ತೆಲಂಗಾಣದಲ್ಲಿ ವಿಶ್ವದ ಮೊದಲ 3ಡಿ ಪ್ರಿಂಟೆಡ್ ದೇವಾಲಯ ನಿರ್ಮಾಣವಾಗಲಿದೆ. ಸಿದ್ದಿಪೇಟೆ ಜಿಲ್ಲೆಯ ಚಾರ್ವಿತಾ ಮೆಡೋಸ್ನಲ್ಲಿ 3,800 ಚದರ ಅಡಿ ಪ್ರದೇಶದಲ್ಲಿ ಈ ದೇವಾಲಯ ನಿರ್ಮಿಸಲಾಗುತ್ತಿದೆ. ಹೈದರಾಬಾದ್ ಮೂಲದ ಕಟ್ಟಡ ನಿರ್ಮಾಣ ಕಂಪನಿ ಅಪ್ಸುಜಾ ಇನ್ಫ್ರಾಟೆಕ್ ಮತ್ತು ಸಿಂಪ್ಲಿಫೋರ್ಜ್ ಕ್ರಿಯೇಷನ್ಸ್ ಸಹಯೋಗದಲ್ಲಿ ದೇವಾಲಯ ನಿರ್ಮಾಣ ಕಾರ್ಯ ನಡೆದಿದೆ.
ಅಪ್ಸುಜಾ ಇನ್ಫ್ರಾಟೆಕ್ ವ್ಯವಸ್ಥಾಪಕ ನಿರ್ದೇಶಕ ಹರಿ ಕೃಷ್ಣ ಅವರು ಈ ಬಗ್ಗೆ ಮಾತನಾಡಿ, ದೇವಾಲಯವು ಮೂರು ಗರ್ಭಗುಡಿಗಳನ್ನು ಹೊಂದಿದೆ. ಅದರಲ್ಲಿ ಎರಡು ಮೋದಕ ಆಕಾರದ (ಗಣೇಶನಿಗೆ ಇಷ್ಟವಾದ ಸಿಹಿ) ಗುಡಿಗಳು, ಭಗವಾನ್ ಶಿವನಿಗೆ (ಶಿವಾಲಯ) ಮೀಸಲಾದ ಚೌಕಾಕಾರದ ಸ್ಥಳ ಮತ್ತು ಪಾರ್ವತಿ ದೇವಿಗೆ ಕಮಲದ ಆಕಾರದ ಆಸನ ರಚಿಸಲಾಗಿದೆ ಎಂದಿದ್ದಾರೆ.
ದೇವಾಲಯವನ್ನು ನಿರ್ಮಿಸಲು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 3ಡಿ ತಂತ್ರಜ್ಞಾನ ಮತ್ತು ಸಾಫ್ಟ್ವೇರ್ಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ. ಇನ್ನು ದೇವಾಲಯವು 30 ಅಡಿ ಎತ್ತರದಲ್ಲಿ ಮೂರು ಭಾಗಗಳ ರಚನೆಯಾಗಿದ್ದು, ಜುಲೈ ವೇಳೆಗೆ ನಿರ್ಮಾಣಕಾರ್ಯ ಪೂರ್ಣಗೊಳ್ಳಲಿದೆ.
ಭಾರತದ ಮೊದಲ ಮತ್ತು ದಕ್ಷಿಣ ಏಷ್ಯಾದ ಅತಿದೊಡ್ಡ ರೊಬೊಟಿಕ್ಸ್ ನಿರ್ಮಾಣದ 3ಡಿ ಮುದ್ರಣ ಸೌಲಭ್ಯವನ್ನು ಹೊಂದಿರುವ ಸಿಂಪ್ಲಿಫೋರ್ಜ್ನಿಂದ ಈ ದೇವಾಲಯ 3ಡಿ ಕೆಲವು ನಡೆಯಲಿದೆ, ಅವರ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ವಸ್ತು ಮತ್ತು ಸಾಫ್ಟ್ವೇರ್ ಸಹಾಯದಿಂದ 3ಡಿಯನ್ನು ಮುದ್ರಿಸಲಾಗುತ್ತದೆ. 3ಡಿ ಪ್ರಿಂಟೆಡ್ ದೇವಾಲಯದಿಂದ ತೆಲಂಗಾಣ ರಾಜ್ಯದ ಮುಡಿಗೆ ಹೊಸ ಗರಿಯೊಂದು ಸೇರಿದಂತಾಗುತ್ತದೆ