ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಎಪ್ರಿಲ್ 21ರಂದು ಪ್ರಕಟವಾಗಿದ್ದು ಬೆಂಗಳೂರಿನ ಜಯನಗರದ ವಿಜಯಾ ಕಾಲೇಜನಲ್ಲಿ ವ್ಯಾಸಂಗ ಮಾಡುತ್ತಿದ್ದ ಅವಳಿ ಮಕ್ಕಳಿಬ್ಬರು ಒಂದೇ ಸಮನಾದ ಅಂಕ ಪಡೆದುಕೊಂಡು ಅಚ್ಚರಿ ನೀಡಿರುತ್ತಾರೆ.
ಬನ್ನೇರುಘಟ್ಟ ರಸ್ತೆ, ದೇವರಚಿಕ್ಕನಹಳ್ಳಿಯ, ನಂಜುಂಡಸ್ವಾಮಿ ಮತ್ತು ನಾಗರತ್ನ ದಂಪತಿಗಳ ಪುತ್ರರಾದ ಸಂತೋಷ್ ಮತ್ತು ಸರ್ವೇಶ ಅವರು 9 ನಿಮಿಷಗಳ ಅಂತರದಲ್ಲಿ ಜನಿಸಿದ ಅವಳಿ ಮಕ್ಕಳಿಬ್ಬರು ವಿಜಯ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ 94.3% ಅಂಕ ಪಡೆದುಕೊಂಡು, ಅವಳಿ ಮಕ್ಕಳಿಬ್ಬರು ಈ ರೀತಿ ಸಮಾನ ಅಂಕ ಪಡೆದಿರುವುದು ವಿಶೇಷವಾಗಿದೆ.
ನಮ್ಮಿಬ್ಬರಿಗೆ ಹಿಂದೆ ಯಾವುದೇ ಪರೀಕ್ಷೆಯಲ್ಲಿ ಸಮಾನವಾದ ಅಂಕ ದೊರೆತಿರಲಿಲ್ಲ, ಇಬ್ಬರು ಒಟ್ಟಿಗೆ ಓದುತ್ತಿದ್ದೆವು, ಒಂದೇ ರೀತಿಯ ಬಟ್ಟೆ ಧರಿಸುತ್ತಿದ್ದೆವು, ಇಬ್ಬರ ಅಭಿರುಚಿ ಕೂಡ ಒಂದೇ ಆಗಿದ್ದು ಈಗ ಅಂಕಗಳು ಕೂಡ ಒಂದೇ ರೀತಿಯಲ್ಲಿ ಬಂದಿರುವುದು ನಮಗೆ ಖುಷಿ ನೀಡಿದೆ. ವ್ಯವಹಾರ ಅಧ್ಯಯನ ಮತ್ತು ಲೆಕ್ಕ ವಿಜ್ಞಾನದಲ್ಲಿ ನಾವಿಬ್ಬರು 100 ಅಂಕ ಪಡೆದುಕೊಂಡಿದ್ದು ಉಳಿದ ವಿಷಯಗಳಲ್ಲಿ ಬೇರೆ ಬೇರೆ ಆಗಿದೆ ಎಂದು ಅವಳಿ ಮಕ್ಕಳಿಬ್ಬರು ಸಂತಸ ವ್ಯಕ್ತಪಡಿಸಿದರು