ಚುನಾವಣಾ ಕಣ ರಂಗೇರುತ್ತಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಧಿಕಾರದ ಗದ್ದುಗೆ ಹಿಡಿಯಲು ತೀವ್ರ ಪೈಪೋಟಿ ನಡೆಸುತ್ತಿವೆ. ಮತದಾರರನ್ನು ಸೆಳೆಯಲು ಚಲನಚಿತ್ರ ಮತ್ತು ಕಿರುತೆರೆ ಸ್ಟಾರ್ ಗಳನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಗೆಲುವಿಗಾಗಿ ಅಭ್ಯರ್ಥಿಗಳು ನಾನಾ ಕಸರತ್ತು ಮಾಡುತ್ತಿದ್ದಾರೆ. ಅಭ್ಯರ್ಥಿಗಳ ಜೊತೆ ಚಂದನವನದ ಸೆಲೆಬ್ರಿಟಿಗಳು ಪ್ರಚಾರದರಲ್ಲಿ ಸಕ್ಕತ್ ಬ್ಯುಸಿಯಾಗಿದ್ದಾರೆ.
ಚುನಾವಣಾ ಪ್ರಚಾರದಲ್ಲಿರುವ ನಟರು:
ಕಿಚ್ಚ ಸುದೀಪ್:
ನಟ ಕಿಚ್ಚ ಸುದೀಪ್ ತಮ್ಮ ನೆಚ್ಚಿನ ಮಾಮ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪರ ಚುನಾವಣಾ ಪ್ರಚಾರ ಮಾಡುವುದಾಗಿ ಮೊದಲೇ ಬಹಿರಂಗವಾಗಿ ಘೋಷಿಸಿಕೊಂಡಿದ್ದರು. ಬೊಮ್ಮಾಯಿಯವರಿಗೆ ಕೊಟ್ಟ ಮಾತಿನಂತೆ ಬೊಮ್ಮಾಯಿಯವರು ಹೇಳಿದ ಬಿಜೆಪಿ ಅಭ್ಯರ್ಥಿ ಪರ ಭರದಿಂದ ಪ್ರಚಾರ ನಡೆಸುತ್ತಿದ್ದಾರೆ.
ಶಿವರಾಜ್ ಕುಮಾರ್:
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಂಗ್ರೆಸ್ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಅವರ ಸಹೋದರ ಮಧು ಬಂಗಾರಪ್ಪ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಶಿವರಾಜ್ ಕುಮಾರ್ ಪತ್ನಿಗೆ ಸಹಕಾರ ನೀಡುವುದಾಗಿ ಮಾತು ಕೊಟ್ಟಿದ್ದು, ಈಗ ಕಾಂಗ್ರೆಸ್ ಪರ ಭರದಿಂದ ಪ್ರಚಾರ ಮಾಡುತ್ತಿದ್ದಾರೆ.
ದರ್ಶನ್:
ಈ ಹಿಂದೆ ಲೋಕ ಸಭಾ ಚುನಾವಣೆಯಲ್ಲಿ ಸುಮಲತಾ ಪರವಾಗಿ ಪ್ರಚಾರ ಮಾಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಬಾರಿ ಬಿಜೆಪಿ ಪ್ರಚಾರಕ್ಕೆ ಇಳಿದಿದ್ದು, ಭರ್ಜರಿ ಮತ ಪ್ರಚಾರ ಮಾಡುತ್ತಿದ್ದಾರೆ.
ಜಗ್ಗೇಶ್:
ನವರಸ ನಾಯಕ ಜಗ್ಗೇಶ್ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು ವರುಣಾದಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದಾರೆ.
ರಮ್ಯ:
ಸ್ಯಾಂಡಲ್ವುಡ್ ಕ್ವೀನ್ ಎಂದೇ ಖ್ಯಾತಿಯನ್ನು ಪಡೆದುಕೊಂಡಿರುವ ನಟಿ ರಮ್ಯ ಕಾಂಗ್ರೆಸ್ ನಾಯಕಿ ಕೂಡ ಹೌದು. ಇತ್ತೀಚಿನ ದಿನಗಳಲ್ಲಿ ರಾಜಕೀಯದಿಂದ ದೂರ ಉಳಿದಿದ್ದ ರಮ್ಯ ಮತ್ತೆ ಈಗ ರಾಜಕೀಯದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವರುಣಾದಲ್ಲಿ ಸಿದ್ದರಾಮಯ್ಯ ಪರ ಭರ್ಜರಿ ಮತ ಪ್ರಚಾರವನ್ನು ಮಾಡುತ್ತಿದ್ದಾರೆ.
ಮುಖ್ಯಮಂತ್ರಿ ಚಂದ್ರು:
ಹಿರಿಯ ಕಲಾವಿದರಾದ ಮುಖ್ಯಮಂತ್ರಿ ಚಂದ್ರು ಸದ್ಯಕ್ಕೆ ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿರುವ ಚಂದ್ರು ಮತ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಇನ್ನೂ ಬಿಜೆಪಿ ಪರವಾಗಿ ಸುಮಲತಾ ಅಂಬರೀಷ್, ಶೃತಿ, ತಾರಾ, ಹರ್ಷಿಕಾ ಪೂಣಚ್ಚ ಸೇರಿದಂತೆ ಹಲವು ಕಿರುತೆರೆ ಕಲಾವಿದರು ಪ್ರಚಾರ ತೊಡಗಿಸಿಕೊಂಡಿದ್ದರೆ ಕಾಂಗ್ರೇಸ್ ಪರವಾಗಿ ದುನಿಯಾ ವಿಜಿ ಸೇರಿದಂತೆ ಹಲವಾರು ತಾರೆಯರು ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.