ನಮ್ಮ ದಕ್ಷಿಣಭಾರತದಲ್ಲಿ ಊಟದ ಕೊನೆಯಲ್ಲಿ ಮೊಸರು ಇಲ್ಲವಾದರೆ ಊಟ ಪೂರ್ಣಗೊಳ್ಳುವುದಿಲ್ಲ. ಸ್ವಲ್ಪ ಮೊಸರನ್ನ ತಿನ್ನಲೇಬೇಕು. ಅದು ಮಧ್ಯಾಹ್ನವಿರಲಿ, ರಾತ್ರಿಯಿರಲಿ ಊಟವೆಂದ ಮೇಲೆ ಮೊಸರು ಇರಲೇಬೇಕೆಂದು ಹೆಚ್ಚಿನವರು ಬಯಸುತ್ತಾರೆ.
ಮೊಸರು ಜೀರ್ಣಕ್ರಿಯೆಗೆ ತುಂಬಾ ಸಹಾಯ ಮಾಡುತ್ತದೆ. ಆದರೆ ಆರ್ಯುವೇದದ ಪ್ರಕಾರ ರಾತ್ರಿ ಹೊತ್ತು ಮೊಸರು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಅಷ್ಟು ಒಳ್ಳೆಯದಲ್ಲ. ಮೊಸರು ಹುಳಿ ಮತ್ತು ಸಿಹಿ ಮಿಶ್ರಿತವಾಗಿದ್ದು, ಇದನ್ನು ರಾತ್ರಿ ಹೊತ್ತು ಸೇವಿಸುವುದರಿಂದ ಕೆಲವರಿಗೆ ಕಫವಾಗುವ ಸಾಧ್ಯತೆ ಇದೆ. ಅದರಲ್ಲೂ ಅಸ್ತಮಾ, ಕೆಮ್ಮು, ಶೀತ ಮತ್ತು ಇತರ ಉಸಿರಾಟದ ಕಾಯಿಲೆ ಇರುವವರು ರಾತ್ರಿ ವೇಳೆ ಮೊಸರು ತಿನ್ನಬಾರದು. ಕಫ ಮಾತ್ರವಲ್ಲದೇ ಮೂಳೆ ಸಮಸ್ಯೆ ಇರುವವರು ಕೂಡಾ ರಾತ್ರಿ ವೇಳೆ ಮೊಸರು ಸೇವಿಸಲೇಬಾರದು ಎಂದು ಆರ್ಯವೇದ ಹೇಳುತ್ತದೆ.
ಮೊಸರಿನಲ್ಲಿದೆ ಅನೇಕ ಆರೋಗ್ಯ ಪ್ರಯೋಜನ:
*ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೂರಕವಾಗಿವೆ. ವಿಶೇಷವಾಗಿ ರಕ್ತದಲ್ಲಿರುವ ಬಿಳಿರಕ್ತ ಕಣಗಳನ್ನು ಹೆಚ್ಚಿಸಲು ಮತ್ತು ಪ್ರತಿಕಣದ ಸಾಮರ್ಥ್ಯ ಹೆಚ್ಚಿಸಲು ಮೊಸರು ನೆರವಾಗುತ್ತದೆ. ಮೊಸರಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ದೇಹದಲ್ಲಿರುವ ಸೂಕ್ಷ್ಮಾಣು ಜೀವಿಗಳ ಮೇಲೆ ಹೋರಾಡುತ್ತದೆ.
*ಮೊಸರಿನಲ್ಲಿ ಕ್ಯಾಲ್ಸಿಯಂ, ಪೋಸ್ಪರಸ್ ಮತ್ತು ಇತರ ಕೆಲವೊಂದು ಖನಿಜಾಂಶಗಳು ಇವೆ. ಇದು ಮೂಳೆ ಹಾಗೂ ಹಲ್ಲುಗಳಿಗೆ ಅಗತ್ಯವಾಗಿಬೇಕು.
*ಮೊಸರು ಒತ್ತಡ ಕಡಿಮೆ ಮಾಡುವುದಕ್ಕೂ ಸಹಾಯ ಮಾಡುತ್ತದೆ.
*ಬಾಯಿಯ ಹುಣ್ಣು ಸಮಸ್ಯೆಯಿಂದ ಬಳಲುತ್ತಿದ್ದರೆ ರಾತ್ರಿ ಮಲಗುವ ಮುನ್ನ ಮತ್ತು ಬೆಳಿಗ್ಗೆದ್ದ ತಕ್ಷಣ ಗಟ್ಟಿ ಮೊಸರನ್ನು ಬಾಯಿಯ ಒಳಭಾಗದಲ್ಲಿ ಸವರಿಕೊಂಡರೆ ಶೀಘ್ರವೇ ಗುಣವಾಗುತ್ತದೆ.
*ಮೊಸರಿನ ಸೇವನೆಯಿಂದ ಹೃದಯದ ಕಾಯಿಲೆ, ಅಧಿಕ ರಕ್ತದೊತ್ತಡ ಸಮಸ್ಯೆ ನಿವಾರಣೆಯಾಗುತ್ತದೆ. ಅಲ್ಲದೇ ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.
ರಾತ್ರಿ ಮೊಸರು ಸೇವನೆ:
ರಾತ್ರಿ ಹೊತ್ತು ಮೊಸರು ಬದಲಿಗೆ ಮಜ್ಜಿಗೆ ಬಳಸಬಹುದು. ಹಾಗೆಯೇ ಮೊಸರು ಬದಲಿಗೆ ಯೋಗರ್ಟ್ ಬಳಸಬಹುದು. ಮಜ್ಜಿಗೆ ಹಾಗೂ ಯೋಗರ್ಟ್ ಬಳಸುವಾಗ ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ ಹಾಕಿದರೆ ಒಳ್ಳೆಯದು. ಇನ್ನು ಹಗಲಿನಲ್ಲಿ ಮೊಸರು ತೆಗೆದುಕೊಳ್ಳುವಾಗ ಸಕ್ಕರೆ ಹಾಕದೆ ಬಳಸಿ, ರಾತ್ರಿ ಹೊತ್ತಿನಲ್ಲಿ ಬಳಸುವುದಾದರೆ ಸ್ವಲ್ಪ ಸಕ್ಕರೆ ಹಾಕಿ ತಿನ್ನಿ.