ತುಳು ನಾಡಿನಲ್ಲಿ ಹಬ್ಬ, ಆಚರಣೆಗಳಿಗೆ ಅಂತಿಮ ಗಡುವಿನ ದಿನವೇ ಈ ಪತ್ತನಾಜೆ
(ಹತ್ತನಾವಧಿ) . ತುಳುವರು ಈ ದಿನದ ಮುಂಚಿತವಾಗಿಯೇ ತಮ್ಮ ಆಚರಣೆಗಳನ್ನು ಮಾಡಿ ಮುಗಿಸಬೇಕು ಎಂಬ ಮಾತಿದೆ.
ಅನಾದಿಕಾಲದಿಂದಲೂ ಪತ್ತನಾಜೆ ದಿನಕ್ಕೂ ಮೊದಲೇ ಎಲ್ಲ ರೀತಿಯ ಧಾರ್ಮಿಕ ಹಬ್ಬ ಆಚರಣೆಗಳನ್ನು ಮಾಡಿ ಮುಗಿಸಬೇಕು ಎಂದು ನಿರ್ಧಾರಿತ ದಿನವಾಗಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಮೇ ತಿಂಗಳಿನ 24 ಅಥವಾ 25ರಂದು ಪತ್ತನಾಜೆಯ ದಿನವಾಗಿರುತ್ತದೆ.
ತುಳುನಾಡಿದ್ಯಂತ ನಡೆಯುವ ವಾರ್ಷಿಕ ಜಾತ್ರೆ, ನೇಮೋತ್ಸವ, ಕಂಬಳ, ಯಕ್ಷಗಾನ ಹೀಗೆ ಹಲಾವರು ಆಚರಣೆಗೆ ಪತ್ತನಾಜೆ ಅಂತಿಮ ಗಡುವು ಆಗಿದೆ. ಈ ಸಂದರ್ಭದಲ್ಲಿ ದೇವಲಾಯಗಳಲ್ಲಿ ವಿಶೇಷ ಆಚರಣೆಗಳು ನಡೆಯುವುದಿಲ್ಲ. ಆದರೆ ದಿನನಿತ್ಯದ ಪೂಜೆ ಮಾತ್ರ ಎಂದಿನಂತೆ ನಡೆಯುತ್ತದೆ.
ಈ ಪತ್ತನಾಜೆ ನಿಯಮವನ್ನು ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಮತ್ತು ಮಡಿಕೇರಿ ಜಿಲ್ಲೆಯ ಕೆಲವೊಂದು ಭಾಗಗಳಲ್ಲಿ ಪಾಲಿಸಲಾಗುತ್ತಿದೆ.
ಪತ್ತನಾಜೆ ದಿನದಂದು ತುಳುವರು ತಮ್ಮ ಕುಲ ದೇವರು, ದೈವಗಳಿಗೆ ಅವಲಕ್ಕಿ ಉಪಹಾರದ ಸೇವೆಯನ್ನು ನೀಡುತ್ತಾರೆ. ಅದರಲ್ಲೂ ದೈವಗಳ ಮೂಲ ಸ್ಥಾನದಲ್ಲಿ ಸಮಸ್ತ ನಾಗರೀಕರು ಸೇರಿ ಸಂಪೂರ್ಣ ವಿಧಿ ವಿಧಾನಗಳ ಮೂಲಕ ಈ ಕಾರ್ಯವನ್ನು ನೇರೆವೇರಿಸುತ್ತಾರೆ.
ತುಳುನಾಡಿನ ಗಂಡು ಕಲೆ ಎಂದೆ ಹೆಸರಾಗಿರುವ ಯಕ್ಷಗಾನ ಮೇಳಗಳು ತಮ್ಮ ಎಲ್ಲ ಪ್ರದರ್ಶನಗಳನ್ನು ಮುಗಿಸಿ ಗೆಜ್ಜೆಯನ್ನು, ವೇಷಭೂಷಣಗಳನ್ನು ಕಳಚಿ ಮುಂದಿನ ವರ್ಷಕ್ಕೆಂದು ಜೋಪಾನ ಮಾಡಿ ಇಡಲಾಗುವುದು.
ಇನ್ನು ಈ ಪತ್ತನಾಜೆಯ ಮತ್ವದ ಸಂಗತಿ ಎಂದರೆ ಮಳೆ. ತುಳುವರ ನಂಬಿಕೆಯ ಪ್ರಕಾರದ ಈ ದಿನ ಮೊದಲ ಮಳೆ ಬರುವ ದಿನ. ಈ ದಿನದಂದು ಮಳೆ ಬಂದಲ್ಲಿ ಮಳೆಗಾಲ ಆರಂಭ ಆದಂತೆ ಮತ್ತು ಮಳೆಗಾಲದಲ್ಲಿ ಉತ್ತಮ ಮಳೆಯಾಗುವುದು ಎಂಬ ನಂಬಿಕೆ. ನಂಬಿಕೆ ವಿಶ್ವಾಸಗಳು ಆಚರ ವಿಚಾರಗಳು ನಮ್ಮ ನಮ್ಮ ಸಂಸ್ಕೃತಿಯಿಂದ ಬಂದಿರುತ್ತದೆ. ತುಳುನಾಡಿನ ಈ ಸಂಪ್ರಾದಾಯವು ಕೊಂಚ ವಿಶಿಷ್ಟವಾದ್ದದೇ ಸರಿ.