ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ನಗರದಲ್ಲಿ ಶನಿವಾರ ಮತ್ತು ಭಾನುವಾರ ನಡೆಸಲು ಉದ್ದೇಶಿಸಿರುವ 37 ಕಿ.ಮೀ ರೋಡ್ ಶೋಗೆ ಹೈಕೋಟ್ ಗ್ರೀನ್ ಸಿಗ್ನಲ್ ನಿಡಿದೆ. ವಕೀಲ ಎನ್ ಪಿ ಅಮೃತೇಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ವಿಜಯ್ಕುಮಾರ್ ಎಸ್.ಪಾಟೀಲ್ ಅವರಿದ್ದ ಅರ್ಜಿ ಇತ್ಯರ್ಥ ಪಡಿಸಿದೆ.
ಸಂವಿಧಾನ ಪರಿಚ್ಛೇದ 19ರ ಪ್ರಕಾರ, ಶಾಂತಿಯುತವಾಗಿ ಚುನಾವಣೆ ಪ್ರಚಾರ ಮಾಡುವುದು, ಸಭೆ ಸೇರುವುದಕ್ಕೆ ಅವಕಾಶವಿದೆ. ಇದನ್ನು ಪರಿಗಣಿಸಿದ ನ್ಯಾಯಪೀಠ ರ್ಯಾಲಿಗೆ ಅನುಮತಿ ನೀಡಿತು. ಅಲ್ಲದೆ, ರ್ಯಾಲಿ ಸಂದರ್ಭದಲ್ಲಿ ಆಂಬ್ಯುಲೆನ್ಸ್, ಶಾಲಾ ಕಾಲೇಜು ಬಸ್ಸುಗಳ ಸಂಚಾರ, ವಿದ್ಯಾರ್ಥಿಗಳ ಪ್ರಯಾಣವನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.
ಜೊತೆಗೆ, ರ್ಯಾಲಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ವಹಿಸಲಾಗಿದೆ ಎಂದು ಕೈಗೊಂಡಿರುವ ಸಂಬಂಧ ಪ್ರತಿವಾದಿಗಳಾದ ಚುನಾವಣಾ ಆಯೋಗ ಮತ್ತು ಪೊಲೀಸ್ ಆಯುಕ್ತರು ನ್ಯಾಯಪೀಠಕ್ಕೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ರ್ಯಾಲಿ ನಡೆಸುವುದಕ್ಕೆ ಅನುಮತಿ ನೀಡಲಾಗುತ್ತಿದೆ ಎಂದು ಪೀಠ ತಿಳಿಸಿದೆ.