3-00 ಗಂಟೆಗೆ ನೀರು ಪಲಾವ್ ನ್ನು ಕೊಡಲಾಯಿತು. 11-30ಕ್ಕೆ ಊಟಮಾಡಿದ ನಮಗೂ ಹೊಟ್ಟೆ ತಾಳ ಹಾಕುತ್ತಿತ್ತು…ಹೊರಡುವ ಗೌಜಿಯಲ್ಲಿ ಹೊಟ್ಟೆಗೆ ಹಾಕಿರಲಿಲ್ಲ. ಆ ಮೇಲೆ ನೆನಪೂ ಇರಲಿಲ್ಲ. ಈಗ ಎಲ್ಲಾ ಸರಿಯಾದ ಕೂಡಲೇ ಹಸಿವು ಕರೆಯುತ್ತಿತ್ತೋ ಏನೋ…ಆದರೆ ಮೊದಲೇ ಬಂದ ಪಲಾವಿನಿಂದ ಹಸಿವು ಪಲಾಯನ ಹೇಳಿತು…
ಮುಂದೆ ಅಲ್ಲಲ್ಲಿ ಸುರಂಗ ಸಿಕ್ಕಿದಾಗ ನಿನ್ನ ಮತ್ತು ಪುಟ್ಟನ ನೆನಪಾಯಿತು. ಗೋವಾಕ್ಕೆ ಹೋಗುವಾಗ ಸುರಂಗ ಸಿಕ್ಕಿದೊಡನೆ ಚಿಕ್ಕಪ್ಪನ ಜೊತೆ “ಕೂ……..” ಎಂದು ‘ಕೂ’ ಹಾಕಿ ನಗುವುದು,ಕಿರುಚುವುದು,ಕುಣಿಯುವುದು…ಎಲ್ಲಾ ನೆನಪಾಗಿ ಸಹಯಾತ್ರಿಗಳೊಂದಿಗೆ ಹಂಚಿಕೊಂಡೆ. ಆ ಮೇಲೆ ಸುರಂಗ ಬಂದೊಡನೆ..ವಯಸ್ಸಾದವರೂ, ತರುಣರೂ ಮಕ್ಕಳೂ…ಸುರಂಗ ಸಿಕ್ಕಿದಾಗ ಮೂಡ್ ಬಂದರೆ “ಕೂ” ಹಾಕಲು ಪ್ರಾರಂಭಿಸಿದರು.
ಸಂಜೆ 4-00 ಗಂಟೆ ಆಗಿಯೇ ಹೋಯಿತು…ಕೆಲವರಿಗೆ ಸಂಜೆಯ ಚಹಾ,ಕಾಫಿಯ ನೆನಪಾಯಿತು…ನೆನೆದವರ ಮನದಲ್ಲಿ ಎಂಬಂತೆ ಬಿಸಿಬಿಸಿ ಬಟಾಟೆ ಅಂಬೋಡೆ ಮತ್ತು ಚಹಾ,ಕಾಫಿ ಪ್ರತ್ಯಕ್ಷವಾಯಿತು. ಅದನ್ನು ತಿಂದ ಮೇಲೆ ಅದನ್ನು ಅರಗಿಸಬೇಕಲ್ಲವೇ..? ಸರಿ ಅಜ್ಜನ ಸವಾರಿ ರೈಲಿನ ಸರ್ವೇ,ಗಣತಿ ಮಾಡಲು ಹೊರಟಿತು. ಹೋದದಕ್ಕೆ ನಷ್ಟವೇನೂ ಆಗಿಲ್ಲ. ಪರಿಚಯದ ಕೆಲವರು,ಬ್ಯಾಂಕ್ ಉದ್ಯೋಗಿಯಾಗಿರುವಾಗ ಜೊತೆಯಿದ್ದ ಸಹೋದ್ಯೋಗಿಗಳು ಕೆಲವರು ಸಿಕ್ಕಿದರು. ಅಜ್ಜನಿಗೆ ಬಹಳ ಖುಷಿಯಾಯಿತು.
ಅಷ್ಟೇ ಅಲ್ಲ, ಮಂಗಳೂರು ಆಕಾಶವಾಣಿಯ ಕೊಂಕಣಿ ವಿಭಾಗದ ಫ್ಲೋರಿನ್ ರೋಚ್ ಮೇಡಂ ಸಿಕ್ಕಿದರು.ಅವರು ಲೇಹ್ಗೆ ತಮ್ಮ ಆಕಾಶವಾಣಿಯ ಕರ್ತವ್ಯದ ಕರೆಗೆ ಓಗೊಟ್ಟು ಹೊರಟಿದ್ದರು. ಅವರೂ ನಮ್ಮನ್ನು ನೋಡಿ ಸಂತೋಷಪಟ್ಟರು. ನಿನ್ನನ್ನು ಕರೆದುಕೊಂಡು ಬರದೇ ಇದ್ದದ್ದಕ್ಕೆ ಬೇಸರ ವ್ಯಕ್ತ ಪಡಿಸಿದರು. 5-40ರ ವರೆಗೆ ಅವರ ಜೊತೆ ಹರಟೆ ಹೊಡೆಯುತ್ತಾ ಕೂತೆ.
ಅಷ್ಟು ಹೊತ್ತಿಗೆ ಪಡಿಯಾರ್ ಮಾಮ ಮನೆಯಲ್ಲೇ ಸಿದ್ಧಪಡಿಸಿದ ಶೆವಂಯಿ(ಒತ್ತು ಶ್ಯಾವಿಗೆ) ಜೊತೆಗೆ ಚಟ್ನಿ,ಮಾವಿನ ಮಿಡಿಯ ಕೆಂಪು ಉಪ್ಪಿನ ಕಾಯಿ,ತಾಜಾ ತೆಂಗಿನೆಣ್ಣೆ…ವಾವ್ ಎಷ್ಟು ಒಳ್ಳೆಯ combination ಅಲ್ಲವಾ…? ನಿನ್ನ ಇಷ್ಟದ್ದು..ಹಸಿವಿಲ್ಲದಿದ್ದರೂ ಈ combination ನಮ್ಮನ್ನು ಕರೆಯಿತು. ರೋಚ್ ಮೇಡಂ ಕೂಡಾ ನಮ್ಮ ಜೊತೆ ತಿಂದು “ಇನ್ನು ರಾತ್ರಿಯ ಊಟದ ಚಿಂತೆ ಇಲ್ಲಾ..” ಎಂದು ಹೇಳಿದಷ್ಟೇ ಅಲ್ಲ ನಮ್ಮ ಅಡುಗೆಗಳ ರುಚಿಯನ್ನು ಹೊಗಳಿದರು.
6-40ರಿಂದ 7-30ರ ವರೆಗೆ ಭಜನೆ ಮಾಡಿದೆವು. ಈ ಭಜನಾ ಕಾರ್ಯಕ್ರಮವನ್ನು ಪೂರ್ತಿ ಪ್ರವಾಸದಲ್ಲಿ ದಿನಾ ಸಂಜೆ ಮಾಡಿದ್ದೇವೆ. ಬಂದವರಲ್ಲಿ ಹೆಚ್ಚಿನವರು ಒಳ್ಳೆಯ ಕಂಠಸಿರಿ ಹೊಂದಿದ್ದು ಭಜನೆಯನ್ನು ಕಲಿತವರಾಗಿದ್ದರು. ಭಜನೆಯ ಮಂಗಳ ಹಾಡುವಾಗ ಗೋವಾ ತಲುಪಿದ್ದೆವು. ಗೋವಾದಲ್ಲಿ ಕೇವಲ ಐದು ನಿಮಿಷ ರೈಲು ನಿಂತಿತು. ಅಲ್ಲಿಂದ ಮುಂದೆ ಕತ್ತಲೆಯಲ್ಲಿ ಹೊರಗೇನೂ ಕಾಣುತ್ತಿರಲಿಲ್ಲ. ಅಲ್ಲಲ್ಲಿ ನೀರು ತುಂಬಿದ ಗದ್ದೆಗಳು,ಕೆರೆಗಳು..ಕಾಣುತ್ತಿದ್ದವೇ ಹೊರತು ಮತ್ತೇನೂ ಕಾಣುತ್ತಿರಲಿಲ್ಲ. ಕೆಲವೆಡೆ ಊರುಗಳು ಕಾಣುತ್ತಿದ್ದವೇ ಹೊರತು ಯಾವ ಊರೆಂದು ಗೊತ್ತಾಗುತ್ತಿರಲಿಲ್ಲ. ಒಂದು ಗಂಟೆ ಪ್ರಯಾಣ ಮಾಡಿದ ನಂತರ ಸರಿಯಾಗಿ 8-30ಕ್ಕೆ ಸರಿಯಾಗಿ ಅನ್ನ,ಸಾಂಬಾರು,ಉಪ್ಪಿನಕಾಯಿ, ಮೊಸರಿನ ಊಟವಾಯಿತು..
ನಿದ್ದೆ ಬರುವವರು ಮಲಗಿದರು. ನಾನೂ ಮಲಗುವ ವ್ಯವಸ್ಥೆ ಮಾಡಿದೆ. ನಿದ್ದೆ ಬರುವವರೆಗೆ ಒಳಗೆ ಹೊರಗೆ ಅವಲೋಕಿಸುತ್ತಾ …..