ಹೆರಿಗೆಯಾದ ಬಳಿಕ ನಿಮ್ಮ ಕೂದಲು ಉದುರುವಾಗ ನೀವು ಚಿಂತೆಯಲ್ಲಿದ್ದರೆ, ಹಳ್ಳಿ ಕಡೆ ಅಜ್ಜಿಯರು ಹೇಳುತ್ತಾರೆ ಮಗು ಮುಖ ನೋಡಿ ನಗುವಾಗ ಹಾಗೇ ಕೂದಲು ಉದುರುವುದು ನೀವು ಚಿಂತಿಸಬೇಡಿ ಅಂತ. ಆದರೆ ನಿಜವಾಗಿಯೂ ಇದೇ ಕಾರಣನ ಎನ್ನುವ ಪ್ರಶ್ನೆ ನಿಮ್ಮಲ್ಲಿ ಬರಬಹುದು. ಯಾಕೆ ಬಾಣಂತಿಯರಲ್ಲಿ ಕೂದಲು ಉದುರುತ್ತೆ ಎನ್ನುವ ಯೋಚನೆ ನಿಮ್ಮನ್ನು ಕಾಡಬಹುದು ಇದಕ್ಕೆ ಉತ್ತರ ಇಲ್ಲಿದೆ ನೋಡಿ.
ಗರ್ಭಧಾರಣೆಯಾದ ನಂತರ ದೇಹದಲ್ಲಿ ಹಲವಾರು ಹಾರ್ಮೋನ್ ಬದಲಾವಣೆಗಳು ನಡೆಯುತ್ತಿರುತ್ತದೆ. ಆ ಹಾರ್ಮೋನ್ಗಳ ಬದಲಾವಣೆಯು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅಂದರೆ ಗರ್ಭಾವಸ್ಥೆಯ ಹಾರ್ಮೋನುಗಳು ಕೂದಲು ಉದುರುವುದನ್ನು ತಡೆಯುತ್ತದೆ. ಹೆರಿಗೆಯ ನಂತರ ಹಾರ್ಮೋನುಗಳು ಸಾಮಾನ್ಯ ಸ್ಥಿತಿಗೆ ಬಂದ ಬಳಿಕ ಈಸ್ಟ್ರೋಜೆನ್ನಲ್ಲಿ ಇಳಿಕೆ ಕಂಡುಬರುತ್ತದೆ. ಇದರಿಂದಾಗಿ ಹೆಚ್ಚು ಕೂದಲು ಉದುರುತ್ತದೆ.
ಹೆರಿಗೆಯಾದ ಮೂರು ತಿಂಗಳ ನಂತರ ಕೂದಲು ಉದುರಲು ಪ್ರಾರಂಭವಾಗುತ್ತದೆ.. ಸಾಮಾನ್ಯವಾಗಿ ತಲೆ ಬಾಚುವಾಗ, ಸ್ನಾನಮಾಡುವಾಗ ಹೆಚ್ಚಾಗಿ ಉದುರುತ್ತದೆ. ಮುಂಭಾಗದಲ್ಲಿ ಕೂದಲು ಇದ್ದಂತೆ ಕಂಡರೂ ತಲೆಯ ಮೇಲ್ಭಾಗ, ಬದಿಯಲ್ಲೆಲ್ಲಾ ಬೋಳಾದಂತೆ ಕಾಣಿಸುತ್ತದೆ.
ಹಾರ್ಮೋನುಗಳ ಬದಲಾವಣೆಯೂ ಸಾಮಾನ್ಯವಾಗಿ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರಿಗೆ ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಕೂದಲು ಉದುರಬಹುದು.
ಹೆರಿಗೆಯ ನಂತರ ಕೂದಲು ಉದರುವುದು ನೈಸರ್ಗಿಕ ಪ್ರಕ್ರಿಯೆ. ಕೆಲವರಲ್ಲಿ ಇದು ಮೂರು ತಿಂಗಳುಗಳು, ಕೆಲವರಲ್ಲಿ ಆರು ತಿಂಗಳುಗಳು ಅಥವಾ ಒಂದು ವರ್ಷದವರೆಗೂ ಕೂದಲು ಉದುರುವುದು ಸಾಮಾನ್ಯ ಆದರಿಂದ ಚಿಂತಿಸುವ ಅಗತ್ಯವಿಲ್ಲ.
ಕೂದಲು ಉದುರುವುದನ್ನು ತಡೆಗಟ್ಟುವುದು ಹೇಗೆ:
ಹೆರಿಗೆಯಾದ ನಂತರ ಕೂದಲು ಉದುರವುದನ್ನು ನಿಲ್ಲಿಸುವುದು ಕಷ್ಟ. ಆದರೆ ಕೂದಲು ಉದುರುವ ಪ್ರಮಾಣವನ್ನು ನಿಯಂತ್ರಿಸಬಹುದು. ಹೆರಿಗೆಯಾದ ನಂತರ ಉತ್ತಮ ಪ್ರೋಟಿನ್ ಹಾಗೂ ಕಬ್ಬಿಣಾಂಶದ ಆಹಾರವನ್ನು ಸೇವನೆಯನ್ನು ಮಾಡಿ. ಉತ್ತಮ ಆಹಾರ ಸೇವನೆ, ಪೋಷಣೆಯಿಂದ ಕೂದಲು ಉದುರುವುದನ್ನು ನಿಯಂತ್ರಿಸಬಹುದಲ್ಲದೇ, ಕೂದಲನ್ನು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳಬಹುದು.