ಕಳೆದ ಹತ್ತು ವರ್ಷಗಳ ಈಚೆಗೆ ಕನ್ನಡದಲ್ಲಿ ಬಂದ ಅತ್ಯುತ್ತಮ ಪ್ರೇಮಕಥಾ ಸಿನಿಮಾಗಳಲ್ಲ ಸಂಜು ವೆಡ್ಸ್ ಗೀತಾ ಒಂದು ಎನ್ನಲಾಗುತ್ತದೆ. ಶ್ರೀನಗರ ಕಿಟ್ಟಿ ಹಾಗೂ ರಮ್ಯಾರ ಕೆಮಿಸ್ಟ್ರಿ ಸಿನಿ ಪ್ರೇಮಿಗಳ ಮನಸ್ಸು ಗೆದ್ದಿದ್ದು ಅಷ್ಟಿಷ್ಟಲ್ಲ.
ಆ ಸಿನಿಮಾದ ಎಲ್ಲ ಹಾಡುಗಳು, ಸಂಭಾಷಣೆ ಬಹಳ ಹಿಟ್ ಆಗಿದ್ದವು. ಚಿತ್ರೀಕರಣ ಮಾಡಿದ್ದ ವಿಧಾನವೂ ಸಿನಿಪ್ರೇಮಿಗಳಿಗೆ ಇಷ್ಟವಾಗಿತ್ತು. ಇದೀಗ ಸಂಜು ವೆಡ್ಸ್ ಗೀತಾ 2 ಸಿನಿಮಾದ ಘೋಷಣೆ ಆಗಿದ್ದು ಪೋಸ್ಟರ್ ಸಹ ಬಿಡುಗಡೆ ಆಗಿದೆ. ಇಂದು ಶ್ರೀನಗರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ.
ಸಂಜು ವೆಡ್ಸ್ ಗೀತಾ ಸಿನಿಮಾ ನಿರ್ದೇಶಿಸಿದ್ದ ನಾಗಶೇಖರ್ ಅವರೇ ಸಂಜು ವೆಡ್ಸ್ ಗೀತಾ 2 ಸಿನಿಮಾವನ್ನು ನಿರ್ದೇಶನ ಮಾಡುವ ಜೊತೆಗೆ ನಿರ್ಮಾಣವನ್ನೂ ಅವರೆ ಮಾಡುತ್ತಿದ್ದಾರೆ. ಸಂಜು ವೆಡ್ಸ್ ಗೀತಾ ಸಿನಿಮಾ 2011 ರಲ್ಲಿ ಬಿಡುಗಡೆ ಆಗಿತ್ತು, ಅದಾದ 12 ವರ್ಷಗಳ ಬಳಿಕ ಎರಡನೇ ಭಾಗವಾಗಿ ಈಗ ಭಾಗ 2 ನ್ನು ಮಾಡಲಾಗುತ್ತಿದೆ. ಆದರೆ ಈ ಸಿನಿಮಾದಲ್ಲಿ ನಾಯಕಿಯಾಗಿ ರಮ್ಯಾ ಇರಲಿದ್ದಾರಾ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ.
ಶ್ರೀನಗರ ಕಿಟ್ಟಿ ಅಂತೂ ಈ ಸಿನಿಮಾದಲ್ಲಿ ಹೀರೋ ಆಗಿ ಮುಂದುವರೆಯದಿದ್ದಾರೆ. ಆದರೆ ರಮ್ಯಾ ಅವರು ವಿದೇಶದಲ್ಲಿ ಇರುವ ಕಾರಣ ಅವರನ್ನು ಭೇಟಿಯಾಗಿ ಒಪ್ಪಿಗೆ ಕೇಳಿಲ್ಲ. ಗೀತಾ ಪಾತ್ರಕ್ಕೆ ಬೇರೆಯವರನ್ನು ಊಹಿಸಿಕೊಳ್ಳುವುದು ಕಷ್ಟ. ಒಂದೊಮ್ಮೆ ಅವರು ಒಪ್ಪಿಕೊಂಡರೆ ಸರಿ ಇಲ್ಲವಾದರೆ ಬೇರೆ ಆಯ್ಕೆಗಳನ್ನು ಹುಡುಕಬೇಕಾಗುತ್ತದೆ. ರಮ್ಯಾ ಅವರು ಕತೆಯನ್ನು ಒಪ್ಪಿಕೊಳ್ಳುವ ನಿರೀಕ್ಷೆ ಇದೆ. ಒಂದೊಮ್ಮೆ ಅವರು ಒಪ್ಪಿಕೊಳ್ಳದಿದ್ದರೆ ಅವರ ಶುಭಹಾರೈಕೆಯೊಂದಿಗೆ ನಾವು ಸಿನಿಮಾ ಪ್ರಾರಂಭಿಸುತ್ತೇವೆ. ರಮ್ಯಾ ಸದಾ ನಮಗೆ ಒಳ್ಳೆಯದನ್ನೇ ಬಯಸುತ್ತಾರೆ ಎಂದು ನಾಗಶೇಖರ್ ಹೇಳಿಕೊಂಡಿದ್ದಾರೆ.
ಸಂಜು ವೆಡ್ಸ್ ಗೀತಾ 2 ಸಿನಿಮಾದ ಮುಹೂರ್ತ ಆಗಸ್ಟ್ 15 ರಂದು ನಡೆಯಲಿದ್ದು ಆವತ್ತಿನ ದಿನವೇ ಚಿತ್ರೀಕರಣ ಶುರುವಾಗಲಿದೆ. ಇತರೆ ಪಾತ್ರಗಳ ಆಯ್ಕೆ ಇನ್ನಷ್ಟೆ ನಡೆಯಬೇಕಿದೆ. ಸಿನಿಮಾದ ಹಾಡುಗಳು ಈಗಾಗಲೇ ರೆಕಾರ್ಡ್ ಆಗಿದ್ದು ಎಲ್ಲ ಹಾಡುಗಳು ಅದ್ಭುತವಾಗಿ ಮೂಡಿಬಂದಿವೆ. ಕಳೆದ ಬಾರಿಗಿಂತಲೂ ಉತ್ತಮವಾದ ಸಿನಿಮಾ ನೀಡಬೇಕು ಎಂಬ ಜವಾಬ್ದಾರಿ ತನಗೆ ಇದೆ ಎಂದ ನಾಗಶೇಖರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂಜು ವೆಡ್ಸ್ ಗೀತಾ ಸಿನಿಮಾದ ಮುಂದುವರೆದ ಭಾಗವಾ? ಅಥವಾ ಹೊಸ ಕತೆಯ ಎಂಬ ಪ್ರಶ್ನೆಗೆ ಅದೊಂದನ್ನು ಸದ್ಯಕ್ಕೆ ಚಿತ್ರತಂಡ ಗುಟ್ಟಾಗಿ ಇಡಲಾಗಿದೆ.
2024 ಹೊತ್ತಿಗೆ ಈ ಚಿತ್ರ ರಿಲೀಸ್ ಆಗುವ ಪ್ಲಾನ್ ಕೂಡ ಇದೆ. ಚಿತ್ರದ ಸಂಗೀತದ ವಿಚಾರದಲ್ಲಿ ವಿ.ಶ್ರೀಧರ್ ಇಲ್ಲವೇ ಅರ್ಜುನ್ ಜನ್ಯ ಅಂದುಕೊಳ್ಳುತ್ತಿದ್ದೇನೆ. ಸ್ಟಾರ್ ಕಾಸ್ಟ್ ವಿಚಾರದಲ್ಲಿ ಅನಂತ್ ನಾಗ್, ಪ್ರಕಾಶ್ ರಾಜ್, ರಮ್ಯ ಕೃಷ್ಣ ಕೂಡ ಇರ್ತಾರೆ. ಇವರನ್ನ ಫೈನಲ್ ಮಾಡಬೇಕು ಅಂದುಕೊಂಡಿದ್ದೇನೆ. ಸಂಜು ವೆಡ್ಸ್ ಗೀತಾ-2 ಸಿನಿಮಾವನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಮಾಡಬೇಕು ಅಂದುಕೊಂಡಿದ್ದೇವೆ. ಚಿತ್ರದ ನಿರ್ಮಾಣದ ಜೊತೆಗೆ ನಿರ್ದೇಶನವನ್ನ ನಾನು ಮಾಡುತ್ತೇನೆ. ಗೀತ ರಚನೆಕಾರ ಕವಿರಾಜ್ ಈ ಸಲ ಕೂಡ ಇರ್ತಾರೆ. ಇನ್ನುಳಿದಂತೆ ಸದ್ಯದ ಸ್ಪೆಷಲ್ ಹಾಡು ತುಂಬಾ ಜನಕ್ಕೆ ಇಷ್ಟ ಆಗುತ್ತಿದೆ ಎಂದು ಡೈರೆಕ್ಟರ್ ನಾಗಶೇಖರ್ ಸಿನಿಮಾದ ವಿವರ ನೀಡಿದರು.