ಮಹಿಳೆಯು ಒಂದು ಕುಟುಂಬದಲ್ಲಿ ಮಗಳಾಗಿ, ಸೊಸೆಯಾಗಿ, ಹೆಂಡತಿಯಾಗಿ, ತಾಯಿಯಾಗಿ ಜವಾಬ್ದಾರಿಯುತ ಕರ್ತವ್ಯಗಳನ್ನು ನಿರ್ವಹಿಸುವುದರ ಜೊತೆಗೆ ಕುಟುಂಬದ ಆರ್ಥಿಕ ಪರಿಸ್ಥಿತಿಯ ಉನ್ನತಿಯ ಬಗ್ಗೆ ಹೆಚ್ಚು ಯೋಚಿಸಲು ಅಗತ್ಯವಾದ ವಾತಾವರಣ ಮತ್ತು ಉನ್ನತ ಮಟ್ಟದ ಪ್ರಯತ್ನವನ್ನು ಮಾಡುತ್ತಿರುತ್ತಾಳೆ.
ಮಹಿಳೆ ಕುಟುಂಬದ ಆದಾಯದ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸುತ್ತಾಳೆ. ಹಣವನ್ನು ಖರ್ಚು ಮಾಡುವಾಗ ಅವಳು ನಷ್ಟ ಮತ್ತು ಲಾಭವನ್ನು ತುಂಬಾ ಲೆಕ್ಕಚಾರ ಮಾಡುತ್ತಾಳೆ. ಕುಟುಂಬದ ಮಹಿಳೆ ಮನೆಯೊಳಗೆ ಅಥವಾ ಹೊರಗೆ ತನ್ನ ಸ್ವಂತ ಗಳಿಕೆ ಮೂಲಕ ಕುಟುಂಬದ ಆದಾಯಕ್ಕೆ ಧನಾತ್ಮಕ ಕೊಡುಗೆಯನ್ನು ನೀಡುತ್ತಾಳೆ .
ಹೆಣ್ಣು ಮತ್ತು ಗಂಡಿನ ನಡುವೆ ತಾರತಮ್ಯ ಅಪಾರವಿದೆ ಇದು ಕೇವಲ ನಮ್ಮ ದೇಶದಲ್ಲಿ ಅಷ್ಟೇ ಅಲ್ಲದೆ ಅಮೇರಿಕ, ಜಪಾನ, ಯೂರೋಪ್ ಹೀಗೆ ಎಲ್ಲಾ ದೇಶಗಳಲ್ಲಿಯೂ ಹೆಣ್ಣನ್ನು ಗಂಡಿಗಿಂತ ಕೀಳಾಗಿ ಕಾಣಲಾಗುತ್ತದೆ.ಕೆಲವೊಂದು ಹುದ್ದೆಗೆ ಹೆಣ್ಣು ಗಂಡಿನಷ್ಟೇ ದಕ್ಷತೆಯನ್ನು ಹೊಂದಿದ್ದು ಅವಳಿಗೆ ಆ ಕೆಲಸವನ್ನು ಕ್ಷಮತೆಯಿಂದ ನಿರ್ವಹಿಸುವ ಅರ್ಹತೆ ಇದ್ದರೂ ಕೇವಲ ಅವಳು ಹೆಣ್ಣು, ಅವಳಿಂದ ಸಾಧ್ಯವಿಲ್ಲ ಎಂಬ ತಪ್ಪು ಗ್ರಹಿಕೆಯಿಂದ ಅವಳನ್ನು ಉನ್ನತ ಹುದ್ದೆಗೆ ಸೇರಿಸದೆ ಅದನ್ನು ಗಂಡಿಗೆ ಅವಕಾಶ ನೀಡುತ್ತಾರೆ. ಇದರಿಂದ ಗಂಡಿನಷ್ಟು ವೇತನ ಹೆಣ್ಣಿಗೆ ಸಿಗದೇ ಕಡಿಮೆ ಸಂಬಳ ಪಡೆದುಕೊಳ್ಳುತ್ತಿರುತ್ತಾಳೆ ಇಂದಿನ ಹೆಣ್ಣು. ಆದರೆ ಇಂದಿನ ಹೂಡಿಕೆಯ ಜಗತ್ತಿನಲ್ಲಿ ಗಂಡಿಗಿಂತ ಹೆಣ್ಣು ಉತ್ತಮ ಹೂಡಿಕೆದಾರಳು ಎನ್ನುವ ರಹಸ್ಯವನ್ನು ತಿಳಿದುಕೊಳ್ಳಬೇಕಾಗಿರುವ ಪರಿಸ್ಥಿತಿ ನಮ್ಮ ಮುಂದಿದೆ.
ಅದು ಹೇಗೆ ಮಹಿಳೆ ಹೂಡಿಕೆಯಲ್ಲಿ ಪುರುಷನಿಗಿಂತ ಮುಂದೆ ಇದ್ದಾಳೆ ಎನ್ನುವುದಕ್ಕೆ ತುಂಬಾ ಕಾರಣಗಳಿವೆ. ಹೆಣ್ಣು ಮತ್ತು ಗಂಡು ಒಂದು ಕುಟುಂಬದ ಎರಡು ಕಣ್ಣುಗಳಿದ್ದ ಹಾಗೆ. ಮನೆಯ ಹಣಕಾಸಿನ ನಿರ್ವಹಣೆಗೆ ಅಥವಾ ಅವರ ಹೊರ ಪ್ರಪಂಚದ ನಿರ್ವಹಣೆಗೆ ಹಾಗೂ ಹೂಡಿಕೆಯ ಬಗ್ಗೆ ಮಹಿಳೆಗೆ ಯಾವುದು ಹೆಚ್ಚು ಅಪಾಯಕಾರಿ ಹೇಗೆ ಮಾಡಿದರೆ ಸರಿ ಎನ್ನುವುದರ ಬಗ್ಗೆ ಗಂಡಿಗಿಂತ ಬಹುಸಹಜವಾಗಿ ಶ್ರಮವಿಲ್ಲದೆ ಗೊತ್ತಾಗುತ್ತದೆ. ಹೆಚ್ಚು ಅಪಾಯ ಎನಿಸುವ ಯಾವುದೇ ಕ್ಷೇತ್ರದಲ್ಲಿ ಹೆಣ್ಣು ಹೂಡಿಕೆಯನ್ನು ಮಾಡಲು ಇಚ್ಛಿಸದೆ ಅದರ ಬಗ್ಗೆ ಸಾವಿರ ಸಲ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾಳೆ.
ಕುಟುಂಬವನ್ನು ಎಲ್ಲಾ ವಿಧದಲ್ಲೂ ಸಂರಕ್ಷಣೆ ಮಾಡಿಕೊಳ್ಳಲು ಚೆನ್ನಾಗಿ ಅರಿತುಕೊಂಡ ಮಹಿಳೆ ಕಡಿಮೆ ಹಣದಲ್ಲಿ ನಷ್ಟ ಮಾಡಿಕೊಳ್ಳದ ಹಾಗೆ ಹಣವನ್ನು ಉಳಿತಾಯ ಮಾಡಿಕೊಳ್ಳುತ್ತಾಳೆ.
ಮಹಿಳೆಯರು ಹೂಡಿಕೆ ಅಥವಾ ಖರ್ಚು ಮಾಡುವ ನಿರ್ಧಾರ ತೆಗೆದುಕೊಳ್ಳುವಾಗ ಒಂದೇ ವಿಷಯವನ್ನು ಹತ್ತಾರು ಸಲ ಗುಣಿಸಿ, ಭಾಗಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಸಾಲ ಕೊಂಡುಕೊಳ್ಳುವಲ್ಲಿ ಮತ್ತು ಮರುಪಾವತಿ ಮಾಡುವಲ್ಲಿ ಕೂಡ ಮಹಿಳೆಯರು ಗಂಡಸಿಗಿಂತ ಜಾಗರೂಕರಾಗಿರುತ್ತಾರೆ. ಇದರಿಂದ ಕುಟುಂಬದ ಸಾಲ ಕೂಡ ತೀರಿಸುವಲ್ಲಿ ಮಹಿಳೆಯರೇ ಪ್ರಧಾನ ಪಾತ್ರ ವಹಿಸುತ್ತಾರೆ. ಕಾನೂನು ನಿಯಮಗಳನ್ನು ಪಾಲನೆ ಮಾಡುವುದರಲ್ಲಿ ಮಹಿಳೆಯರೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಉದಾಹರಣೆಗಾಗಿ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಅಥವಾ ಇನ್ನು ಯಾವುದೇ ಟ್ಯಾಕ್ಸ್ ಇರಬಹುದು ಇದನ್ನು ಗಂಡಸರಾದರೆ ವಾಯಿದೆ ಮುಗಿಯುವವರೆಗೆ ಎಳೆದುಕೊಂಡು ಹೋಗಿ ಅದಕ್ಕೆ ದಂಡ ಪಾವತಿಸುತ್ತಾರೆ. ಆದರೆ ಹೆಣ್ಣು ಅದನ್ನು ಜಾಗರೂಕತೆಯಿಂದ ಅದರ ಸಮಯದ ಒಳಗೆ ಪಾವತಿಸುತ್ತಾರೆ. ಹೀಗಾಗಿ ಪುರುಷರಿಗಿಂತ ಮಹಿಳೆಯರು ಉತ್ತಮ ಉಳಿತಾಯಗಾರರು ಎನ್ನಬಹುದು.
ಮಹಿಳೆಯಾದವಳು ಪುರುಷನಿಗಿಂತ ಹೆಚ್ಚಾಗಿ ನಿವೃತ್ತಿ ಮತ್ತು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತಿಸಿ ಅದಕ್ಕೆ ಬೇಕಾದ ಹಣಕಾಸಿನ ವ್ಯವಸ್ಥೆ ಮುಂಚಿನಿಂದಲೂ ಮಾಡಿಕೊಳ್ಳುತ್ತಾ ಬರುತ್ತಿರುತ್ತಾಳೆ .
ಕೊನೆಯದಾಗಿ ಹೇಳುವುದಾದರೆ ವಿದ್ಯಾಭ್ಯಾಸ ಪಡೆದ ಮಹಿಳೆ ಪುರುಷನಿಗಿಂತ ಉತ್ತಮವಾಗಿ ಉಳಿತಾಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬಲ್ಲಳು. ಹೆಣ್ಣು ಅಡುಗೆ ಮನೆಗೆ ಅಷ್ಟೆ ಸೀಮಿತ ಎನ್ನುವ ಮನಸ್ಥಿತಿಯಿಂದ ಹೊರಬಂದು ಹೆಣ್ಣು ಗಂಡು ಇಬ್ಬರೂ ಒಟ್ಟಾಗಿ ದುಡಿದರೆ ಮಾತ್ರ ಸಂಸಾರದ ಬಾಳ ನೌಕೆಯನ್ನು ಸಲೀಸಾಗಿ ಸಾಗಿಸಿಕೊಂಡು ಹೋಗಬಹುದು. ಯಾರು ಯಾವುದರಲ್ಲಿ ಪ್ರವೀಣರು ಅವರಿಗೆ ಆ ಕ್ಷೇತ್ರದ ಹೊಣೆಗಾರಿಕೆ ನಾಯಕತ್ವ ನೀಡುತ್ತಾ ಬಂದರೆ ಅವರ ಕುಟುಂಬಗಳು ಆರ್ಥಿಕವಾಗಿ ಸಬಲವಾಗುತ್ತಾ ಅದು ಮುಂದೆ ಒಂದು ದಿನ ದೇಶದ ಪ್ರಬಲ ಆರ್ಥಿಕತೆಗೂ ನಾಂದಿಯಾಗುತ್ತದೆ.