಂತೆ ಭಾವಚಿತ್ರಗಳನ್ನೂ ತೆಗೆದುಕೊಳ್ಳಬಹುದು. ಆಚೆ ಈಚೆಯ ಮನೆಗಳ ಒಳ ಅಲಂಕಾರಗಳನ್ನೂ ನೋಡಿ ತಮ್ಮಲ್ಲೂ ಅಳವಡಿಸಿಕೊಳ್ಳಬಹುದು. ಸಂಕೀರ್ಣ ಕಟ್ಟಡ (apartment)ಗಳಲ್ಲಂತೂ ನಡೆಯುವ ಪ್ರೇಮ ಪ್ರಸಂಗಗಳನ್ನು ಕಿಟಿಕಿಯಿಂದಲೇ ನೋಡಿ ವಿಡಿಯೋಗಳನ್ನೂ ತೆಗೆಯಬಹುದು, ಜೋಡಿಗಳನ್ನು ಜೋಡಿ ಮಾಡುವುದೋ ಅಥವಾ ಇಜ್ಜೋಡು ಮಾಡುವುದೋ ತೀರ್ಮಾನ ತೆಗೆದುಕೊಳ್ಳುವುದು ಮತ್ತೆ ಯೋಚನೆ ಮಾಡಬಹುದು.
ಹೆಂಗೆಳೆಯರ ಕಿಟಿಕಿ ಹರಟೆಗಳು (ಕಟ್ಟೆ ಹರಟೆ,ಪುರಾಣ) ಅಡುಗೆ ಸೀದು ಹೋಗುವವರೆಗೆ ನಡೆಯತ್ತವೆ.
ಎಷ್ಟೋ ಆತಂಕಕಾರಿ ವಿಷಯಗಳನ್ನು ಸೆರೆಹಿಡಿದು ತಕ್ಕ ಶಾಸ್ತಿಯನ್ನೂ ಮಾಡುವತ್ತ ನೆರವಾಗುವಲ್ಲಿ ಈ ನಮ್ಮ ಕಿಟಿಕಿಯ ಮರೆಯಲ್ಲಿರುವ ನಯನಗಳೇ ಮುಖ್ಯ ಪಾತ್ರ ವಹಿಸುತ್ತವೆ.
ಕಿಟಿಕಿಗೆ ಮುತ್ತು ಕೊಡುವಂತೆ ನಿಂತಾಗ ಬರುವ ಪರಿಮಳದಿಂದಲೇ ಯಾವ ಯಾವ ಭಕ್ಷ್ಯಗಳೆಂದು ಊಹಿಸಿ ಅದಕ್ಕಿಂತಲೂ ಉತ್ಕೃಷ್ಟವಾದ ವೈವಿಧ್ಯಮಯ ಪಾಕವು ಸಿದ್ಧವಾಗುವುದು..
ಹೊರಗೆ ಹೋದ ಗಂಡನನ್ನೋ, ಅಪ್ಪನನ್ನೋ, ಮಗನನ್ನೋ, ಮಗಳನ್ನೋ ಅಥವಾ ಮನೆಯ ಸದಸ್ಯರನ್ನು ಸಮಯಕ್ಕೆ ಸರಿಯಾಗಿ ಬಾರದಿದ್ದರೆ ದಾರಿ ಕಾಯುವುದು ಕಿಟಿಕಿಯ ಮುಖಾಂತರವೇ..ಕಾರಣ ಹೆಬ್ಬಾಗಿಲಿನಿಂದ ಪದೇ ಪದೇ ಹೊರಗೆ ಬಂದು ನೋಡಿದರೆ ಅಕ್ಕಪಕ್ಕದ ಕಿಟಿಕಿಯ ಕಣ್ಣುಗಳು ಗಮನಿಸಿ ಇಲ್ಲಸಲ್ಲದ್ದನ್ನು ಊಹಿಸಿ ಪ್ರಚಾರ ಮಾಡಿದರೆ ಮನೆಯ ಗೌರವ ಏನಾಗಬಹುದು..
ಇವೆಲ್ಲಾ ಖಂಡಿತಾ ತೋರಿಸುತ್ತದೆ ಈ ಕಿಟಿಕಿ ಮತ್ತು ಮಹಿಳೆಯರ ನಡುವೆ ಇರುವ ಅತ್ಯುತ್ತಮ ಸಂಬಂಧ.
ಈ ಸಂಬಂಧದ ಜೊತೆ ಮನಸ್ಸಿಗೆ ನಾಟುವ ಒಂದು ಚಂದದ ಘಟನೆಯನ್ನು ಹೆಚ್ಚಿನವರು ಅಲ್ಲಿ-ಇಲ್ಲಿ ಕೇಳಿರಬಹುದು.
ಒಂದು ಪುಟ್ಟ ಸಂಸಾರ. ಆ ಮನೆಯ ಗೃಹಿಣಿಗೆ ತನ್ನ ಮನೆಯ ಮಲಗುವ ಕೋಣೆಯ ಕಿಟಿಕಿಯಿಂದ ನೋಡುವುದಿತ್ತು. ಸಾಮಾನ್ಯ ಪಕ್ಕದ ಮನೆಯವರ ಅಡುಗೆ, ಬಟ್ಟೆಯ ಸ್ವಚ್ಚತೆ, ಇರಿಸರಿಕೆಯನ್ನು ಗಮನಿಸಿ ಟೀಕಿಸುವುದೋ, ವ್ಯಂಗ್ಯವಾಡುವುದೋ,ಹೋಲಿಸಿಕೊಳ್ಳುವುದೋ ಸಾಮಾನ್ಯವಾದ ಹವ್ಯಾಸ. ಹಾಗೆ ನೋಡಿ ಗಂಡನೊಡನೆ “ರೀ..ನೀವು ಯಾವಾಗಲೂ ಆ ಮನೆಯ ಸ್ವಚ್ಚತೆ ಮತ್ತು ಅಂದಚಂದದ ಬಗ್ಗೆ ಹೊಗಳುತ್ತೀರಲ್ವಾ..ನೋಡಿ ಅವಳು ಒಣಗಲು ಹಾಕಿದ ಬಟ್ಟೆಗಳು ಎಷ್ಟು ಕೊಳಕಾಗಿವೆಯೆಂದು..ಛೀ ಅದೇನು ಬಿಳಿ ಬಟ್ಟೆಗಳಂತೂ ನೆಲ ಒರೆಸುವ ಬಟ್ಟೆಯಂತೆ ಇವೆ.” ಎಂದು ಹೇಳಿ ಆತನನ್ನು ಎಳೆದುಕೊಂಡೇ ಕಿಟಿಕಿಯ ಬಳಿ ಹೋದಳು. ಆತನು ಕಿಟಿಕಿ ಹತ್ತಿರ ನಿಂತು ಬೆರಳಿನಿಂದ ಕಿಟಿಕಿಯ ಧೂಳನ್ನು ತುಸು ಒರೆಸಿ ” ನೋಡು..ಆಕೆಯ ಬಟ್ಟೆ ಶುಭ್ರವಾಗಿದೆ. ನಿನ್ನ ಕಿಟಿಕಿಯ ಕೊಳೆಯನ್ನು ಮೊದಲು ತೆಗೆದು ಮತ್ತೆ ಅವಳ ಮನೆಯತ್ತ ನೋಡು..” ಎನ್ನಲು ಆಕೆ ಪೂರ್ತಿ ಕಿಟಿಕಿಯನ್ನು ಒರೆಸಿ ನೋಡಲು ಆಕೆಯ ಬಟ್ಟೆಗಳು ಶುಭ್ರವಾಗಿರುವುದನ್ನು ಅರಿತು ಕೊಂಡಳು. ಅಂದರೆ ನಮ್ಮ ಮನಸ್ಸಿನ ಕಿಟಿಕಿಯನ್ನೂ ಮನೆಯ ಕಿಟಿಕಿಯನ್ನೂ ಹೋಲಿಸಿ ರಚಿಸಿದ ಈ ಪುಟ್ಟ ಕತೆ ತುಂಬಾ ಅರ್ಥವನ್ನು ಕೊಡುತ್ತದೆ.
ಮನೆಯ ಅಥವಾ ಕಛೇರಿಗಳ ಎಲ್ಲಾ ಕಿಟಕಿಗಳನ್ನು ಹೆಣ್ಣುಮಕ್ಕಳೇ ಆಕ್ರಮಿಸಿರುತ್ತಾರೆ. ಅಲ್ಲೂ ಬಹುಶಃ ಹೆಣ್ಣುಮಕ್ಕಳಿಗೆ ಈ ಗಂಡಸರ ಮೇಲಿರುವ ಅಪನಂಬಿಕೆಯೂ ಕಾರಣವಿರಬಹುದು. ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗಿರುವ ಕಿಟಿಕಿಯ ಹಕ್ಕನ್ನು ಗಂಡಸರಿಗೆ ಸ್ವಲ್ಪವೇ ಸ್ವಲ್ಪ ಬಿಟ್ಟುಕೊಟ್ಟರೆ ಅಲ್ಲಿ ಅವರ ಎರಡನೇ ಸಂಸಾರ ಆರಂಭವಾಗಲು ತಳಹದಿ ಹಾಕಿ ಕೊಟ್ಟಂತೆ ಆಗಬಹುದೆಂಬ ದೂ(ದು)ರಾಲೋಚನೆ..ಮತ್ತು ಶೇಕಡಾ ತೊಂಬತ್ತರಷ್ಟು ಸತ್ಯವೆಂದು ಹಲವರ ಅಭಿಪ್ರಾಯ.
ಇಷ್ಟೆಲ್ಲಾ ಒಳಗುಟ್ಟು, ಒಳಾರ್ಥ ಇರುವ ” ಮಹಿಳೆ ಮತ್ತು ಕಿಟಿಕಿ ” ಎಂದೂ ತೀರದ ಸಂಬಂಧಗಳನ್ನು ಅಲ್ಲಗಳೆಯುವುದು ಸರಿಯೇ…!!!???
Relation between window and women explained shortly in a real frame
Thank you dear..