ಭಾರತೀಯ ಕುಸ್ತಿ ಅಸೋಸಿಯೇಷನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಹಲವಾರು ತಿಂಗಳುಗಳಿಂದ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಕುಸ್ತಿಪಟು ವಶಕ್ಕೆ ತೆಗೆದುಕೊಂಡ ಪೊಲೀಸರು, ಪ್ರತಿಭಟನಾ ನಿರತರ ವಸ್ತುಗಳನ್ನು ಅಲ್ಲಿಂದ ಖಾಲಿ ಮಾಡಿದ್ದರು. ಇದರಿಂದ ತೀವ್ರವಾಗಿ ನೊಂದಿರುವ ಕುಸ್ತಿಪಟುಗಳು ಇಂದು ಆರು ಗಂಟೆಗೆ ತಾವು ಗೆದ್ದ ಪದಕಗಳನ್ನು ಗಂಗಾ ನದಿಯಲ್ಲಿ ಬಿಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಬ್ರಿಜ್ ಭೂಷಣ್ ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿ ಕುಸ್ತಿ ಪಟುಗಳು ಪ್ರತಿಭಟನೆಯನ್ನು ನಡೆಸುತ್ತಿದ್ದರು. ಭಾನುವಾರ ಹೊಸ ಸಂಸತ್ ಭವನದ ಮುಂದೆ ಪ್ರತಿಭಟನೆ ಮಾಡಲು ಮುಂದಾಗಿದ್ದು, ಈ ವೇಳೆ ಪೊಲೀಸರು ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ತಡೆದಿದ್ದು, ಪೊಲೀಸರು ಮತ್ತು ಕುಸ್ತಿಪಟುಗಳ ನಡುವೆ ಘರ್ಷಣೆ ಉಂಟಾಗಿತ್ತು. ನಂತರ ಕುಸ್ತಿಪಟುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಅಲ್ಲಿಂದ ಅವರನ್ನು ಬಲವಂತವಾಗಿ ತೆರವು ಮಾಡಿಸಿದ್ದಲ್ಲದೆ, ಅವರ ಸಾಮಾನು ಸರಂಜಾಮುಗಳನ್ನು ಪೊಲೀಸರು ಅಲ್ಲಿಂದ ಖಾಲಿ ಮಾಡಿದ್ದರು. ಈ ಘಟನೆಯಿಂದ ತೀವ್ರ ನೋವು ಅನುಭವಿಸಿದ ಕುಸ್ತಿಪಟುಗಳು ಇಂದು ಸಂಜೆ ಗಂಗಾನದಿಯಲ್ಲಿ ತಮ್ಮ ಪದಕಗಳನ್ನು ಬಿಟ್ಟು ಇಂಡಿಯಾ ಗೇಟ್ನಲ್ಲಿ ಅನಿರ್ದಿಷ್ಟಾವಧಿಯವರೆಗೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ತಿಳಿಸಿದ್ದಾರೆ.
ಕುಸ್ತಿಪಟುಗಳು ಹರಿದ್ವಾರಕ್ಕೆ ಹೋಗಿ ಸಂಜೆ 6 ಗಂಟೆಗೆ ಗಂಗಾ ನದಿಯಲ್ಲಿ ಪದಕಗಳನ್ನು ಬಿಡಲಿದ್ದಾರೆ. ಪದಕಗಳು ನಮ್ಮ ಜೀವನ, ನಮ್ಮ ಆತ್ಮಗಳು, ಇಂದು ಅವುಗಳನ್ನು ಗಂಗಾದಲ್ಲಿ ಎಸೆದ ನಂತರ ಬದುಕಲು ಯಾವುದೇ ಕಾರಣವಿಲ್ಲ. ಇದಾದ ನಂತರ ನಾವು ಇಂಡಿಯಾ ಗೇಟ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಕುಸ್ತಿಪಟು ಸಾಕ್ಷಿ ಮಲಿಕ್ ಟ್ವೀಟ್ ಮಾಡಿದ್ದಾರೆ.
ನಮ್ಮನ್ನು ಅವರ ಹೆಣ್ಣುಮಕ್ಕಳ ಎಂದು ಕರೆಯುವ ಪ್ರಧಾನಿ ಒಮ್ಮೆಯೂ ನಮ್ಮ ಬಗ್ಗೆ ಕಾಳಜಿಯನ್ನು ತೋರಿಸಲಿಲ್ಲ. ಬದಲಾಗಿ, ಅವರು ಬ್ರಿಜ್ ಭೂಷಣ್ ಸಿಂಗ್ ಅವರನ್ನು ಹೊಸ ಸಂಸತ್ತಿನ ಕಟ್ಟಡದ ಉದ್ಘಾಟನೆಗೆ ಆಹ್ವಾನಿಸಿದರು. ಅವರು ಶುಭ್ರ ಬಿಳಿ ಬಟ್ಟೆಯಲ್ಲಿ ಫೋಟೊಗಳಿಗೆ ಪೋಸ್ ನೀಡಿದರು. ಈ ಹೊಳಪು ನಮ್ಮನ್ನು ಕುಟುಕುತ್ತಿದೆ ಎಂದು ಸಾಕ್ಷಿ ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.
ಜಂತರ್ ಮಂತರ್ನಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ:
ಜಂತರ್ ಮಂತರ್ ನಲ್ಲಿ ಕುಸ್ತಿಪಟುಗಳ ಪ್ರತಿಭಟನೆ ಸುಗಮವಾಗಿ ನಡೆಯುತಿತ್ತು. ಭಾನುವಾರ ಪದೇ ಪದೇ ಮಾಡಿದ ಮನವಿಗಳನ್ನು ನಿರ್ಲಕ್ಷಿಸಿ ಪ್ರತಿಭಟನಾಕಾರರು ಕಾನೂನು ಉಲ್ಲಂಘಿಸಿದರು. ಆದ್ದರಿಂದ ಅಲ್ಲಿಂದ ಅವರನ್ನು ತೆರವುಗೊಳಿಸಿ ಧರಣಿ ಕೊನೆಗೊಳಿಸಿದ್ದೇವೆ. ಅಲ್ಲಿ ಯಾವುದೇ ಪ್ರತಿಭಟನೆ ನಡೆಸಲು ಅವಕಾಶ ನೀಡುವುದಿಲ್ಲ. ಹಾಗೆಯೇ, “ಕುಸ್ತಿಪಟುಗಳು ಭವಿಷ್ಯದಲ್ಲಿ ಮತ್ತೆ ಧರಣಿ ನಡೆಸಲು ಅನುಮತಿಗಾಗಿ ಅರ್ಜಿ ಸಲ್ಲಿಸಿದರೆ, ಅವರನ್ನು ಜಂತರ್ ಮಂತರ್ ಹೊರತುಪಡಿಸಿ ಯಾವುದೇ ಸೂಕ್ತ, ಅಧಿಸೂಚಿತ ಸ್ಥಳಗಳಲ್ಲಿ ಅನುಮತಿಸಲಾಗುವುದು” ಎಂದು ನವದೆಹಲಿ ಉಪ ಪೊಲೀಸ್ ಆಯುಕ್ತರು ಟ್ವೀಟ್ ಮಾಡಿದ್ದಾರೆ.