ಭಾರತದ ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಅವರು ಶುಕ್ರವಾರ (ಮೇ.5ರಂದು) ನಡೆಯಲಿರುವ ದೋಹಾ ಡೈಮಂಡ್ ಲೀಗ್ ನಲ್ಲಿ ಸ್ಪರ್ಧಿಸಲಿದ್ದಾರೆ.
ಡೈಮಂಡ್ ಲೀಗ್ ಚಾಂಪಿಯನ್ ಆದ ನಂತರ ನೀರಜ್ ಚೋಪ್ರಾ ಸ್ಪರ್ಧಿಸುತ್ತಿರುವ ಮೊದಲ ಕೂಟ ಇದಾಗಿದೆ. ಇದು ಕತಾರ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆಯಲಿದ್ದು, ವಿಶ್ವದ ಪ್ರಮುಖ ಅಥ್ಲೀಟ್ ಗಳು ಪೈಪೋಟಿ ನೀಡಲಿದ್ದಾರೆ.
ಈ ಬಗ್ಗೆ ಮಾತನಾಡಿದ ನೀರಜ್ ಚೋಪ್ರಾ, ವಿಶ್ವದ ಅತ್ಯುತ್ತಮ ಅಥ್ಲೀಟ್ ಗಳು ಇರುವುದು ಒಳ್ಳೆಯ ವಿಚಾರವಾಗಿದೆ. ಪಂದ್ಯಕ್ಕೆ ಅಗತ್ಯವಿರುವ ತರಬೇತಿ ನಡೆಯುತ್ತಿದೆ. ಉತ್ತಮ ಗೆಲುವಿನೊಂದಿಗೆ ಬರುತ್ತೇವೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಈ ಬಾರಿಯ ದೋಹಾ ಡೈಮಂಡ್ ಲೀಗ್ ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಗ್ರೆನೇಡಾದ ಆಂಡರ್ಸನ್ ಪೀಟರ್ಸ್ ಮತ್ತು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗಳಿಸಿದ್ದ ಚೇಕ್ ರಿಪಬ್ಲಿಕ್ ನ ಯಾಕುಬ್ ವದ್ಲೇಚ್ ಭಾಗವಹಿಸಲಿದ್ದಾರೆ.
ಈ ಹಿಂದೆ 2018ರಲ್ಲಿ ನಡೆದ ಡೈಮಂಡ್ ಲೀಗ್ ನಲ್ಲಿ ನೀರಜ್ ಚೋಪ್ರಾ ಪಾಲ್ಗೊಂಡಿದ್ದರು. ಅಂದಿನ ಪಂದ್ಯದಲ್ಲಿ 87.43 ಮೀ. ಸಾಧನೆಯೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದರು.