ಶಿವಮೊಗ್ಗ: ಕರ್ನಾಟಕ ಬಿಜೆಪಿಗೆ ಮತ್ತೊಂದು ಹಿನ್ನಡೆಯಾಗಿದ್ದು, ಶಿವಮೊಗ್ಗ ಜಿಲ್ಲೆಯ ಆಯನೂರು ಮಂಜುನಾಥ್ ಅವರು ಬುಧವಾರ ಎಂಎಲ್ಸಿ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಮಂಜುನಾಥ್ ಶಿವಮೊಗ್ಗ ನಗರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಪ್ರಸ್ತುತ ಆ ಕ್ಷೇತ್ರವನ್ನು ಮಾಜಿ ಸಚಿವ ಕೆ ಈಶ್ವರಪ್ಪ ಪ್ರತಿನಿಧಿಸುತ್ತಿದ್ದರು. ಭಜರಂಗದಳದ ಕಾರ್ಯಕರ್ತ ಹರ್ಷ ಎಂಬಾತನ ಬರ್ಬರ ಹತ್ಯೆ ಹಾಗೂ ಗೊಂದಲದ ಹಿಂಸಾಚಾರದ ಘಟನೆಗಳಿಗೆ ಸಾಕ್ಷಿಯಾದ ಕ್ಷೇತ್ರಕ್ಕೆ ಬಿಜೆಪಿ ಇನ್ನೂ ಟಿಕೆಟ್ ಘೋಷಿಸಿಲ್ಲ.
ಮಂಜುನಾಥ್ ಅವರನ್ನು ಶಿವಮೊಗ್ಗದಿಂದ ಕಣಕ್ಕಿಳಿಸುವುದಿಲ್ಲ ಎಂದು ಪಕ್ಷ ದೃಢಪಡಿಸಿದ ಬಳಿಕ ಇವರ ಘೋಷಣೆ ಹೊರಬಿದ್ದಿದೆ ಎಂದು ಮೂಲಗಳು ತಿಳಿಸಿವೆ. ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದು, ಇಂದು ಹುಬ್ಬಳ್ಳಿಗೆ ತೆರಳಿ ಸ್ಪೀಕರ್ಗೆ ರಾಜೀನಾಮೆ ಸಲ್ಲಿಸುತ್ತೇನೆ ಎಂದರು.
ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸುತ್ತೇನೆ. ನಾಳೆ (ಗುರುವಾರ ಏಪ್ರಿಲ್ 19) ಶಿವಮೊಗ್ಗ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತೇನೆ, ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೆ ಎಂಬುದನ್ನು ಮಧ್ಯಾಹ್ನದೊಳಗೆ ಪ್ರಕಟಿಸುತ್ತೇನೆ ಎಂದು ಆಯನೂರು ಮಂಜುನಾಥ್ ಹೇಳಿದ್ದಾರೆ.
ನಾನು ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದೇನೆ. ಟಿಕೆಟ್ ನಿರಾಕರಣೆಯಿಂದ ನಾನು ಪಕ್ಷ ಬಿಡುವುದಿಲ್ಲ. ನಗರದ ಬೆಳವಣಿಗೆಗೆ ಕೊಡುಗೆ ನೀಡಲು ಈ ನಿರ್ಧಾರ ಕೈಗೊಂಡಿದ್ದೇನೆ. ಹಲವು ಪ್ರಶ್ನೆಗಳಿಗೆ ನಾನು ಉತ್ತರ ನೀಡಬೇಕಾಗಿದೆ, ಚುನಾವಣೆಯ ಸಮಯದಲ್ಲಿ ನಾನು ಉತ್ತರಿಸುತ್ತೇನೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೆ ಬೆಂಬಲವಾಗಿ ಹೇಳಿಕೆ ನೀಡುವ ಏಕೈಕ ವ್ಯಕ್ತಿ ನಾನು, ಎಂದು ಹೇಳಿಕೊಂಡಿದ್ದಾರೆ.