ನಾವು ನಮಗೆ ಇಷ್ಟವಾದ ಬಟ್ಟೆಯನ್ನು ಹಾಕಿ ಹೊರಗೆ ಹೋಗುವಾಗ ಬಟ್ಟೆ ಕಲೆ ಆಗಬಾದರು ಎಂಬ ವಿಚಾರಕ್ಕೆ ಬಹಳ ಜಾಗೃತೆಯನ್ನು ವಹಿಸುತ್ತೇವೆ. ಕೆಲವೊಮ್ಮೆ ಎಷ್ಟೇ ಜಾಗೃತೆಯನ್ನು ಮಾಡಿದರೂ ಕೂಡ ಬಟ್ಟೆಗಳಿಗೆ ಕಲೆಯಾಗಿ ಬಿಡುತ್ತದೆ ಹಾಗೇ ಕಲೆಯಾದರೆ ನಾವು ಮೊದಲು ಯೋಚಿಸುವುದು ಡ್ರೈಕ್ಲೀನ್ ಗೆ ಕೊಡೋಣ ಎಂದು ಯೋಚಿಸುತ್ತೇವೆ ಆದರೆ ಇಲ್ಲಿ ನೀವು ಮನೆಯಲ್ಲಿಯೇ ಸುಲಭವಾಗಿ ಬಟ್ಟೆಯ ಕಲೆಯನ್ನು ಹೇಗೆ ತೆಗೆಯಬಹುದು ಎಂಬುದನ್ನು ತಿಳಿಸಲಾಗಿದೆ.
ಟೀ ಕಾಫಿ ಸಾಂಬಾರ್ಗಳ ಕಲೆ ತೆಗೆಯಲು:
ಹೆಚ್ಚಾಗಿ ಟೀ ಕಾಫಿ ಸೇವಿಸುವಾಗ ಊಟವನ್ನು ಮಾಡುವಾಗ ಕೈ ತಪ್ಪಿ ಬಿದ್ದು ನಮ್ಮ ಬಟ್ಟೆಯ ಮೇಲೆ ಕಲೆಯಾಗುತ್ತದೆ. ಇಂತಹ ಕಲೆಯನ್ನು ಹೋಗಲಾಡಿಸಲು ಮೊದಲಿಗೆ ಟೀ ಅಥವಾ ಕಾಫಿ ಕಲೆಯನ್ನು ಬಟ್ಟೆಯಿಂದ ತೆಗೆದು ಹಾಕಲು ಕಲೆ ಬಿದ್ದಿರುವ ಜಾಗ ಒದ್ದೆ ಮಾಡಿಕೊಳ್ಳಿ ನಂತರ, ಒಂದು ಸಣ್ಣ ಪಾತ್ರೆಯಲ್ಲಿ, ಸ್ವಲ ನೀರು ಹಾಕಿ ಕೊಂಡು, ಇದಕ್ಕೆ ಒಂದು ಟೇಬಲ್ ಚಮಚ ದಷ್ಟು ಬಿಳಿ ವಿನೆಗರ್ ಅನ್ನು ಹಾಕಿ. ಆಮೇಲೆ ಸ್ವಲ್ಪ ಡಿಟರ್ಜೆಂಟ್ ಪುಡಿಯನ್ನು ಕೂಡ ಮಿಕ್ಸ್ ಹಾಕಿ, ನೊರೆ ಬರುವ ರೀತಿ ಯಲ್ಲಿ ಮಾಡಿಕೊಂಡು, ಕಲೆಯಾಗಿರುವ ಜಾಗದಲ್ಲಿ ಟೂತ್ ಬ್ರಷ್ ಬಳಸಿ ಉಜ್ಜಿ. ಹೀಗೆ ಮಾಡುವುದರಿಂದ, ಸಾಂಬರ್ ಟೀ-ಕಾಫಿಯ ಕಲೆಗಳನ್ನು ತೆಗೆಯಬಹುದು.
ಗ್ರೀಸ್ ಅಥವಾ ಎಣ್ಣೆಯ ಜಿಡ್ಡು ತೆಗೆಯಲು:
ಬಟ್ಟೆಯ ಮೇಲೆ ಗ್ರೀಸ್ ಅಥವಾ ಎಣ್ಣೆಯಾಂಶ ಇರುವ ಜಿಡ್ಡು ಪದಾರ್ಥಗಳು ಅಂಟಿಕೊಂಡರೆ ಅದನ್ನು ತೆಗೆಯುವುದು ತುಂಬಾ ಕಷ್ಟ. ಅರ್ಧ ಬಕೆಟ್ ನೀರಿಗೆ ಒಂದು ಚಮಚದಷ್ಟು ಪುಡಿ ಉಪ್ಪು ಹಾಗೂ ಎರಡು ಟೇಬಲ್ ಚಮಚದಷ್ಟು ನಿಂಬೆ ರಸದ ಮಿಶ್ರಣ ದಲ್ಲಿ ಬಟ್ಟೆಯನ್ನು ನೆನೆಸಿಟ್ಟುಕೊಳ್ಳಿ. ಇಲ್ಲವಾದರೆ ಸ್ವಲ್ಪ ಅಡುಗೆ ಸೋಡ ವನ್ನು ಪೇಸ್ಟ್ ರೀತಿ ಮಾಡಿ ಸವರಿ. ಆ ಬಳಿಕ ಸುಮಾರು ಅರ್ಧಗಂಟೆ ಬಿಟ್ಟು, ಬಿಸಿ ನೀರಿನಲ್ಲಿ ತೊಳೆಯಿರಿ. ಹೀಗೆ ಮೂರು ಸಲ ಮಾಡಿದರೆ ಕಲೆಯನ್ನು ತೆಗೆಯಬಹುದು.
ಹಣ್ಣುಗಳ ರಸದ ಕಲೆ:
ಹಣ್ಣುಗಳನ್ನು ಸೇವಿಸುವಾಗ, ಆಕಸ್ಮಾತ್ ಆಗಿ, ಇವುಗಳ ರಸ ಬಟ್ಟೆಯ ಮೇಲೆ ಬಿದ್ದು ಕಲೆ ಆಗಿಬಿಡುತ್ತದೆ. ಹಣ್ಣಿನಿಂದಾದ ಕಲೆಯ ಮೇಲೆ, ಸ್ವಲ್ಪ ವಿನೆಗರ್ ಅನ್ನು ಹಾಕಿ, ಸರಿಯಾಗಿ ಉಜ್ಜಿಕೊಳ್ಳಿ. ಆ ಬಳಿಕ ಅದನ್ನು ಡಿಟರ್ಜೆಂಟ್ ಹಾಕಿರುವ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಯಲು ಬಿಡಿ. ಆ ಬಳಿಕ ಬಟ್ಟೆಯನ್ನು ಚೆನ್ನಾಗಿ ತೊಳೆಯಿರಿ.
ಲಿಪ್ಸ್ಟಿಕ್ ಕಲೆ:
ಮಹಿಲೆಯರು ಇಂದಿನ ದಿನಗಳಲ್ಲಿ ಹೆಚ್ಚಾಗಿ ಲಿಪ್ಸ್ಟಿಕ್ನ್ನು ಬಳಸುತ್ತಾರೆ ಒಂದು ವೇಳೆ ಬಟ್ಟೆಯ ಮೇಲೆ ಲಿಪ್ಸ್ಟಿಕ್ನ ಕಲೆಯಾಗಿ ಬಿಟ್ಟರೆ, ಅದರ ಮೇಲೆ ಸ್ವಲ್ಪ ಗ್ಲಿಸರಿನ್ ಅನ್ನು ಹಚ್ಚಿ ಆ ಬಳಿಕ ಅರ್ಧ ಗಂಟೆ ಬಿಟ್ಟು ತೊಳೆಯಿರಿ.
ತುಕ್ಕಿನ ಕಲೆ:
ಬಟ್ಟೆಯ ಮೇಲೆ, ಕಬ್ಬಿಣದ ತುಕ್ಕಿನ ಕಲೆಯಾಗಿ ಬಿಟ್ಟರೆ, ಅರ್ಧ ಬಕೆಟ್ ನೀರಿಗೆ, ಒಂದು ಟೇಬಲ್ ಚಮಚ ಆಗುವಷ್ಟು ಪುಡಿ ಉಪ್ಪು ಹಾಗೂ ಎರಡು ಟೇಬಲ್ ಚಮಚ ಆಗುವಷ್ಟು ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಬಟ್ಟೆಯನ್ನು ಅರ್ಧಗಂಟೆ ನೆನಸಿಟ್ಟು. ಆ ಬಳಿಕ ಡಿಟರ್ಜೆಂಟ್ ಸೋಪ್ ಹಾಕಿ ತೊಳೆಯಿರಿ ಕಲೆ ನಿವಾರಣೆಯಾಗುವುದು