ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಾಳೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಸಿಇಟಿ ಪರೀಕ್ಷೆ ನಡೆಯುತ್ತಿದೆ. ಇನ್ನೊಂದೆಡೆ ನಾಳೆ ಯೇ ಮಧ್ಯಾಹ್ನ 12.30ಕ್ಕೆ ಬೆಂಗಳೂರಿನಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭ ಇರುವುದರಿಂದ ಪರೀಕ್ಷಾರ್ಥಿಗಳಿಗೆ ಟ್ರಾಫಿಕ್ ಸಮಸ್ಯೆ ಶುರುವಾಗುವ ಸಾಧ್ಯತೆ ಇದೆ.
ಯಾವುದೇ ಸಮಸ್ಯೆಗಳು ನಡೆಯದಂತೆ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದೇವೆ. ಕಂಠೀರವ ಕ್ರೀಡಾಂಗಣ ಸುತ್ತ ಮುತ್ತ ಇರುವ ಪರೀಕ್ಷಾ ಕೇಂದ್ರಗಳ ವಿವರಗಳನ್ನು ವೆಬ್ ಸೈಟ್ ನಲ್ಲಿ ಹಾಕುತ್ತೇವೆ. ಕ್ರೀಡಾಂಗಣದ ಸುತ್ತಮುತ್ತ ವಿಧ್ಯಾರ್ಥಿಗಳು ಎರಡು ಗಂಟೆಗೂ ಮೊದಲೇ ಬರಬೇಕು ಎಂದು ತಿಳಿಸಲಾಗಿದೆ.
ಇದರ ಮಧ್ಯೆ, ಪ್ರಮಾಣ ವಚನ ಸಮಾರಂಭದಿಂದ ಸಿಇಟಿ ವಿದ್ಯಾರ್ಥಿಗಳಿಗೆ ಸಂಚಾರ ದಟ್ಟಣೆಯ ಸಮಸ್ಯೆಯಾಗಲಿದೆಯಾ ಎಂಬುದರ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಬೆಂಗಳೂರು ನಗರ ಸಂಚಾರ ಪೊಲೀಸರಿಗೆ ಪತ್ರ ಬರೆದು ಸಲಹೆ ಕೇಳಿ ತಿಳಿದುಕೊಳ್ಳಲಾಗಿದೆ. ಸಮಾರಂಭಕ್ಕೆ ಎಷ್ಟು ಜನ ಬರಬಹುದು, ಯಾವ ಯಾವ ಭಾಗದಲ್ಲಿ ಸಮಸ್ಯೆ ಆಗಬಹುದು ಎಂಬ ಮಾಹಿತಿಯನ್ನು ಪೊಲೀಸರು ನೀಡಿದರೆ ಇದನ್ನು ಸರ್ಕಾರದ ಗಮನಕ್ಕೆ ತಂದು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಯಾವ ಕ್ರಮ ಕೈಗೊಳ್ಳಬೇಕೆಂದು ನಿರ್ಧರಿಸಲು ಸಾಧ್ಯವಾಗುತ್ತದೆ ಎಂದು ವಿಚಾರಿಸಿಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಪ್ರಮಾಣ ವಚನ ಸ್ವೀಕಾರದ ಸಮಾರಂಭ ವೇಳೆ ಯಾವುದೇ ರೀತಿಯ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.