ಇಂದಿನ ಜೀವನಶೈಲಿಯಲ್ಲಿ ಕಂಡುಬರುವ ಗಂಭೀರ ಕಾಯಿಲೆಯಲ್ಲಿ ರಕ್ತದೊತ್ತಡವು ಒಂದಾಗಿದೆ. ಅಪಧಮನಿಗಳಲ್ಲಿ ಹರಿಯುವ ರಕ್ತದ ವೇಗವು ಸಾಮಾನ್ಯ ವೇಗಕ್ಕಿಂತ ಹೆಚ್ಚಿರುವ ಸ್ಥಿತಿಗೆ ಅಧಿಕ ರಕ್ತದೊತ್ತಡ ಎನ್ನುವರು. ನಿಮ್ಮ ರಕ್ತದೊತ್ತಡವು 140/90ಕ್ಕಿಂತ ಹೆಚ್ಚು ಕಂಡುಬಂದಲ್ಲಿ ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದೀರಿ ಎಂದರ್ಥ.
ಇಂಟರ್ ನ್ಯಾಶನಲ್ ಸೊಸೈಟಿ ಆಫ್ ಹೈಪರ್ಟೆನ್ಶನ್ ನ ಸಹಸಂಸ್ಥೆ ಯಾಗಿರುವ ವರ್ಲ್ಡ್ ಹೈಪರ್ಟೆನ್ಶನ್ ಲೀಗ್ ವತಿಯಿಂದ ಪ್ರತೀ ವರ್ಷ ಮೇ 17ನ್ನು ವಿಶ್ವ ಅಧಿಕ ರಕ್ತದೊತ್ತಡ ದಿನ ಎಂಬುದಾಗಿ ಆಚರಿಸಲಾಗುತ್ತದೆ.
ಜಾಗತಿಕವಾಗಿ ಎಲ್ಲ ಜನಸಮುದಾಯಗಳಲ್ಲಿ ಅಧಿಕ ರಕ್ತದೊತ್ತಡದ ಬಗ್ಗೆ ಅರಿವನ್ನು ವಿಸ್ತರಿಸುವ ಉದ್ದೇಶದಿಂದ ೨೦೨೩ರ ವಿಶ್ವ ಅಧಿಕ ರಕ್ತದೊತ್ತಡ ದಿನವನ್ನು ನಿಮ್ಮ ರಕ್ತದೊತ್ತಡವನ್ನು ನಿಖರವಾಗಿ ಅಳೆಯಿರಿ ಮತ್ತು ಅದನ್ನು ನಿಯಂತ್ರಿಸಿ ಹೆಚ್ಚು ಕಾಲ ಬದುಕಿ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತದೆ.
ಅಧಿಕ ರಕ್ತದೊತ್ತಡಕ್ಕೆ ಇರುವ ಮುಖ್ಯ ಕಾರಣಗಳು:
ಬೊಜ್ಜು:
ದೇಹದಲ್ಲಿ ತೂಕ ಹೆಚ್ಚಾದಂತೆ ನಿಮ್ಮ ಹೃದಯವು ದೇಹಕ್ಕೆ ಬೇಕಾದ ಆಕ್ಸಿಜನ್ ಮತ್ತು ಪೋಷಕಾಂಶಗಳನ್ನು ಪೂರೈಸಲು ಹೆಚ್ಚು ರಕ್ತವನ್ನು ಪಂಪ್ ಮಾಡಬೇಕಾಗುತ್ತದೆ. ಈ ಹೆಚ್ಚುವರಿ ರಕ್ತವು ಅಪಧಮನಿಯ ಗೋಡೆಗಳ ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತವೆ.
ದೈಹಿಕ ಚಟುವಟಿಕೆಯ ಕೊರತೆ:
ಜಡ ಜೀವನಶೈಲಿಯಿಂದಾಗಿ ನಿಮ್ಮ ಹೃದಯ ಮತ್ತು ನಾಡಿಬಡಿತ ಹೆಚ್ಚುತ್ತದೆ. ಇದರ ಪರಿಣಾಮವಾಗಿ ನಿಮ್ಮ ಹೃದಯವು ರಕ್ತವನ್ನು ಪಂಪ್ ಮಾಡಲು ಹೆಚ್ಚು ಕಷ್ಟಪಡುವುದು, ಇದರಿಂದಾಗಿ ಅಪಧಮನಿಗಳ ಮೇಲೆ ಹೆಚ್ಚಿನ ಒತ್ತಡ ಬೀಳುವುದು. ಇವೆಲ್ಲದರ ಜೊತೆಗೆ ದೈಹಿಕ ವ್ಯಾಯಾಮದ ಕೊರತೆಯಿಂದಾಗಿ ಹೆಚ್ಚು ದಪ್ಪಗಾಗುವ ಅಪಾಯವಿರುತ್ತದೆ.
ತಂಬಾಕು ಮತ್ತು ಧೂಮಪಾನ ಸೇವನೆ:
ಜಗಿಯುವ ತಂಬಾಕು ಮತ್ತು ಧೂಮಪಾನ ಅಲ್ಪ ಅವಧಿಯವರೆಗೆ ನಿಮ್ಮ ರಕ್ತದ ಒತ್ತಡವನ್ನು ಹೆಚ್ಚಿಸುತ್ತವೆ. ಹಾಗೆಯೇ, ದೀರ್ಘಾವಧಿಯಲ್ಲಿ, ತಂಬಾಕಿನಲ್ಲಿರುವ ರಾಸಾಯನಿಕವು ನಿಮ್ಮ ಅಪಧಮನಿಗಳನ್ನು ದಪ್ಪ ಹಾಗೂ ಗಟ್ಟಿಯಾಗಿಸುತ್ತದೆ, ಇದರಿಂದ ರಕ್ತ ಪರಿಚಲನೆಗೆ ಕಷ್ಟವಾಗುತ್ತದೆ.
ಆಹಾರ ಕ್ರಮ:
ಶೇಖರಿಸಿದ ಆಹಾರ ಮತ್ತು ಜಂಕ್ ಫುಡ್ಗಳನ್ನು ಅತಿಯಾಗಿ ಸೇವಿಸುವುದರ ಜೊತೆಗೆ, ಹಣ್ಣು ಮತ್ತು ತರಕಾರಿಗಳ ಬಳಕೆಯನ್ನು ಕಡಿಮೆ ಮಾಡಿದಾಗ, ನಿಮ್ಮ ದೇಹದಲ್ಲಿನ ಸೋಡಿಯಂ ಮಟ್ಟ ಹೆಚ್ಚುತ್ತದೆ ಹಾಗೂ ಪೊಟ್ಯಾಸಿಯಂನ ಮಟ್ಟ ಕುಸಿಯುತ್ತದೆ. ಎಲೆಕ್ಟ್ರೋಲೈಟ್ಗಳ ಈ ಅಸಮತೋಲನವು ದೇಹದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಮತ್ತು ರಕ್ತದ ಉಂಟಾಗುವುದಕ್ಕೆ ಕಾರಣವಾಗುತ್ತದೆ.
ಇತರೆ ಆರೋಗ್ಯ ಸಮಸ್ಯೆ:
ಮಾನಸಿಕ ಒತ್ತಡ, ಗರ್ಭಧಾರಣೆ, ಡಯಾಬಿಟಿಸ್,ಕಿಡ್ನಿ ರೋಗದಂತಹ ಸಮಸ್ಯೆಗಳು ಕೂಡಾ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.
ಅಧಿಕ ರಕ್ತದೊತ್ತಡದ ಲಕ್ಷಣಗಳು:
ಅಧಿಕ ರಕ್ತದೊತ್ತಡವು ಆರಂಭಿಕವಾಗಿ ಬಹುತೇಕ ರೋಗಿಗಳು ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಕೆಲವು ರೋಗಿಗಳಿಗೆ ಸಾಮಾನ್ಯ ದಣಿವಿನ ಅನುಭವ ಆಗಬಹುದು. ಕೆಲವರಲ್ಲಿ ತಲೆನೋವು, ನಿಶ್ಯಕ್ತಿ, ದೃಷ್ಟಿಯ ತೊಂದರೆಗಳು, ಉಸಿರಾಟದ ತೊಂದರೆ, ಹೃದಯದ ಬಡಿತದಲ್ಲಿ ಏರುಪೇರು, ಎದೆ, ಕುತ್ತಿಗೆ ಇಲ್ಲವೇ ಕಿವಿಗಳು ಹೊಡೆದುಕೊಳ್ಳುವುದು, ಎದೆ ನೋವು, ಮೂಗಿನಲ್ಲಿ ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ.
ಅಧಿಕ ರಕ್ತದೊತ್ತಡದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು:
ಹೃದಯಾಘಾತ ಅಥವಾ ಪಾರ್ಶ್ವವಾಯು
ಎಥೆರೋಸ್ಕ್ಲೆರೋಸಿಸ್
ಆ್ಯನೂರಿಸಮ್
ಹೃದಯ ವೈಫಲ್ಯ
ಕಿಡ್ನಿ ತೊಂದರೆಗಳು
ದೃಷ್ಟಿ ನಷ್ಟ
ಅಧಿಕ ರಕ್ತದೊತ್ತಡ ನಿವಾರಣೆ:
ಆಹಾರದಲ್ಲಿ ಪಥ್ಯ:
ಹಣ್ಣುಗಳು, ತರಕಾರಿಗಳು, ಇಡೀ ಧಾನ್ಯಗಳು, ಕಡಿಮೆ ಕೊಬ್ಬಿರುವ ಹೈನು ಉತ್ಪನ್ನಗಳು, ಮೀನು, ಕೋಳಿ ಮಾಂಸ ಮತ್ತು ಮೊಟ್ಟೆ, ಬೀಜಗಳುಗಳನ್ನು ಸೇವಿಸಬೇಕು. ಕೆಂಪು ಮಾಂಸ, ಸಿಹಿತಿನಿಸುಗಳು, ಪೂರಕ ಸಿಹಿಗಳು, ಸಕ್ಕರೆ ಬೆರೆತ ಪಾನೀಯಗಳುಗಳನ್ನು ಸೇವಿಸಬಾರದು.
ಜೀವನಶೈಲಿಯ ಬದಲಾವಣೆಗಳನ್ನು ಮಾಡಿಕೊಳ್ಳಬಹುದು:
ತೂಕ ಇಳಿಸುವಿಕೆ.
ದಿನಕ್ಕೆ 30 ನಿಮಿಷದಂತೆ ಒಂದು ವಾರದಲ್ಲಿ ಐದು ದಿನ ವ್ಯಾಯಾಮ ಮಾಡಿ.
ಧೂಮಪಾನ, ಮದ್ಯಪಾನವನ್ನು ಮಿತಗೊಳಿಸಬೇಕು.
ಹಣ್ಣು ಮತ್ತು ತರಕಾರಿಗಳನ್ನು ಪ್ರತಿದಿನ ಸೇವಿಸಿ.
ಆಹಾರದಲ್ಲಿ ಉಪ್ಪನ್ನು ಕಡಿಮೆ ಮಾಡಿ. ಹಾಗೆಯೇ, ಸೋಡಿಯಂ ಹೆಚ್ಚಾಗಿರುವ ಆಹಾರ ಪದಾರ್ಥಗಳಾದ ಚೀಸ್, ಉಪ್ಪಿನಕಾಯಿ, ಗೊಜ್ಜು ಮತ್ತು ಹಪ್ಪಳವನ್ನು ಕಡಿಮೆ ಸೇವಿಸಿ.
ಕರಿದ ತಿನಿಸುಗಳು, ಜಂಕ್ ಫುಡ್ ಮತ್ತು ಸಿಹಿತಿನಿಸುಗಳನ್ನು ಕಡಿಮೆಮಾಡಿ.