ಮಹಿಳೆಯರಿಗೆ ಮುಟ್ಟಿನ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲು, ಪ್ರತಿ ವರ್ಷ ಮೇ 28 ರಂದು ಪ್ರಪಂಚದಾದ್ಯಂತ ವಿಶ್ವ ಸ್ತ್ರೀಯರ ಋತುಚಕ್ರ ದಿನವನ್ನಾಗಿ ಆಚರಿಸಲಾಗುತ್ತದೆ. ಜರ್ಮನ್ ಮೂಲದ ಎನ್ಜಿಒ ವಾಶ್ ಯುನೈಟೆಡ್ 2014ರಲ್ಲಿ ಮೊದಲ ಬಾರಿಗೆ ಮುಟ್ಟು ನೈರ್ಮಲ್ಯದ ದಿನವನ್ನು ಆಚರಿಸಲು ಆರಂಭಿಸಿತು.
ಮುಟ್ಟಿನ ನೈರ್ಮಲ್ಯ ಎಂದರೇನು?
ಮುಟ್ಟಿನ ಸಮಯದಲ್ಲಿ ರಕ್ತದ ಹರಿವನ್ನು ಹೀರಿಕೊಳ್ಳುವ ಉತ್ಪನ್ನಗಳಾದ ಪ್ಯಾಡ್ಗಳು, ಮಟ್ಟಿನ ಕಪ್ಗಳನ್ನು ಬದಲಾಯಿಸಲು ಗೌಪ್ಯತೆ, ಮತ್ತು ಬಳಸಿದ ಉತ್ಪನ್ನಗಳನ್ನು ವಿಲೇವಾರಿ ರೀತಿಯನ್ನು ಮುಟ್ಟಿನ ನೈರ್ಮಲ್ಯ ಎಂದು ಹೇಳಲಾಗುತ್ತದೆ.
ಮುಟ್ಟಿನ ನೈರ್ಮಲ್ಯ ದಿನ ದಿನಾಂಕ: ಮೇ 28 ರಂದು ಏಕೆ ಆಚರಿಸಲಾಗುತ್ತದೆ?
ಮುಟ್ಟಿನ ನೈರ್ಮಲ್ಯ ದಿನವನ್ನು ಪ್ರತಿ ವರ್ಷ ಐದನೇ ತಿಂಗಳಾದ ಮೇ 28 ನೇ ರಂದು ಆಚರಿಸಲಾಗುತ್ತದೆ ಏಕೆಂದರೆ ಮುಟ್ಟಿನ ಚಕ್ರವು ಸರಾಸರಿ 28 ದಿನಗಳಿಗೊಮ್ಮೆ ಆಗುವುದಲ್ಲದೇ ಪ್ರತಿ ತಿಂಗಳು ಐದು ದಿನಗಳವರೆಗೆ ಇರುವುದರಿಂದ ಇದನ್ನು ಐದನೇ ತಿಂಗಳಲ್ಲಿ ಆಚರಿಸಲಾಗುತ್ತದೆ.
ಮುಟ್ಟಿನ ನೈರ್ಮಲ್ಯ ದಿನದ ಇತಿಹಾಸ:
ಮುಟ್ಟಿನ ನೈರ್ಮಲ್ಯ ದಿನವನ್ನು ಜರ್ಮನಿಯ ಎನ್ಜಿಒ ವಾಶ್ ಯುನೈಟೆಡ್ 2013 ರಲ್ಲಿ ಪ್ರಾರಂಭಿಸಿತು, ಮುಟ್ಟಿನ ವಿವಿಧ ಅಂಶಗಳ ಬಗ್ಗೆ ಜಾಗೃತಿ ಮೂಡಿಸಲು 28 ದಿನಗಳ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಪ್ರಾರಂಭಿಸಲಾಯಿತು. ಅಭಿಯಾನದ ಸುತ್ತಲಿನ ಸಕಾರಾತ್ಮಕ ಪ್ರತಿಕ್ರಿಯೆಯಿಂದ ಪ್ರೇರಿತರಾಗಿ, ಮೇ 28, 2014 ರಂದು ಮೊದಲ ಬಾರಿಗೆ ರ್ಯಾಲಿಗಳು, ಪ್ರದರ್ಶನಗಳು, ಕಾರ್ಯಾಗಾರಗಳು, ಭಾಷಣಗಳೊಂದಿಗೆ ಮುಟ್ಟಿನ ನೈರ್ಮಲ್ಯ ದಿನವನ್ನು ಆಚರಿಸಲಾಯಿತು.
ಮುಟ್ಟಿನ ನೈರ್ಮಲ್ಯ ದಿನ 2023 ಥೀಮ್:
ಈ ವರ್ಷ ವಿಶ್ವ ಮುಟ್ಟಿನ ನೈರ್ಮಲ್ಯ ದಿನದ ವಿಷಯವು ‘2030 ರ ವೇಳೆಗೆ ಮುಟ್ಟನ್ನು ಜೀವನದ ಸಾಮಾನ್ಯ ಸಂಗತಿಯನ್ನಾಗಿ ಮಾಡುವುದು’. ಈ ಥೀಮ್ ನೊಂದಿಗೆ ಕೇವಲ ಈ ದಿನವನ್ನು ಆಚರಿಸುವುದಲ್ಲ, ಬದಲಿಗೆ 2030 ರ ವೇಳೆಗೆ ಸಾಧಿಸಬೇಕಾದ ಗುರಿಯಾಗಿದೆ. ಸುರಕ್ಷತಾ ಸಾಮಗ್ರಿಗಳು ಮತ್ತು ಮುಟ್ಟಿನ ಉತ್ಪನ್ನಗಳನ್ನು ಮಹಿಳೆಯರು ಸುಲಭವಾಗಿ ಬಳಸುವಂತಾಗಬೇಕು. ಮುಟ್ಟನ್ನು ಸಾಮಾನ್ಯ ವಿಷಯವನ್ನಾಗಿ ಮಾಡುವುದು, ಅದನ್ನು ಸಾಮಾನ್ಯ ಧ್ವನಿಯಲ್ಲಿ ಸಾರ್ವಜನಿಕವಾಗಿ ಚರ್ಚಿಸುವುದು ಈ ದಿನದ ಉದ್ದೇಶವಾಗಿದೆ.
ಮುಟ್ಟಿನ ನೈರ್ಮಲ್ಯ ದಿನದ ಮಹತ್ವ:
ಗ್ರಾಮೀಣ ಭಾಗದ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ಗಳನ್ನು ಬಳಸುವ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಋತುಚಕ್ರ/ಮುಟ್ಟಿನ ನೈರ್ಮಲ್ಯ ದಿನವನ್ನು ಆಚರಿಸಲಾಗುತ್ತದೆ. ಜಾಗತಿಕವಾಗಿ, ಪ್ರತಿದಿನ 800 ದಶಲಕ್ಷಕ್ಕೂ ಹೆಚ್ಚು ಹುಡುಗಿಯರು ಮತ್ತು ಮಹಿಳೆಯರು ಮುಟ್ಟಾಗುತ್ತಾರೆ.ಅದರಲ್ಲಿ ಸುಮಾರು 500 ದಶಲಕ್ಷದಷ್ಟು ಜನರು ಮುಟ್ಟಿನ ನೈರ್ಮಲ್ಯಕ್ಕೆ ಸಾಕಷ್ಟು ಸೌಲಭ್ಯಗಳನ್ನು ಹೊಂದಿರುವುದಿಲ್ಲ. ಅಲ್ಲದೆ, ಅವರಲ್ಲಿ ಹಲವರಿಗೆ ಮೂಲ ನೈರ್ಮಲ್ಯ ಮತ್ತು ನೈರ್ಮಲ್ಯ ಕ್ರಮಗಳ ಬಗ್ಗೆ ಸಹ ತಿಳಿದಿಲ್ಲ. ಹೀಗಾಗಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಾರೆ.
ಇಂದಿಗೂ ಅದೇಷ್ಟೋ ಮಹಿಳೆಯರಿಗೆ ಮುಟ್ಟಿನ ಸಂದರ್ಭದಲ್ಲಿ ಮನೆಯಿಂದ ಅಥವಾ ಪ್ರತ್ಯೇಕ ಕೋಣೆಯಲ್ಲಿ ಇರಿಸಲಾಗುತ್ತದೆ. ಈ ಅವಧಿ ಮುಗಿಯುವವರೆಗೂ ಅವರಿಗೆ ಯಾವುದೇ ವಸ್ತುಗಳನ್ನು ಮುಟ್ಟಲು ಅಥವಾ ಮನೆಯಲ್ಲಿ ಓಡಾಡಲು ಅವಕಾಶ ನೀಡುವುದಿಲ್ಲ. ಮಾತ್ರವಲ್ಲದೇ ಅದೆಷ್ಟೋ ಮಹಿಳೆಯರು ಈ ಅವಧಿಯ ಬಗ್ಗೆ ಹೇಳಿಕೊಳ್ಳಲೂ ಹಿಂಜರಿಯುತ್ತಾರೆ ಅಷ್ಟೇಅಲ್ಲದೇ ಬಡತನ ಮತ್ತು ಶೌಚಾಲಯಗಳು ಮತ್ತು ಸ್ಯಾನಿಟರಿ ಪ್ಯಾಡ್ ಗಳಂತಹ ಮೂಲಭೂತ ಸೇವೆಗಳ ಕೊರತೆ ಇವೆಲ್ಲವೂ ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯದ ವಿಚಾರದಲ್ಲಿ ಇರುವ ಸವಾಲುಗಳಾಗಿವೆ.
ಮುಟ್ಟಿನ ಸಮಯದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳು:
*ಮುಟ್ಟಿನ ಉತ್ಪನ್ನವನ್ನು ಬಳಸುವ ಮೊದಲು ಮತ್ತು ನಂತರ ನಿಮ್ಮ ಕೈಗಳನ್ನು ತೊಳೆಯಿರಿ.
*ಮುಟ್ಟಿನ ಉತ್ಪನ್ನಗಳನ್ನು ಟಾಯ್ಲೆಟ್ನಲ್ಲಿ ಫ್ಲಶ್ ಮಾಡಬೇಡಿ ಮತ್ತು ಬದಲಿಗೆ ಅವುಗಳನ್ನು ಟಾಯ್ಲೆಟ್ ಪೇಪರ್ ಅಥವಾ ಟಿಶ್ಯೂನಿಂದ ಸುತ್ತಿ ಡಸ್ಟ್ಬಿನ್ನಲ್ಲಿ ವಿಲೇವಾರಿ ಮಾಡಿ.
*ರಕ್ತಸ್ರಾವ ಕಡಿಮೆ ಇದ್ದರೂ ಕೂಡ ಪ್ರತಿ ಕೆಲವು ಗಂಟೆಗಳಿಗೊಮ್ಮೆ ಸ್ಯಾನಿಟರಿ ಪ್ಯಾಡ್ಗಳನ್ನು ಬದಲಾಯಿಸಬೇಕು.
*ಪ್ರತಿ 4-8 ಗಂಟೆಗಳಿಗೊಮ್ಮೆ ಟ್ಯಾಂಪೂನ್ಗಳನ್ನು ಬದಲಾಯಿಸಿ.
*ಋತುಚಕ್ರದ ಕಪ್ ಗಳನ್ನು ಬಳಸುವುದಾದರೆ ಬಳಕೆಯ ನಂತರ ಅವುಗಳನ್ನು ಕುದಿಯುವ ನೀರಿನಲ್ಲಿ ಇರಿಸಿ ಸರಿಯಾಗಿ ಸ್ವಚ್ಛಗೊಳಿಸಿ.
*ಹತ್ತಿ ಒಳಉಡುಪುಗಳನ್ನು ಧರಿಸಿ ಮತ್ತು ನಿಮ್ಮ ಜನನಾಂಗದ ಪ್ರದೇಶವನ್ನು ಸ್ವಚ್ಛವಾಗಿಡಿ.