ನಮ್ಮ ದೇಶದಲ್ಲಿ ಮನರಂಜನೆಯ ವಿಷಯ ಅಂತ ಬಂದ್ರೆ, ನೋಡಿ, ಕೇಳಿ, ಮಾಡಿ ಸಾಕಾಗುವಷ್ಟು ಮನರಂಜನೆ ಇದೆ. ಹಾಗೆಯೇ ಇಲ್ಲಿನ ಪ್ರತಿ ಹಳ್ಳಿ ಗಲ್ಲಿ-ಗಲ್ಲಿಯ ಮನರಂಜನೆ ಜನರಲ್ಲಿ ತನ್ನದೇ ಆದ ಛಾಪನ್ನು ಮೂಡಿಸುವಲ್ಲಿ ಸಫಲವಾಗಿದೆ. ಆದರೂ ಜನರಿಗೆ ಹೊಸತೇನನ್ನೂ ನೋಡುವ ತವಕ. ಈ ನಿಟ್ಟಿನಲ್ಲಿ ದಕ್ಷಿಣ ಕೊರಿಯಾ ದೇಶದ ಹೆಸರಾಂತ ಡ್ರಾಮಾ ಸೀರೀಸ್ ಜನರ ಮನ್ಸಸ್ಸು ವಿಶೇಷವಾಗಿ ಯುವಕ/ಯುವತಿಯರನ್ನು ಆಕರ್ಷಿಸುವುದರಲ್ಲಿ ಸಂಪೂರ್ಣ ಯಶಸ್ಸು ಪಡೆದಿದೆ.
ಎಷ್ಟೋ ಯುವಕ ಯುವತಿಯರು, ತಮ್ಮ ಪರೀಕ್ಷೆ, ಅಸೈನ್ಮೆಂಟ್ಗಳನ್ನು ಬದಿಗೊತ್ತಿ ರಾತ್ರಿ ಹಗಲು ನಿದ್ದೆಗೆಟ್ಟು ಈ ಸೀರೀಸ್ ನೋಡೋ ಉದಾಹರಣೆಗಳು ಇವೆ.
ಹಾಗಾದ್ರೆ ಏನಿದೆ ಈ ಡ್ರಾಮಾ ದಲ್ಲಿ, ಯಾವ ಕಾರಣಕ್ಕಾಗಿ ಇದು ಯುವಜನರನ್ನು ಆಕರ್ಷಸುತ್ತಿದೆ. ಸುಮಾರು 30 ರಿಂದ 40 ಎಪಿಸೋಡ್ಗಳು ಹಾಗೂ ಸೀಸನ್ಸ್ಗಳಲ್ಲಿ ಈ ಡ್ರಾಮಾಗಳು ಪ್ರಸಾರವಾಗುತ್ತದೆ. ಹಾಗೆಯೇ ಆಯಾ ಭಾಗದ ಜನರಿಗೆ ಅರ್ಥವಾಗಲು ಬೇರೆ ಬೇರೆ ಭಾಷೆಗಳಲ್ಲಿ ಸಬ್ ಟೈಟಲ್ಸ್ ಕೂಡ ಸಿಗುತ್ತದೆ.
ಡ್ರಾಮಾ ನಾಯಕ /ನಾಯಕಿ
ಕೊರಿಯನ್ ಡ್ರಾಮದ ಮುಖ್ಯ ಅಂಶವೆಂದರೆ ಅಲ್ಲಿರುವ ನಾಯಕ /ನಾಯಕಿ. ಅವರ ತೆಳ್ಳಗೆ, ಬೆಳ್ಳಗಿನ ಮೈಕಟ್ಟು, ಬಟ್ಟೆಯ ಆಯ್ಕೆ, ಅವರ ಕ್ಯೂಟ್ನೆಸ್ ಜನರನ್ನು ಬೇಗ ಆಕರ್ಷಿಸುತ್ತದೆ. ಇಡೀ ಸೀರೀಸ್ ಇವರ ಮೇಲೆ ನಿಂತಿದೆ, ಹಾಗೂ ನಮ್ಮ ದೇಶ ಮಾತ್ರವಲ್ಲದೆ ಬೇರೆ ದೇಶಗಳಲ್ಲಿ ಇವರ ಫ್ಯಾನ್ ಫಾಲೋಯಿಂಗ್ ಜಾಸ್ತಿನೇ ಇದೆ.
ದೃಶ್ಯ ಚಿತ್ರಣ
ಕೊರಿಯನ್ ಡ್ರಾಮಾದ ಇನ್ನೊಂದು ಅಂಶವೆಂದರೆ ಅವರು ಚಿತ್ರಿಸುವ ದೃಶ್ಯಗಳ ಸ್ಥಳಗಳು. ಒಂದೊಂದು ದೃಶ್ಯ, ಅದರ ಸೌಂದರ್ಯ, ಅವರ ದೇಶದ ಆಹಾರ ಕ್ರಮ, ಅದನ್ನು ತಿನ್ನುವ ರೀತಿ, ಇವೆಲ್ಲ ನೋಡುಗರನ್ನು ಕೊರಿಯಾ ದೇಶಕ್ಕೆ ಕರೆದುಕೊಂಡು ಹೋಗುತ್ತದೆ ಮತ್ತು ಅಲ್ಲಿಯೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅನಿಸುವಂತೆ ಮಾಡಿಬಿಡುತ್ತದೆ.
ಕಾಲ್ಪನಿಕ ಸನ್ನಿವೇಶ ಮತ್ತು ನೈಜತೆ
ಕೊರಿಯಾದ ಹೆಚ್ಚಿನ ಡ್ರಾಮಾ ಸೀರೀಸ್ ಕಾಲ್ಪನಿಕವಾಗಿರುತ್ತದೆ. ಹಾಗಿದ್ದು ಅವರ ಕತೆಯ ನಿರೂಪಣೆ, ಎಂಡಿಂಗ್ ಪ್ರತಿ ಎಪಿಸೋಡ್ನಲ್ಲೂ ಜನರನ್ನು ಮಂತ್ರ ಮುಗ್ದರಾನ್ನಾಗಿಸುತ್ತದೆ. ಅಂತಹ ನಾಯಕ ಅಥವಾ ನಾಯಕಿ ನಮ್ಮ ಜೀವನದಲ್ಲಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅನಿಸುವಂತೆ ಮಾಡುತ್ತದೆ.
ಅಹಿಂಸೆ ಮತ್ತು ಕತೆಯ ನೀತಿ
ಹೆಚ್ಚಿನ ಡ್ರಾಮಾ ಸೀರೀಸ್ ಧನಾತ್ಮಕ ಚಿಂತನೆಯನ್ನು ಹೊಂದಿದೆ. ಹಿಂಸೆ, ಕೊಲೆ, ಕಳ್ಳತನ, ಮೋಸ ಇವುಗಳ ಬಗ್ಗೆ ಕತೆ ಹೆಣೆದಿದ್ದರೂ, ಪ್ರೀತಿ, ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ನೋಡುಗರಿಗೆ ಪ್ರತಿ ಎಪಿಸೋಡ್ ಒಂದು ನೀತಿಪಾಠವಾಗಿ ಕಾಣುತ್ತದೆ.
ಈ ಎಲ್ಲ ಕಾರಣಕ್ಕೆ ಕೊರಿಯನ್ ಡ್ರಾಮಾ ಜನ ಮನ್ನಣೆ ಗಳಿಸಿದೆ.