ಇತ್ತೀಚಿನ ಜೀವನ ಶೈಲಿಯಲ್ಲಿ ವಯಸ್ಕರಲ್ಲಿ ಮಾತ್ರವಲ್ಲ ಚಿಕ್ಕ ಮಕ್ಕಳಲ್ಲೂ ಕೂಡ ಹೆಚ್ಚಾಗಿ ಬೊಜ್ಜು ಕಾಣಿಸಿಕೊಳ್ಳುತ್ತಿದೆ. ಚಿಕ್ಕ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಬೊಜ್ಜನ್ನು ಪಾಲಕರು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದೊಂದು ದಿನ ದೊಡ್ಡ ಸಮಸ್ಯೆಯಾಗಿ ಕಾಡಲಿದೆ.
ಮಕ್ಕಳಲ್ಲಿ ಉಂಟಾಗುವ ಬೊಜ್ಜಿಗೆ ಕಾರಣಗಳು:
ಜೀವನಶೈಲಿ:
ಕಡಿಮೆ ಚಟುವಟಿಕೆ ಮತ್ತು ಆಹಾರ ಮತ್ತು ಪಾನೀಯಗಳಿಂದ ಹೆಚ್ಚಿನ ಕ್ಯಾಲೋರಿಗಳ ಸೇವನೆಯೇ ಚಿಕ್ಕ ಮಕ್ಕಳಲ್ಲಿ ಬೊಜ್ಜು ಕಾಣಿಸಿಕೊಳ್ಳಲು ಮುಖ್ಯ ಕಾರಣಗಳಾಗಿವೆ. ಅನುವಂಶಿಕ ಮತ್ತು ಹಾರ್ಮೋನುಗಳ ಅಂಶಗಳು ಸಹ ಮಕ್ಕಳಲ್ಲಿ ಬೊಜ್ಜನ್ನು ಹೆಚ್ಚಾಗಲು ಕಾರಣವಾಗುತ್ತದೆ.
ಆಹಾರ ಪದ್ಧತಿ:
ಇನ್ಸ್ ಸ್ಟಂಟ್ ಆಹಾರಗಳು, ಮಸಾಲೆ ಫುಡ್, ಸ್ಟ್ರೀಟ್ ಫುಡ್ಗಳು ಸೇರಿದಂತೆ ಹೆಚ್ಚಿನ ಕ್ಯಾಲೋರಿ ಆಹಾರಗಳನ್ನು ನಿಯಮಿತವಾಗಿ ತಿನ್ನುವುದು ಮಗುವಿನ ತೂಕವನ್ನು ಹೆಚ್ಚಿಸಬಹುದು. ಕ್ಯಾಂಡಿ ಮತ್ತು ಸಿಹಿತಿಂಡಿಗಳು ಸಹ ತೂಕ ಹೆಚ್ಚಾಗಲು ಕಾರಣವಾಗಬಹುದು.
ವ್ಯಾಯಾಮದ ಕೊರತೆ:
ಚಟುವಟಿಕೆಯಿಂದ ಕೂಡಿರದ ಅಥವಾ ಹೆಚ್ಚು ವ್ಯಾಯಾಮ ಮಾಡದೇ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡದ ಕಾರಣ ಮಕ್ಕಳಲ್ಲಿ ತೂಕ ಹೆಚ್ಚಾಗುವ ಸಾಧ್ಯತೆಯಿದೆ. ಸದಾ ಟಿವಿ ನೋಡುತ್ತಾ ಕುಳಿತುಕೊಳ್ಳುವುದು ಅಥವಾ ವೀಡಿಯೋ ಗೇಮ್ಗಳನ್ನು ಆಡುತ್ತಾ ಹೆಚ್ಚು ಸಮಯವನ್ನು ಕಳೆಯುವುದು ಸಹ ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ.
ಅನುವಂಶಿಯವಾಗಿ:
ಕುಟುಂಬದಲ್ಲಿ ಅತಿಯಾಗಿ ಬೊಜ್ಜು ಹೊಂದಿರುವ ವ್ಯಕ್ತಿ ಯಿದ್ದರೆ ಅವರಿಂದ ನಿಮ್ಮ ಮಗುವಿಗೆ ಬೊಜ್ಜು ಅನುವಂಶಿಯವಾಗಿ ಬರುವ ಸಾಧ್ಯತೆಗಳಿರುತ್ತದೆ.
ಮಾನಸಿಕ ಒತ್ತಡಗಳು:
ಕುಟುಂಬದ ಒತ್ತಡವು ಮಗುವಿನ ಮಾನಸಿಕ ಸ್ಥಿಯ ಮೇಲೆ ಪ್ರಭಾವ ಬೀರುವುದರಿಂದ ಮಕ್ಕಳಲ್ಲಿ ಬೊಜ್ಜಿನ ಅಪಾಯವನ್ನು ಹೆಚ್ಚಿಸುತ್ತದೆ. ಕೆಲವು ಮಕ್ಕಳು ಒತ್ತಡದಂತಹ ಭಾವನೆಗಳನ್ನು ನಿಭಾಯಿಸಲು ಅತಿಯಾಗಿ ತಿನ್ನುತ್ತಾರೆ ಇದು ಬೊಜ್ಜು ಉಂಟಾಗಲು ಕಾರಣವಾಗುತ್ತದೆ.
ಬೊಜ್ಜಿನಿಂದಾಗುವ ದುಷ್ಪರಿಣಾಮಗಳು:
ಬೊಜ್ಜಿನಿಂದಾಗಿ ಅನೇಕ ಮಕ್ಕಲು ಅತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಅವರಲ್ಲಿ ಕೀಳರಿಮೆ, ಸಂಕೋಚ ಸ್ವಭಾವ ಹೆಚ್ಚಾಗುತ್ತದೆ. ಬೊಜ್ಜಿರುವ ಮಕ್ಕಳು ಶಾಲೆ, ಮನೆ, ಕುಟುಂಬದಲ್ಲಿ ತಾರತಮ್ಯಕ್ಕೆ ಒಳಗಾಗುತ್ತಾರೆ. ಇದರಿಂದ ಆತ್ಮವಿಶ್ವಾಸ ಕಡಿಮೆಯಾಗಿ ಖಿನ್ನತೆಗೆ ದಾರಿ ಮಾಡಿಕೊಡುತ್ತದೆ. ಬೇರೆ ಮಕ್ಕಳೊಂದಿಗೆ ಬೆರೆಯುವುದು ಕಡಿಮೆಯಾಗುತ್ತದೆ. ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ.
ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಕಡಿಮೆ ಮಾಡುವುದು ಹೇಗೆ ?
ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಕಡಿಮೆ ಮಾಡಲು ಪಾಲಕರು ಮಕ್ಕಳಿಗೆ ಹೆಚ್ಚೆಚ್ಚು ಪೌಷ್ಠಿಕ ಆಹಾರ ನೀಡಬೇಕಾಗುತ್ತದೆ. ಬೊಜ್ಜಿಗೆ ಕಾರಣವಾಗುವ ಆಹಾರವನ್ನು ಕಡಿಮೆ ನೀಡಬೇಕಾಗುತ್ತದೆ. ಫಾಸ್ಟ್ ಫುಡ್ನ ಬದಲಿಗೆ ಮಕ್ಕಳಿಗೆ ಆಹಾರದಲ್ಲಿ ತರಕಾರಿ ಹಣ್ಣು ಧಾನ್ಯಗಳನ್ನು ನೀಡಿ. ಹಾಗೆಯೇ ದಿನ ನಿತ್ಯ ಸಾಧ್ಯವಾದಷ್ಟು ಅವರನ್ನು ದೈಹಿಕ ಚಟುವಟಿಕೆ ತೊಡಗಿಸುವಂತೆ ಪ್ರೊತ್ಸಾಹ ನೀಡಿ.