ಭವಿಷ್ಯದ ದೃಷ್ಠಿಯಿಂದ ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡಾ ಹಣವನ್ನು ಉಳಿತಾಯ ಮಾಡಲು ಬಯಸುತ್ತಾರೆ. ಉಳಿತಾಯದ ವಿಚಾರ ಬಂದಾಗ ಸುರಕ್ಷಿತವಾಗಿ ಹೂಡಿಕೆ ಮಾಡುವುದು ಎಲ್ಲರ ಅಲೋಚನೆಯಾಗಿರುತ್ತದೆ. ಸುರಕ್ಷತೆಯೊಂದಿಗೆ ಅಧಿಕ ರಿಟರ್ನ್ಸ್ ಕೂಡಾ ಮುಖ್ಯವಾಗಿರುತ್ತದೆ. ಆದರಿಂದ ಸುರಕ್ಷಿತ ಹೂಡಿಕೆ ಮಾಡಲು ಪಿಪಿಎಫ್ ಉತ್ತಮ ಆಯ್ಕೆಯಾಗಿದೆ.
ಪಿಪಿಎಫ್:
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ದೀರ್ಘಾವಧಿಯವರೆಗೆ ಹಣವನ್ನು ಉಳಿಸುವುದು ಮತ್ತು ಅಪಾಯ-ಮುಕ್ತ ಹೂಡಿಕೆಯ ಮಾರ್ಗಗಳಲ್ಲಿ ಒಂದಾಗಿದೆ. ಈ ಖಾತೆಯನ್ನು ತೆರೆದ ವರ್ಷದ ಅಂತ್ಯದಿಂದ 15 ವರ್ಷಗಳು ಪೂರ್ಣಗೊಂಡ ನಂತರ ಮೆಚ್ಯೂರಿಟಿ ಹೊಂದುತ್ತದೆ. ಆಗ ಅದನ್ನು ಪಡೆದುಕೊಳ್ಳಬಹುದು.
ಎಸ್ಬಿಐ, ಪಿಎನ್ಬಿ, ಆಂಧ್ರಾ ಬ್ಯಾಂಕ್ ಇತ್ಯಾದಿ ಸರ್ಕಾರಿ ಸ್ವಾಮ್ಯದ ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಗಳಲ್ಲಿ ಪಿಪಿಎಫ್ ಖಾತೆ ತೆರೆಯಬಹುದು. ನೀವು ಬ್ಯಾಂಕ್ ಕಚೇರಿ ಅಥವಾ ಅಂಚೆ ಕಚೇರಿಗೆ ಹೋಗಿ ಅಲ್ಲಿ ಅರ್ಜಿ ಭರ್ತಿ ಮಾಡುವ ಮೂಲಕ ಪಿಪಿಎಫ್ ಖಾತೆ ತೆರೆಯಲು ಸಾಧ್ಯ. ಆನ್ಲೈನ್ನಲ್ಲೂ ಸುಲಭವಾಗಿ ಪಿಪಿಎಫ್ ಅಕೌಂಟ್ ತೆರೆಯಬಹುದು.
ಆನ್ಲೈನ್ನಲ್ಲಿ ಪಿಪಿಎಫ್ ಅಕೌಂಟ್ ತೆರೆಯುವ ವಿಧಾನ:
*ಸರ್ಕಾರಿ ಸ್ವಾಮ್ಯದ ಬ್ಯಾಂಕಿನಲ್ಲಿ ನೀವು ಖಾತೆ ಹೊಂದಿದ್ದರೆ ಇಂಟರ್ನೆಟ್ ಬ್ಯಾಂಕಿಂಗ್ ವೆಬ್ಸೈಟ್ಗೆ ಲಾಗಿನ್ ಆಗಿರಿ
*ಅಲ್ಲಿ ಪಿಪಿಎಫ್ ಅಕೌಂಟ್ ಎಂಬುದನ್ನು ಆರಿಸಿಕೊಳ್ಳಿ
*ನಿಮ್ಮ ಹೆಸರಿನಲ್ಲಿ ಖಾತೆ ತೆರೆಯುವುದಿದ್ದರೆ ಸೆಲ್ಫ್ ಅಕೌಂಟ್ ಮೇಲೆ ಕ್ಲಿಕ್ ಮಾಡಿ
*ಅಪ್ರಾಪ್ತರ ಹೆಸರಿನಲ್ಲಿ ನೀವು ಖಾತೆ ತೆರೆಯುವುದಾದರೆ ಮೈನರ್ ಅಕೌಂಟ್ ಅನ್ನು ಆರಿಸಿಕೊಳ್ಳಿ. ನಂತರ ಅರ್ಜಿಯಲ್ಲಿ ಅಗತ್ಯ ಮಾಹಿತಿ ತುಂಬಿರಿ
*ಒಂದು ಹಣಕಾಸು ವರ್ಷದಲ್ಲಿ ಎಷ್ಟು ಮೊತ್ತವನ್ನು ಖಾತೆಗೆ ಹಾಕುತ್ತೀರಿ ಎಂಬುದನ್ನು ನಮೂದಿಸಿ ಮತ್ತು ಅಪ್ಲಿಕೇಶನ್ ಸಬ್ಮಿಟ್ ಮಾಡಿ.
*ನಿಮ್ಮ ನೊಂದಾಯಿತ ಮೊಬೈಲ್ ನಂಬರ್ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿದರೆ ನಿಮ್ಮ ಪಿಪಿಎಫ್ ಖಾತೆ ಸಿದ್ಧವಾಗುತ್ತದೆ. ಸ್ಕ್ರೀನ್ ಮೇಲೆ ನಿಮ್ಮ ಪಿಪಿಎಫ್ ಖಾತೆ ನಂಬರ್ ಕಾಣುತ್ತದೆ.
*ನಿಮ್ಮ ನೊಂದಾಯಿತ ಇಮೇಲ್ ವಿಳಾಸಕ್ಕೆ ಈ ಸಂಬಂಧ ಒಂದು ಮೇಲ್ ಬರುತ್ತದೆ. ಅಲ್ಲಿಗೆ ನೀವು ಪಿಪಿಎಫ್ ಖಾತೆ ತೆರೆದಿರುವುದಕ್ಕೆ ದೃಢೀಕರಣ ಬಂದಂತಾಗುತ್ತದೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಬಗ್ಗೆ ಮಾಹಿತಿ:
*ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಯೋಜನೆಯ ಮಾರ್ಗಸೂಚಿಗಳ ಪ್ರಕಾರ, ಚಂದಾದಾರರು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದುವಂತಿಲ್ಲ. ಆದರೆ ಅನೇಕ ಜನರು ಒಂದಕ್ಕಿಂತ ಹೆಚ್ಚು ಪಿಪಿಎಫ್ ಖಾತೆಯನ್ನು ತೆರೆಯುತ್ತಾರೆ.
* ಹಣಕಾಸಿನ ವರ್ಷದಲ್ಲಿ ಕನಿಷ್ಠ ಡೆಪಾಟಿಸ್ 500 ರೂಪಾಯಿ ಆಗಿದೆ, ಗರಿಷ್ಠ ಡೆಪಾಸಿಟ್ 1,50,000 ರೂಪಾಯಿ ಆಗಿದೆ.
* 3ನೇ ಹಣಕಾಸು ವರ್ಷದಿಂದ 6ನೇ ಹಣಕಾಸು ವರ್ಷದವರೆಗೆ ಸಾಲ ಸೌಲಭ್ಯ ಲಭ್ಯವಿದೆ. 7ನೇ ಹಣಕಾಸು ವರ್ಷದ ಬಳಿಕ ಪ್ರತಿ ವರ್ಷವು ಹಣ ವಿತ್ಡ್ರಾ ಮಾಡುವ ಅವಕಾಶವಿದೆ.
* ಖಾತೆಯನ್ನು ತೆರೆದ ವರ್ಷದ ಅಂತ್ಯದಿಂದ ಹದಿನೈದು ಸಂಪೂರ್ಣ ಆರ್ಥಿಕ ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಖಾತೆಯು ಮೆಚ್ಯೂರಿಟಿಯಾಗುತ್ತದೆ.
*ಮೆಚ್ಯೂರಿಟಿ ನಂತರ 5 ವರ್ಷಗಳ ಅವಧಿಗೆ ಖಾತೆಯನ್ನು ವಿಸ್ತರಿಸಬಹುದು.
* ಮೆಚ್ಯೂರಿಟಿ ಬಳಿಕ ಅನಿರ್ದಿಷ್ಟ ಅವಧಿಯವರೆಗೆ ಖಾತೆಯ ಮೊತ್ತವನ್ನು ವಿತ್ಡ್ರಾ ಮಾಡದೆ ಹಾಗೆಯೇ ಉಳಿಸಿಕೊಳ್ಳಬಹುದು, ಬಡ್ಡಿದರ ಲಭ್ಯವಾಗುತ್ತದೆ.
* ಬ್ಯಾಂಕ್ನ ಯಾವುದೇ ಆದೇಶ ಅಥವಾ ತೀರ್ಪಿಗೆ ಪಿಪಿಎಫ್ ಖಾತೆಯ ಮೊತ್ತವು ಒಳಪಡುವುದಿಲ್ಲ.
* ಐಟಿ ಕಾಯ್ದೆಯ ಸೆಕ್ಷನ್ 80-ಸಿ ಅಡಿಯಲ್ಲಿ ಡೆಪಾಸಿಟ್ ಕಡಿತಕ್ಕೆ ಅರ್ಹತೆ ಪಡೆಯುತ್ತದೆ.
* ಖಾತೆಯಲ್ಲಿ ಗಳಿಸಿದ ಬಡ್ಡಿಯು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ -10 ರ ಅಡಿಯಲ್ಲಿ ಆದಾಯ ತೆರಿಗೆಯಿಂದ ಮುಕ್ತವಾಗಿದೆ.