ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿನ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಕಾಂಗ್ರೆಸ್ ಸರ್ಕಾರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಗುರಿಯಾಗಿಸಿಕೊಂಡಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ್ ಜೋಶಿ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.
ಸಮಾಜಿಕ ಮಾಧ್ಯಮದಲ್ಲಿ ರಾಜ್ಯ ಸರ್ಕಾರವು ತನ್ನ ದುರಾಡಳಿತವನ್ನು ಮರೆಮಾಚಲು, 81 ವರ್ಷದ ಮಾಜಿ ಸಿಎಂ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವ ಮೂಲಕ ಅವರ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ಸಚಿವ ಜೋಶಿ ಹೇಳಿದ್ದಾರೆ.
“ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸೋತಿದೆ. ಸೋಲನ್ನು ಒಪ್ಪಿಕೊಳ್ಳಲು ಸಾಧ್ಯವಾಗದೆ, ಅದು ಆಡಳಿತವನ್ನು ತನ್ನ ಇಚ್ಛೆಯಂತೆ ಬಳಸಿಕೊಳ್ಳುವಲ್ಲಿ ತೊಡಗಿದೆ” ಎಂದು ಜೋಶಿ ಹೇಳಿದರು.
ನಾಲ್ಕು ತಿಂಗಳ ಹಿಂದೆ ಯಡಿಯೂರಪ್ಪ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾದಾಗ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ದುರುದ್ದೇಶದಿಂದ ದೂರು ದಾಖಲಿಸಿದ್ದಾರೆ. ಆದರೆ, ಚುನಾವಣೆಯ ನಂತರ ಕಾಂಗ್ರೆಸ್ ನಾಯಕರು ಹೊಸ ನಾಟಕವನ್ನು ಪ್ರಾರಂಭಿಸಿದ್ದಾರೆ.
ದೂರು ನೀಡಿದ ಮಹಿಳೆ ವಿವಿಧ ಐಎಎಸ್, ಐಪಿಎಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳ ವಿರುದ್ಧ 60 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ಅವರೇ ಉಲ್ಲೇಖಿಸಿದ್ದಾರೆ ಎಂದು ಜೋಶಿ ಹೇಳಿದರು. “ಈಗ, ಅವರ ದುರಾಡಳಿತವನ್ನು ಮರೆಮಾಚುವ ಏಕೈಕ ಉದ್ದೇಶದಿಂದ, ಯಡಿಯೂರಪ್ಪ ಅವರನ್ನು ಗುರಿಯಾಗಿಸಲಾಗುತ್ತಿದೆ” ಎಂದು ಕೇಂದ್ರ ಸಚಿವರು ಹೇಳಿದರು.
ಯಡಿಯೂರಪ್ಪ ಅವರನ್ನು ಸುಳ್ಳು ಪ್ರಕರಣಕ್ಕೆ ಎಳೆದು ತರುವುದು ಸೇಡಿನ ರಾಜಕಾರಣ ಎಂದು ಅವರು ಹೇಳಿದರು.