ಹಿಮ್ಮಡಿ ನೋವು ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಒಮೊಮ್ಮೆ ಎಲ್ಲರಿಗೂ ಹಿಮ್ಮಡಿ ನೋವು ಬರುತ್ತದೆ.. ಮುಂಜಾನೆ ಏಳುವಾಗ, ಸ್ವಲ್ಪ ಹೊತ್ತು ಕುಳಿತು ಏಳುವಾಗ, ಹಿಮ್ಮಡಿಯಲ್ಲಿ ಅತೀವ ನೋವು ಕಂಡು ಕೆಲವು ಹೆಜ್ಜೆ ನಡೆದ ಮೇಲೆ ಈ ನೋವು ಕಡಿಮೆಯಾಗುತ್ತದೆ. ಆದರೆ ಸಂಜೆಯಾಗುತ್ತಿದ್ದಂತೆ ನೋವು ಮತ್ತೆ ಹೆಚ್ಚಾಗಬಹುದು. ಮೂವತ್ತು ವರ್ಷ ದಾಟಿದವರಲ್ಲಿ ಮತ್ತು ದೇಹದ ತೂಕ ಹೆಚ್ಚಾಗಿರುವ ಮಹಿಳೆಯರಲ್ಲಿ ಸಾಮಾನ್ಯವಾಗಿ ಹಿಮ್ಮಡಿ ನೋವು ಕಾಣಿಸಿಕೊಳ್ಳುತ್ತದೆ.
ಹಿಮ್ಮಡಿ ನೋವಿಗೆ ಕಾರಣಗಳು:
ಹಿಮ್ಮಡಿ ನೋವಿನ ಸಮಸ್ಯೆಗೆ ಹಲವಾರು ಕಾರಣಗಳಿವೆ. ಕೊಬ್ಬು ಅಥವಾ ದೇಹದ ತೂಕ ಹೆಚ್ಚಾಗುವುದರಿಂದ ರಕ್ತ ಪೂರೈಕೆಯ ಮೇಲೆ ಪರಿಣಾಮ ಬೀರುವುದು ಸೇರಿದಂತೆ ಬೇರೆ ಬೇರೆ ಕಾರಣಗಳಿರಬಹುದು. ನೋವು ಹೆಚ್ಚಾಗಿದ್ದರೆ ವೈದ್ಯರ ಬಳಿ ಹೋಗುವುದು ಒಳ್ಳೆಯದು. ಕೆಲವೊಮ್ಮೆ ಗಾಯಗಳು, ಉಳುಕು, ಮುರಿತ ಇತ್ಯಾದಿಗಳು ಹಿಮ್ಮಡಿ ನೋವನ್ನು ಉಂಟುಮಾಡುತ್ತವೆ. ಅಲ್ಲದೇ ಸಂಧಿವಾತ, ಹೀಲ್ ಸ್ಪರ್ಸ್ ಸೇರಿದಂತೆ ಅನೇಕ ವೈದ್ಯಕೀಯ ಸಮಸ್ಯೆಗಳು ಹಿಮ್ಮಡಿ ನೋವನ್ನು ಉಂಟುಮಾಡುತ್ತವೆ.
ದೇಹದ ಗಾತ್ರ ಮತ್ತು ತೂಕ ಹೆಚ್ಚಾದಂತೆ ಹಿಮ್ಮಡಿ ನೋವು ಕಾಣಿಸಿಕೊಳ್ಳುತ್ತದೆ. ಅಧಿಕ ತೂಕ ಹೊಂದಿರುವ ವ್ಯಕ್ತಿಯು ನಡೆಯುವಾಗ ಅಥವಾ ಓಡುವಾಗ ಹಿಮ್ಮಡಿಯ ಮೇಲೆ ಹೆಚ್ಚಿನ ಒತ್ತಡವನ್ನು ಹಾಕಿದಾಗ ನೋವು ಉಂಟಾಗಬಹುದು. ಆಗ ತೂಕ ಇಳಿಸಿಕೊಳ್ಳಲು ಮತ್ತು ಹಿಮ್ಮಡಿ ಮೇಲೆ ಹೆಚ್ಚು ಒತ್ತಡ ಬೀಳದಂತೆ ಜಾಗ್ರತೆ ವಹಿಸಬೇಕು.
ಹಿಮ್ಮಡಿ ನೋವಿಗೆ ಪರಿಹಾರ:
ದಿನ ನಿತ್ಯ ಮೃದು ಮತ್ತು ಹಿತಕರವೆನಿಸುವ ಚಪ್ಪಲಿಗಳನ್ನು ಬಳಸಬೇಕು. ಯುವ ಜನರಾಗಿದ್ದರೆ ಆಟದ ಸಮಯದಲ್ಲಿ ಉತ್ತಮ ಗುಣಮಟ್ಟದ ಬೂಟುಗಳನ್ನು ಹಾಕಿಕೊಳ್ಳಬೇಕು. ಬೂಟುಗಳು ಪಾದಗಳಿಗೆ ಸರಿಯಾಗಿ ಹೊಂದಿಕೊಳ್ಳಬೇಕು ಮತ್ತು ಅಡಿಭಾಗ ಆರಾಮ ದಾಯಕವಾಗಿರಬೇಕು. ಹಿಮ್ಮಡಿ ನೋವಿದ್ದರೆ ಅದರ ಪರಿಹಾರಕ್ಕೆಂದೇ ವಿಶೇಷ ಪಾದರಕ್ಷೆಗಳು ಲಭ್ಯವಿವೆ. ಅವುಗಳನ್ನು ಧರಿಸುವುದರಿಂದಲೂ ಸಮಸ್ಯೆ ಕಡಿಮೆಯಾಗುತ್ತದೆ.
ನೋವು ಇದ್ದಾಗ ಹಿಮ್ಮಡಿಗೆ ಸಾಕಷ್ಟು ವಿಶ್ರಾಂತಿ ನೀಡಬೇಕು. ಆರಾಮದಾಯಕವಾದ ಪಾದರಕ್ಷೆಗಳನ್ನು ಧರಿಸಬೇಕು. ಹೆಚ್ಚು ಹೊತ್ತು ನಿಲ್ಲಬಾರದು ಆಥವಾ ನಿಂತು ಕೆಲಸ ಮಾಡಬಾರದು. ಬರಿಗಾಲಿನಲ್ಲಿ ಗಟ್ಟಿಯಾದ ನೆಲದ ಮೇಲೆ ಹೆಚ್ಚು ಹೊತ್ತು ನಡೆಯಬಾರದು. ನಿರ್ದಿಷ್ಟ ಸ್ಥಳದಲ್ಲಿ ನೋವು ಹೆಚ್ಚಾಗಿದ್ದರೆ ಅಲ್ಲಿ ಹೆಚ್ಚು ಒತ್ತಡ ಹಾಕಬಾರದು. ಅತಿ ಹೈಹೀಲ್ಡ್ ಚಪ್ಪಲಿ ಅಥವಾ ಗಟ್ಟಿಯಾದ ಚಪ್ಪಲಿ ಒಳ್ಳೆಯದಲ್ಲ.
ಬೆಳಿಗ್ಗೆ ಏಳುವಾಗ ಅಥವಾ ಸ್ವಲ್ಪ ಸಮಯ ಕುಳಿತು ಮೇಲೆ ಏಳುವಾಗ ಪಾದವನ್ನು ವರ್ತುಲಾಕಾರದಲ್ಲಿ ಮತ್ತು ಮುಂದೆ, ಹಿಂದೆ ತಿರುಗಿಸಿ ಹತ್ತು ಹೆಜ್ಜೆ ತುದಿಗಾಲಲ್ಲಿ ನಡೆದು ಅನಂತರ ಹಿಮ್ಮಡಿಯನ್ನು ನೆಲದ ಮೇಲೆ ಊರುವುದು ಒಳ್ಳೆಯದು.
ಕೊಬ್ಬರಿ ಎಣ್ಣೆ/ ನೀಲಗಿರಿ ಎಣ್ಣೆ/ ಔಷಧೀಯ ತೈಲ ಹಾಕಿ ಐದು ಅಥವಾ ಹತ್ತು ನಿಮಿಷಗಳ ಕಾಲ ಮಸಾಜು ಮಾಡುವುದರಿಂದ ನೋವು ಕಡಿಮೆ ಆಗುತ್ತದೆ. ನಿಯಮಿತವಾಗಿ ಮಸಾಜು ಮಾಡುತ್ತಿದ್ದರೆ ನೋವು ಮಾಯವಾಗಬಹುದು.
ಎಕ್ಕದ ಎಲೆಯನ್ನು ಬಿಸಿ ಮಾಡಿ ಹಿಮ್ಮಡಿಯ ಮೇಲಿಟ್ಟು ಶಾಖ ತೆಗೆದುಕೊಳ್ಳುವುದರಿಂದ ಹಿಮ್ಮಡಿ ನೋವು ಕಡಿಮೆ ಆಗುವುದು. ಸ್ವಲ್ಪ ನುಗ್ಗೆ ಸೊಪ್ಪನ್ನು ಬಿಸಿ ಮಾಡಿ ಅದನ್ನು ತೆಳು ಬಟ್ಟೆಯಲ್ಲಿ ಹಾಕಿ ನೋವಿರುವ ಭಾಗಕ್ಕೆ ಕಟ್ಟಿಕೊಂಡರೂ ನೋವು ಶಮನವಾಗುತ್ತದೆ.