ಬೇಸಿಗೆಯ ರಜೆಯಲ್ಲಿ ಮಕ್ಕಳು ಹೆಚ್ಚಾಗಿ ಮನೆಯಲ್ಲೇ ಇರುವ ಕಾರಣ ತಾಯಿಯಲ್ಲಿ ತಿಂಡಿಕೊಡುವಂತೆ ಪದೇ ಪದೇ ಪೀಡಿಸುತ್ತಿರುತ್ತಾರೆ. ಮಕ್ಕಳು ಹಾಗೇ ಕೇಳುವಾಗ ತಾಯಂದಿರು ಅಂಗಡಿಗಳಲ್ಲಿ ಖರೀದಿಸಿದ ತಿಂಡಿಗಳನ್ನು ಮಕ್ಕಳಿಗೆ ನೀಡುತ್ತಾರೆ ಹೀಗೆ ಕೊಡುವುದರಿಂದ ಮಕ್ಕಳ ಆರೋಗ್ಯದ ಮೇಲೆ ಪ್ರಭಾವ ಬೀರಿ ಅವರ ಅರೋಗ್ಯ ಹದಗೆಡಬಹುದು ಆದರಿಂದ ಮನೆಯಲ್ಲಿಯೇ ಮಕ್ಕಳಿಗೆ ಇಷ್ಟವಾದ ತಿಂಡಿಗಳನ್ನು ತಯಾರಿಸಿ ಕೊಟ್ಟು ಅವರ ಆರೋಗ್ಯವನ್ನು ಕಾಪಾಡಬಹುದು. ಮನೆಯಲ್ಲಿಯೇ ಸುಲಭವಾಗಿ ತಯಾರಿಸುವ ಬೆಣ್ಣೆ ಮುರುಕ ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ.
ಬೇಕಾಗುವ ಸಾಮಾಗ್ರಿಗಳು:
ಹುರಿಗಡಲೆ- ಒಂದು ಕಪ್
ಅಕ್ಕಿ ಹಿಟ್ಟು- ನಾಲ್ಕು ಕಪ್
ಇಂಗು- ಸ್ವಲ್ಪ
ಬಿಳಿ ಎಳ್ಳು- 2 ಚಮಚ
ಉಪ್ಪು- ರುಚಗೆ ತಕ್ಕಷ್ಟು
ಅಚ್ಚ ಖಾರದ ಪುಡಿ- 1 ಚಮಚ
ಬೆಣ್ಣೆ- ನಾಲ್ಕು ಚಮಚ
ಎಣ್ಣೆಅಗತ್ಯವಿದ್ದಷ್ಟು
ತಯಾರಿಸುವ ವಿಧಾನ:
ಮೊದಲಿಗೆ ಮಿಕ್ಸಿ ಜಾರ್’ಗೆ ಹುರಿಗಡಲೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ನಂತರ ಹುರಿಗಡಲೆ ಹಾಗೂ ಅಕ್ಕಿ ಹಿಟ್ಟು ಉಪ್ಪು, ಖಾರದ ಪುಡಿ, ಇಂಗು, ಬಿಳಿ ಎಳ್ಳು ಹಾಕಿ ಚೆನ್ನಾಗಿ ಮುಶ್ರಣ ಮಾಡಿ. ನಂತರ ಕಾಯಿಸಿದ ಬೆಣ್ಣೆಯನ್ನು ಹಾಕಿ ಮಿಶ್ರಣ ಮಾಡಿ. ಅಗತ್ಯವಿದ್ದಷ್ಟು ನೀರು ಹಾಕಿ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ. ನಂತರ ಚಕ್ಕುಲಿ ಅಂಚಿಗೆ ಎಣ್ಣೆ ಸವರಿ ಅದರಲ್ಲಿ ಹಿಟ್ಟನ್ನು ತುಂಬಿಸಿ. ಕಾದಿರುವ ಎಣ್ಣೆಯಲ್ಲಿ ಚಕ್ಕುಲಿಯನ್ನು ಒತ್ತಿ. ಎರಡೂ ಬದಿ ಕಂದು ಬಣ್ಣ ಬರುವವರೆಗೂ ಹಾಗೂ ಗರಿಗರಿಯಾಗುವವರೆಗೂ ಕರಿಯಿರಿ. ಬೇಕಾದರೆ ಪೇಪರ್ ಮೇಲೆ ಚಿಕ್ಕ ಚಿಕ್ಕ ಚಕ್ಕುಲಿ ಒತ್ತಿಟ್ಟುಕೊಂಡು ನಂತರ ಬಿಸಿಯಾದ ಎಣ್ಣೆಯಲ್ಲಿ ಕರಿದು ತೆಗೆಯಬಹುದು. ಇದು ತಣ್ಣಗಾದ ಮೇಲೆ ಡಬ್ಬದಲ್ಲಿ ತೆಗೆದಿಟ್ಟು ನಿಮ್ಮ ಮಕ್ಕಳು ತಿಂಡಿ ಕೇಳುವಾಗ ಇದನ್ನು ಕೊಡಿ.