ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ ಪಠ್ಯಪುಸ್ತಕ ಪರಿಷ್ಕರಣೆಗೆ ದೊಡ್ಡ ವಿವಾದವನ್ನೇ ಹುಟ್ಟುಹಾಕಿತ್ತು. ಪಠ್ಯಪುಸ್ತಕ ಪರಿಷ್ಕರಣೆಗೆ ರೋಹಿತ್ ಚಕ್ರತೀರ್ಥ ಮುಂದಾಳತ್ವದಲ್ಲಿ ನಡೆದಿತ್ತು. ಈ ಪರಿಷ್ಕರಣೆಗೆ ರಾಜ್ಯದ ವಿಚಾರವಂತರು ಮತ್ತು ಸಾಹಿತಿಗಳು ಭಾರೀ ವಿರೋಧವನ್ನು ವ್ಯಕ್ತಪಡಿಸಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದು, ಪಠ್ಯಪುಸ್ತಕ ಪರಿಷ್ಕರಣೆಯಾಗಬೇಕು. ಅದಕ್ಕೆ ತಕ್ಷಣವೇ ಸಿಮಿತಿಯನ್ನು ರಚಿಸಬೇಕು ಎಂದು ಸಮಾನ ಮನಸ್ಕ ಒಕ್ಕೂಟದಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಇಂದಿನ ಬದಲಾವಣೆಗೆ ತಕ್ಕಂತೆ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸಲು ಕೂಡಲೇ ಒಂದು ತಜ್ಞರ ಸಮಿತಿಯನ್ನು ರಚಿಸಬೇಕು ಎಂದು ಸಮಾನ ಮನಸ್ಥರ ಒಕ್ಕೂಟದ ಮುಖಂಡರಾದ ಡಾ. ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಪ್ರೊ.ರವಿವರ್ಮಕುಮಾರ್, ಪ್ರೊ. ನಿರಂಜನಾರಾಧ್ಯ, ಡಾ.ವಸುಂಧರ ಭೂಪತಿ ಸೇರಿದಂತೆ ಹಿರಿಯ ಸಾಹಿತಿಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಪಠ್ಯದ ಜೊತೆಗೆ ಬಿಜೆಪಿಯ ಹಲವು ನಿರ್ಧಾರಗಳ ಬದಲಾವಣೆಗೂ ಆಗ್ರಹಿಸಿದ ಸಮಾನ ಮನಸ್ಕರ ಒಕ್ಕೂಟ, ಎನ್ಇಪಿ ಶಿಕ್ಷಣ ವ್ಯವಸ್ಥೆ ತೆಗೆದು, ಹೊಸ ಶಿಕ್ಷಣ ನೀತಿ ರೂಪಿಸಬೇಕು. ಬಿಜೆಪಿ ಸರ್ಕಾರ ಘೋಷಿಸಿರುವ ಪ್ರಶಸ್ತಿಗಳು, ಪುರಸ್ಕಾರಗಳನ್ನು ಕೂಡಲೇ ತಡೆ ಹಿಡಿಯಬೇಕು. ವಿಶ್ವವಿದ್ಯಾಲಯಗಳಲ್ಲಿನ ಸಿಂಡಿಕೇಟ್ ಕೋಮುವಾದಿ ಮನಸ್ಥಿತಿಗಳ ಸದಸ್ಯರ ಬದಲಾಯಿಸಿ, ಜಾತ್ಯತೀತ ನಿಲುವಿನ ಸದಸ್ಯರ ನೇಮಕ ಮಾಡಬೇಕು ಎಂದು ಪ್ರಮುಖ ನಿರ್ಧಾರಗಳ ಬದಲಾವಣೆಗೆ ಆಗ್ರಹ ಮಾಡಿದ್ದಾರೆ.
ಸಾಹಿತಿಗಳಿ ಸಿದ್ದರಾಮಯ್ಯ ಪ್ರತಿಕ್ರಿಯೆ:
ಪಠ್ಯ ಮತ್ತು ಪಾಠಗಳ ಮೂಲಕ ಮಕ್ಕಳ ಮನಸ್ಸನ್ನು ಕಲುಷಿತಗೊಳಿಸಲು ನಡೆಸಿರುವ ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ. ಶೈಕ್ಷಣಿಕ ವರ್ಷ ಆರಂಭ ಆಗಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗದಂತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ.
ಕನ್ನಡ ಹೋರಾಟಗಾರರು, ರೈತ-ಕಾರ್ಮಿಕ-ದಲಿತ ಚಳವಳಿಗಳ ಹೋರಾಟಗಾರರು ಮತ್ತು ಸಾಹಿತಿ, ಬರಹಗಾರರ ಮೇಲೆ ಹಾಕಿರುವ ಸುಳ್ಳು ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಾಗುವುದು.
ಹೊಸ ಶಿಕ್ಷಣ ನೀತಿ ಹೆಸರಲ್ಲಿ ಶಿಕ್ಷಣ ಕ್ಷೇತ್ರವನ್ನು ಗಬ್ಬೆಬ್ಬಿಸಲು ಅವಕಾಶ ಕೊಡುವುದಿಲ್ಲ. ಈ ಬಗ್ಗೆ ಮತ್ತೊಮ್ಮೆ ಪ್ರತ್ಯೇಕವಾದ ಸಭೆ ಕರೆದು ಸಮಗ್ರವಾಗಿ ಚರ್ಚಿಸಿ ನಿಷ್ಠುರವಾದ ಮತ್ತು ಖಚಿತವಾದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು.
ಅನೈತಿಕ ಪೊಲೀಸ್ ಗಿರಿ, ದ್ವೇಷದ ರಾಜಕಾರಣ, ತೇಜೋವಧೆ ಮಾಡುವ ಟ್ರೋಲ್ ಗಳು ಮತ್ತು ಸಾಹಿತಿಗಳಿಗೆ ಬೆದರಿಕೆ ಹಾಕುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಈಗಾಗಲೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಖಡಕ್ ಸೂಚನೆ ನೀಡಿದ್ದೇನೆ.
ಬಿಜೆಪಿ ನಾಯಕರ ಆಕ್ಷೇಪ:
ಪಠ್ಯಪುಸ್ತಕ ಪುನಣ ಪರಿಷ್ಕರಣೆಯ ವಿಚಾರವಾಗಿ ಮಾಜಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿ ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗುವಂಥ ಪಠ್ಯವನ್ನು ನಾವು ಶಾಲಾ ಪಠ್ಯಕ್ರಮದಲ್ಲಿ ಸೇರಿಸಿದ್ದೆವು. ಆದರೆ, ಆ ಪಠ್ಯವನ್ನು ಪುನಃ ಪರಿಷ್ಕರಣೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಹಳೆಯ ಕಾಲದ ಶಿಕ್ಷಣಕ್ರಮದತ್ತ ಮುಖ ಮಾಡಿದೆ ಎಂದಿದ್ದಾರೆ. ಮತ್ತೊಂದೆಡೆ, ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಬಿ.ಸಿ. ಪಾಟೀಲ್ ಕೂಡ ಪಠ್ಯಕ್ರಮ ಪರಿಷ್ಕರಣೆ ನಿರ್ಧಾರವನ್ನು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಿಂದಿನ ಪಠ್ಯಪುಸ್ತಕ ಪರಿಷ್ಕರಣೆಯ ವಿವಾದವೇನು?
ಹಿಂದಿನ ಬಿಜೆಪಿ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಕೈಗೊಂಡಿದ್ದ ಕೆಲವು ಯೋಜನೆಗಳು ವಿವಾದವನ್ನು ಹುಟ್ಟುಹಾಕಿತ್ತು. ಶಾಲೆಗಳಲ್ಲಿ ವಿವೇಕ ಕೊಠಡಿಗಳ ನಿರ್ಮಾಣ, ಶಾಲೆಗಳಿಗೆ ಕೇಸರಿ ರಂಗು ಬಳಿದಿದ್ದು, ಶಾಲಾ ಪಠ್ಯಗಳಿಂದ ಟಿಪ್ಪು ಸುಲ್ತಾನ್ ಸೇರಿದಂತೆ ಕೆಲವರ ಪಾಠಗಳನ್ನು ತೆಗೆದು ಹಾಕಿ ವೀರ ಸಾವರ್ಕರ್ ಸೇರಿದಂತೆ ಇನ್ನೂ ಹಲವಾರು ಸ್ವಾತಂತ್ರ ಹೋರಾಟಗಾರರ ಪಠ್ಯಗಳನ್ನು ತಂದಿದ್ದು ಸೇರಿ ಕೆಲವಾರು ವಿಚಾರಗಳು ವಿವಾದವನ್ನು ಸೃಷ್ಟಿಮಾಡಿತ್ತು.