ಋತುಸ್ರಾವದ ಕುರಿತು ಇರುವ ಅಭಿಪ್ರಾಯಗಳು ವರ್ಷಗಳು ಕಳೆದಂತೆ ಕಡಿಮೆಯಾಗಿ ಜಾಗೃತಿ ಹೆಚ್ಚಾಗುತ್ತಿದ್ದರೂ ಮಹಿಳೆಯರಲ್ಲಿ ಮುಟ್ಟಿಗೆ ಸ೦ಬಂಧಿಸಿದ ಸಮಸ್ಯೆಗಳು ಹಿಂದೆಂದಿಗಿಂತಲೂ ಜಾಸ್ತಿಯಾಗ್ತಿರೋದು ಕಾಣಿಸ್ತಿದೆ.
ಇಷ್ಟೇ ಅಲ್ಲ ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ತಯಾರಿಸುವ ಕಂಪೆನಿಗಳು “ಆ ದಿನಗಳಲ್ಲಿ ನೃತ್ಯ ಮಾಡಬಹುದು, ಈಜಬಹುದು, ಟ್ರೆಕ್ಕಿಂಗ್ ಹೋಗಬಹುದು. ಅಲ್ಲದೆ ಈ ಆಧುನಿಕ ಯುಗದಲ್ಲಿ ಮಹಿಳೆಯರು ಆ ದಿನಗಳಲ್ಲಿ ಮನೆಯಲ್ಲಿ ಕುಳಿತುಕೊಳ್ಳಬೇಕಾಗಿಲ್ಲ” ಎಂದು ಜಾಹೀರಾತುಗಳಲ್ಲಿ ಸಂದೇಶವನ್ನು ಕೊಡುವುದೂ ಕಾಣಬಹುದು .
ಹಾಗಾದರೆ ಆ ಉತ್ಪನ್ನಗಳು ಹುಡುಗಿಯರಿಗೆ ಅಥವಾ ಮಹಿಳೆಗೆ ಸಹಾಯ ಮಾಡುತ್ತಿದೆಯೇ?
ಗರ್ಭಧರಿಸುವಲ್ಲಿನ ತೊಂದರೆಗಳು, ಫೈಬ್ರಾಯ್ಡ್ಗಳು, ಪಿಸಿಓಎಸ್, ಅತಿಯಾದ ಸ್ರಾವವನ್ನು ಅಥವಾ ಇತರರಲ್ಲಿ ಅಲ್ಪ ಪ್ರಮಾಣದ ಸ್ರಾವವನ್ನು ಮತ್ತು ಇನ್ನೂ ಅನೇಕ ಸಮಸ್ಯೆಗಳನ್ನು ನಾವು ಏಕೆ ನೋಡುತ್ತಿದ್ದೇವೆ? ಪಿತೃ ಪ್ರಧಾನ ಕುಟುಂಬ ವ್ಯವಸ್ಥೆ ಇದ್ದ ಕಾರಣ
ಎಂದೊ ಅಥವಾ ಅವರಿಗೆ ಋತುಸ್ರಾವದ ವೈಜ್ಞಾನಿಕತೆ ಬಗ್ಗೆ ಮಾಹಿತಿಯ ಕೊರತೆ ಇತ್ತೆಂದೊ ನಮ್ಮ ಪೂರ್ವಜರನ್ನು ನಾವು ಅಪಹಾಸ್ಯ ಮಾಡುತ್ತಾ ಹಿಂದಿನ ದಿನಗಳಲ್ಲಿ ಇದ್ದ ಹಾಗೆ ವಿಶ್ರಾಂತಿ ತೆಗೆದುಕೊಳ್ಳದೆ ಇನ್ನಷ್ಟು ತೊಂದರೆಗೊಳಗಾಗುತ್ತಿದ್ದೇವೆ.
ಆಯುರ್ವೇದವು ಮುಟ್ಟಿನ ಸಮಯದಲ್ಲಿ ಯಾವುದೇ ಚಟುವಟಿಕೆಗಳನ್ನು ಬೇಡವೆಂದು ಸ್ಪಷ್ಟವಾಗಿ ಹೇಳುತ್ತದೆ ಮತ್ತು ಸಂಪೂರ್ಣ ವಿಶ್ರಾಂತಿಗೆ ಸಲಹೆ ನೀಡುತ್ತದೆ. ಆ ದಿನಗಳಲ್ಲಿ ಕನಿಷ್ಠ ಮೂರು ದಿನಗಳಾದರೂ ಮಹಿಳೆಯರಿಗೆ ಸಂಪೂರ್ಣ ವಿಶ್ರಾಂತಿ ಸಿಗಬೇಕೆಂಬುದು ನಿಜವಾದ ಅಭಿಪ್ರಾಯ.
ಆಯುರ್ವೇದದ ಪ್ರಕಾರ ಮುಟ್ಟಿನ ಸಮಯದಲ್ಲಿ
ಸಂಭೋಗ, ಹಗಲಿನಲ್ಲಿ ನಿದ್ರೆ, ತಲೆ ಸ್ನಾನ, ಮಸಾಜ್, ದೈಹಿಕ ವ್ಯಾಯಾಮ, ಕ್ರೀಮ್ ಹಾಗೂ ಫೇಸ್ ಮಾಸ್ಕ್ ಬಳಕೆ, ಓಟ ಅಳುವುದು ಅತಿಹಾಸ್ಯ ಅತಿ ಮಾತು ಉಪ್ಪು, ಹುಳಿ ಮತ್ತು ಆಮ್ಲೀಯ ಆಹಾರ ಇವೆಲ್ಲವೂ ನಿಷಿದ್ಧವಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ವಾತವನ್ನು ಜಾಸ್ತಿ ಮಾಡುವಂತಹ ಕೆಲಸಗಳನ್ನು ಮಾಡದೆ ವಿಶ್ರಾಂತಿ ತೆಗೆದುಕೊಳ್ಳುವುದರಿಂದ ಹುಡುಗಿಯರು ಹಾಗೂ ಮಹಿಳೆಯರು ತಮ್ಮ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು.