ಬೆಂಗಳೂರು: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಈ ಹಿಂದೆ ಏಕನಾಥ ಶಿಂದೆ ನೇತೃತ್ವದಲ್ಲಿ ಶಿವಸೇನೆ ಶಾಸಕರು ಬಂಡಾಯ ಎದ್ದು, ಬಿಜೆಪಿಗೆ ಬೆಂಬಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಮಹಾವಿಕಾಸ ಅಘಾಡಿ ಸರ್ಕಾರವನ್ನು ಮರುಸ್ಥಾಪನೆ ಮಾಡಬೇಕು ಹಾಗೂ ಏಕನಾಥ ಶಿಂದೆ ಸೇರಿದಂತೆ 15 ಶಾಸಕರನ್ನು ಅನರ್ಹಗೊಳಿಸಬೇಕೆಂದು ಉದ್ಧವ್ ಠಾಕ್ರೆ ಬಣ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.
ಈ ಸಂಬಂಧ ಇಂದು ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಉದ್ಧವ್ ಠಾಕ್ರೆ ವಿಶ್ವಾಸಮತ ಸಾಬೀತು ಪಡಿಸದೆ ರಾಜೀನಾಮೆ ನೀಡಿದ್ದರಿಂದ ಸರ್ಕಾರ ಮರುಸ್ಥಾಪನೆ ಮಾಡಲಾಗುವುದಿಲ್ಲ. ಅಲ್ಲದೇ ಉದ್ಧವ್ ಸರ್ಕಾರ ಬಹುಮತ ಕಳೆದುಕೊಂಡಿತ್ತು ಎಂದು ಭಾವಿಸಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ನಿರ್ಧಾರಕ್ಕೆ ಬಂದಿದ್ದು ಹಾಗೂ ಬಹುಮತ ಸಾಬೀತು ಪಡಿಸಲು ಸೂಚಿಸಿದ ನಿರ್ಧಾರ ತಪ್ಪು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ ಕಾನೂನುಬಾಹಿರವಾಗಿದ್ದು, ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಪಾಕ್ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಇಮ್ರಾನ್ ಖಾನ್ ರನ್ನು ನಾಳೆ ಬೆಳಗ್ಗೆ 10ರ ವೇಳೆಗೆ ಇಸ್ಲಮಾಬಾದ್ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಇಮ್ರಾನ್ ಖಾನ್ ಬಂಧನದ ನಂತರ ದೇಶದಲ್ಲಿ ಹಿಂಸಾಚಾರ ತಾರಕಕ್ಕೇರಿದ್ದು, ಎಲ್ಲೆಡೆ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಸೇನೆಯ ನೆರವು ಪಡೆದಿತ್ತು. ಆದರೆ ಇಮ್ರಾನ್ ಖಾನ್ ಬೆಂಬಲಿಗರ ಕೃತ್ಯಗಳಿಗೆ 8 ಮಂದಿ ಹತ್ಯೆಯಾಗಿದ್ದಾರೆ. ನೂರಾರು ಮಿಲಿಟರಿ ವಾಹನಗಳು, ಸೇನಾ ಪ್ರಧಾನ ಕಚೇರಿ, ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಿ ಧ್ವಂಸ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸುಮಾರು 2000 ಜನರನ್ನು ಬಂಧಿಸಲಾಗಿದೆ.
ಇನ್ನು ಇಟಲಿಯ ಮಿಲನ್ ನಲ್ಲಿ ಭಾರೀ ಸ್ಪೋಟ ಸಂಭವಿಸಿದ್ದು, ನೂರಾರು ಕಾರುಗಳು ಬೆಂಕಿಗಾಹುತಿಯಾಗಿವೆ. ಈ ಘಟನೆಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಮಿಲನ್ ರಸ್ತೆಯಲ್ಲಿ ಆಕ್ಸಿಜನ್ ಸಾಗಿಸುವ ವ್ಯಾನ್ ಸ್ಪೋಟಗೊಂಡಿದ್ದು, ಹತ್ತಿರವಿದ್ದ ಕಾರುಗಳು, ಮೋಟಾರ್ ಬೈಕ್ ಗಳು ಸುಟ್ಟುಹೋಗಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ನಗರದ ಮೇಯರ್ ಗೈಸೆಪ್ಪೆ ಸಲಾ ಅವರು, ವಾಹನದ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ವಾಹನ ಚಾಲಕ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾನೆ. ಅವರು ಆಕ್ಸಿಜನ್ ಸಿಲಿಂಡರ್ ಗಳನ್ನು ಸ್ಥಳಾಂತರಿಸುವ ಮೂಲಕ ಅಪಾರ ಪ್ರಮಾಣದಲ್ಲಿ ಸಂಭವಿಸಬೇಕಿದ್ದ ಸ್ಫೋಟವನ್ನು ತಡೆದಿದ್ದಾರೆ ಎಂದರು.
ಭಾರತದ ಟಾಪ್ 10 ಹೈ ಸ್ಟ್ರೀಟ್ ಗಳಲ್ಲಿ ನಾಲ್ಕು ಬೆಂಗಳೂರಿನಲ್ಲಿವೆ ಎಂದು ವರದಿ ತಿಳಿಸಿದೆ. ಅದರಲ್ಲಿ ಮೊದಲ ಸ್ಥಾನದಲ್ಲಿರುವುದು ಬೆಂಗಳೂರಿನ ಎಂ.ಜಿ. ರಸ್ತೆ.
ಬೆಂಗಳೂರಿನ ನಾಲ್ಕು ರಸ್ತೆಗಳು ಮೊದಲ ಹತ್ತು ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು, ಎಂ. ಜಿ. ರೋಡ್ ಮೊದಲ ಸ್ಥಾನ ಪಡೆದುಕೊಂಡಿದೆ. ಗ್ರಾಹಕರಿಗೆ ಅತ್ಯುತ್ತಮ ಶಾಪಿಂಗ್ ಅನುಭವ ನೀಡುವ, ಗುಣಮಟ್ಟ ನಿರ್ಧರಿಸುವ ಬಗ್ಗೆ ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್ ನೈಟ್ ಫ್ರಾಂಕ್ ಇಂಡಿಯಾ ಸಂಸ್ಥೆ ಈ ಪಟ್ಟಿ ಬಿಡುಗಡೆ ಮಾಡಿದೆ.
ಥಿಂಕ್ ರಿಟೇಲ್ 2023 ಹೈ ಸ್ಟ್ರೀಟ್ ರಿಯಲ್ ಎಸ್ಟೇಟ್ ಔಟ್ ಲುಕ್ ಶೀರ್ಷಿಕೆಯೊಂದಿಗೆ ಪ್ರಸಿದ್ಧ 30 ಶಾಪಿಂಗ್ ಸ್ಟ್ರೀಟ್ ಗಳನ್ನು ಪಟ್ಟಿ ಮಾಡಿತ್ತು. ಇದರಲ್ಲಿ ಮೊದಲ ಸ್ಥಾನದಲ್ಲಿ ಎಂಜಿ ರೋಡ್, ಎರಡನೇ ಸ್ಥಾನದಲ್ಲಿ ಹೈದರಾಬಾದ್ನ ಸೋಮಾಜಿಗುಡ ರಸ್ತೆ, ಮೂರನೇ ಸ್ಥಾನದಲ್ಲಿ ಮುಂಬೈ ಲಿಂಕಿಂಗ್ ರೋಡ್ ಸ್ಥಾನ ಪಡೆದುಕೊಂಡಿವೆ.