ಇತ್ತೀಚಿನ ದಿನಗಳಲ್ಲಿ ಸಿಗರೇಟು ತಂಬಾಕು ಸೇವನೆ ಎಂಬುದು ಫ್ಯಾಷನ್ ಆಗಿಹೋಗಿದೆ. ದೃಶ್ಯಮಾಧ್ಯಮಗಳಲ್ಲಿ ಯುವ ಜನತೆಯನ್ನು ಆಕರ್ಷಿಸಿ ದಾರಿ ತಪ್ಪಿಸುವ ಜಾಹಿರಾತು ದಿನೇ ದಿನೇ ಹೆಚ್ಚುತ್ತಿವೆ. ಇಂದಿನ ಯುವಜನತೆ ಧೂಮಪಾನದ ಮೋಜಿಗೆ ಬಲಿಯಾಗಿ ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ.
ದಾರಿ ತಪ್ಪುತ್ತಿರುವ ಯುವಜನತೆಯಲ್ಲಿ ಜಾಗೃತಿ ಮೂಡಿಸಿ, ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಮೇ 31ನ್ನು ವಿಶ್ವ ತಂಬಾಕು ನಿಗ್ರಹ ದಿನವಾಗಿ 1987ರಲ್ಲಿ ಘೋಷಿಸಿತು. ಸಿಗರೇಟ್, ಸಿಗಾರ್, ಬೀಡಿ, ಹುಕ್ಕಾ ಸೇರಿದಂತೆ ಎಲ್ಲ ರೀತಿಯ ತಂಬಾಕು ಉತ್ಪನ್ನಗಳ ಅಪಾಯವನ್ನು ಜನರ ಮುಂದಿಟ್ಟು, ಕನಿಷ್ಠ ಒಂದು ದಿನವಾದರೂ ಅವುಗಳಿಂದ ದೂರ ಇಡುವಂತೆ ಪ್ರೇರಣೆ ನೀಡುವುದು ಈ ದಿನದ ಮುಖ್ಯ ಉದ್ದೇಶ.
ವಿಶ್ವ ತಂಬಾಕು ನಿಷೇಧ ದಿನದ ಸಂದೇಶ (ಥೀಮ್):
ಪ್ರತೀ ವರ್ಷವೂ ವಿಭಿನ್ನ ಆಲೋಚನೆಯಿಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ವಿಶ್ವ ತಂಬಾಕು ರಹಿತ ದಿನದ ಥೀಮ್ ಏನೆಂದರೆ ʼನಮಗೆ ಆಹಾರ ಬೇಕು, ತಂಬಾಕಲ್ಲʼ ಎಂಬುದಾಗಿದೆ.
ಪ್ರಪಂಚದಲ್ಲಿ ಪ್ರತಿವರ್ಷ ತಂಬಾಕಿನಿಂದ 60 ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ. . ಭಾರತದಲ್ಲಿ ಪ್ರತಿ ಸೆಕೆಂಡಿಗೆ ಒಬ್ಬ ವ್ಯಕ್ತಿ, ಒಂದು ದಿನಕ್ಕೆ 3750 ಮತ್ತು ವರ್ಷದಲ್ಲಿ 13.5 ಲಕ್ಷ ಜನ ತಂಬಾಕು ಸೇವನೆಯಿಂದ ಸಾಯುತ್ತಿದ್ದಾರೆ. 90% ಬಾಯಿಯ ಕ್ಯಾನ್ಸರ್ ತಂಬಾಕಿನಿಂದ ಬರುತ್ತದೆ. 90% ಶ್ವಾಸಕೋಶದ ಕ್ಯಾನ್ಸರ್ ಧೂಮಪಾನದಿಂದ ಬರುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಪ್ರತಿವರ್ಷ ವಿಶ್ವದಾದ್ಯಂತ 12 ಲಕ್ಷ ಜನ ಸಾಯುತ್ತಾರೆ. ಈ ಪೈಕಿ 6 ಲಕ್ಷ ಜನರು ಧೂಮಪಾನ ಮಾಡದೇ ಹೋದರೂ, ಧೂಮಪಾನಿಗಳ ಹೊಗೆ ಸೇವಿಸಿ ಅಪಾಯಕ್ಕೆ ಈಡಾಗುತ್ತಿದ್ದಾರೆ. ಭಾರತ ದೇಶದಲ್ಲಿ ಮುಖ್ಯವಾಗಿ ಗುಜರಾತ್, ಮಹಾರಾಷ್ಟç, ಆಂಧ್ರಪ್ರದೇಶ, ಕರ್ನಾಟಕದಲ್ಲಿ ತಂಬಾಕು ಬೆಳೆಯಲಾಗುತ್ತದೆ.
ವಿಶ್ವ ತಂಬಾಕು ವಿರೋಧಿ ದಿನ:
ಪ್ರಪಂಚದಾದ್ಯಂತ ಪ್ರತಿ ವರ್ಷ ಮೇ 31 ರಂದು ಈ ದಿನವನ್ನು ಆಚರಿಸಲಾಗುತ್ತದೆ. ತಂಬಾಕು ಸೇವನೆಯಿಂದಾಗುವ ಅಪಾಯಗಳು ಹಾಗೂ ತಡೆಗಟ್ಟುವ ಕ್ರಮದ ಬಗ್ಗೆ ಜಾಗತಿಕ ಗಮನ ಸೆಳೆಯಲು 1987ರಲ್ಲಿ ಡಬ್ಲ್ಯೂಎಚ್ಒ ಸದಸ್ಯ ರಾಷ್ಟ್ರಗಳಿಂದ ವಿಶ್ವ ತಂಬಾಕು ರಹಿತ ದಿನವನ್ನು ಮೊದಲ ಬಾರಿ ಆಚರಿಸಲಾಗಿತ್ತು.
ಇತಿಹಾಸ ಮತ್ತು ಮಹತ್ವ:
1987ರಲ್ಲಿ, ವಿಶ್ವ ಆರೋಗ್ಯ ಅಸೆಂಬ್ಲಿಯು ಡಬ್ಲ್ಯೂಎಚ್ಎ40.38 ರೆಸಲ್ಯೂಶನ್ ಅನ್ನು ಅಂಗೀಕರಿಸಿತು, ಅಲ್ಲದೆ, 1988 ಏಪ್ರಿಲ್ 7 ಅನ್ನು ʼವಿಶ್ವ ಧೂಮಪಾನ ನಿಷೇಧ ದಿನʼ ಎಂದು ಕರೆ ನೀಡಿತು. 1988ರಲ್ಲಿ, ಡಬ್ಲ್ಯೂಎಚ್ಎ42.19 ನಿರ್ಣಯವನ್ನು ಅಂಗೀಕರಿಸಲಾಯಿತು, ಪ್ರತಿ ವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲು ಕರೆ ಅಂದು ನೀಡಲಾಯಿತು.
ಈ ವಾರ್ಷಿಕ ಆಚರಣೆಯು ತಂಬಾಕು ಬಳಕೆಯ ಅಪಾಯಗಳು ಮಾತ್ರವಲ್ಲದೆ ತಂಬಾಕು ಕಂಪನಿಗಳ ವ್ಯಾಪಾರ ಅಭ್ಯಾಸಗಳು, ತಂಬಾಕು ಸಾಂಕ್ರಾಮಿಕದ ವಿರುದ್ಧ ಹೋರಾಡಲು ಡಬ್ಲ್ಯೂಎಚ್ಒ ಕ್ರಮಗಳು ಮತ್ತು ಈ ಕುರಿತು ಪ್ರಪಂಚದಾದ್ಯಂತ ಜನರು ತಮ್ಮ ಹಕ್ಕನ್ನು ಪಡೆಯಲು ಏನು ಮಾಡಬಹುದು ಎಂಬುದರ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.
ಈ ದಿನದಂದು, ತಂಬಾಕು ನಿಯಂತ್ರಣವನ್ನು ಉತ್ತೇಜಿಸಲು ವಿಶ್ವದಾದ್ಯಂತ ವಿವಿಧ ಚಟುವಟಿಕೆಗಳು ಮತ್ತು ಅಭಿಯಾನಗಳನ್ನು ಆಯೋಜಿಸಲಾಗುತ್ತದೆ. ಸಾರ್ವಜನಿಕ ಜಾಗೃತಿ ಅಭಿಯಾನಗಳು, ಶಾಲೆಗಳು ಮತ್ತು ಸಮುದಾಯಗಳಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳು, ಆರೋಗ್ಯ ತಪಾಸಣೆ ಮತ್ತು ನೀತಿ ಪ್ರತಿಪಾದನೆಯಂತಹ ಕೆಲಸಗಳೂ ನಡೆಯುತ್ತವೆ.
ಆ ಮೂಲಕ ತಂಬಾಕು ಸೇವನೆಯ ಅಪಾಯಗಳ ಬಗ್ಗೆ ಜನರಿಗೆ ತಿಳಿಸುವುದು, ನಿಲ್ಲಿಸುವ ಪ್ರಯತ್ನಗಳನ್ನು ಬೆಂಬಲಿಸುವುದು ಮತ್ತು ಯುವಕರು ತಂಬಾಕು ಅಭ್ಯಾಸವನ್ನು ಪ್ರಾರಂಭಿಸುವುದನ್ನು ತಡೆಯುವುದು ಮುಂತಾದ ಕೆಲಸಗಳನ್ನು ಮಾಡಲಾಗುತ್ತದೆ