ಕಾಲೇಜಿನಲ್ಲಿ ಇಂಟರ್ನಲ್ಸ್ ನಡೆಯುತ್ತಿದ್ದ ದಿನ. ಯಾವಾಗಲೂ ಮೊಬೈಲ್ ರಾರಾಜಿಸುತ್ತಿದ್ದ ಕೈಗಳಲ್ಲಿ ಅಂದು ಪುಸ್ತಕಗಳು ಸ್ಥಾನ ಪಡೆದಿತ್ತು. ನಾನೋ 20 ಅಂಕಗಳ ಪರೀಕ್ಷೆಗೆ ಅಷ್ಟು ಓದುವುದು ಅಗತ್ಯವೇ? ಎಂದು ತಿಳಿದು ಯಾವ ಪೂರ್ವ ಸಿದ್ಧತೆ ಇಲ್ಲದೆ ಕ್ಲಾಸಿನೊಳಗೆ ನುಗ್ಗಿದೆ. ಪ್ರಶ್ನೆಪತ್ರಿಕೆ ಕೈ ಸೇರಿದಾಗಲೇ ಗೊತ್ತಾದದ್ದು ನಾನು ಕೊಂಚ ಓವರ್ ಕಾನ್ಫಿಡಂಟ್ ಆಗಿದ್ದೆ ಎಂದು , ಅದೆಷ್ಟೇ ಪ್ರಯತ್ನಿಸಿದರು ಒಂದು ಉತ್ತರಗಳು ಹೊಳೆಯುತ್ತಿಲ್ಲ. ಯಾರಾದರೊಬ್ಬರು ನನಗೆ ಸಹಾಯ ಹಸ್ತ ಚಾಚಬಹುದೆಂದು ಆಸೆಗಣ್ಣಿನಿಂದ ನೋಡಿದೆ, ಆದರೆ ನನ್ನ ಆಶಾಗೋಪುರ ದೊಪ್ಪೆಂದು ಕುಸಿದು ಬಿದ್ದಿತು. ಇನ್ನು ಬರೆಯಲು ಸಾಧ್ಯವೇ ಇಲ್ಲ ಎಂದು ಎದ್ದು ಹೋಗಲು ಅಣಿಯಾದೆ. ಇನ್ನೇನು ಹೊರಡಬೆಕೆನ್ನುವಷ್ಟರಲ್ಲಿ
ಬೆಂಚ್ ಮೇಲೆ ಪುಟ್ಟ ಅಕ್ಷರಗಳು ಕಂಡವು , ಕುತೂಹಲದಿಂದ ಓದತೊಡಗಿದಾಗಲೇ ಗೊತ್ತಾದದ್ದು ಅದು ನನಗೆ ಬೇಕಾದ ಒಂದು ಪಾಠದ ಸಾರಾಂಶವಂದು… ಹುಡುಕುತ್ತಿದ್ದ ಬಳ್ಳಿ ಕಾಲಿಗೆ ಸಿಕ್ಕಂತಾಯಿತು.
ಆಗ ನನಗೆ ಉತ್ತರ ಗೊತ್ತಾಯಿತೆಂಬ ಖುಷಿ, ಈ ಸಾರಾಂಶವನ್ನು ಯಾರು ಬರೆದಿರಬಹುದೆಂಬ ಆಶ್ಚರ್ಯ ಹೇಳತೀರದು ಅವರು ಯಾರೇ ಇರಲಿ ಅವರಿಗೆ ಮನಸ್ಸಿನಲ್ಲೊಂದು
ಥಾಂಕ್ಸ್ ಹೇಳಿ ಉತ್ತರವನ್ನು ಬರೆದೆ.
ಅವತ್ತಿನಿಂದ ಶುರುವಾದ ಬೆಂಚ್ ಮೇಲಿನ ಸಾಲುಗಳನ್ನು ಓದುವ ಗೀಳು ಇವತ್ತಿನ ವರೆಗೂ ಮುಂದುವರೆದಿದೆ.
ಬೆಂಚ್ ಮೇಲೆ ಉತ್ತರಗಳಷ್ಟೇ ಅಲ್ಲದೆ ಹಲ್ಲು ಉಜ್ಜಿದರೆ ಕ್ಲೀನಾಗುವುದು ಬ್ರಶ್ ಗಳಂತಹ
ದೋ0ಡ್ಡೋಕ್ತಿಗಳು ಮುಖದ ಮೇಲೆ ನಗೆಯನ್ನು ಮೂಡಿಸಿದವು.
ಹುಚ್ಚು ಪ್ರೀತಿಯ ಹತ್ತು ಮುಖಗಳು….
ಕಣ್ಣಿರು ನಿಜವಾದ ಪ್ರೀತಿಯ ಕೊನೆ ಉಡುಗೊರೆ ಪ್ರೀತಿಯಲ್ಲಿ ವಿಫಲವಾಗಿ ಕವಿಗಳಾದವರ ಕವನ ಸಂಕಲನದಂತಾಗಿದೆ. ಇಷ್ಟೇ ಅಲ್ಲದೆ ನಮ್ಮ ಕ್ಲಾಸಿನ ಜೋಡಿಹಕ್ಕಿಗಳ ಹೆಸರು ಶಿಲಾಶಾಸನದಲ್ಲಿ ರಚಿಸಿದಂತೆ ಬರೆಯಲಾಗಿತ್ತು. ಹಾಗಾಗಿ ನಮ್ಮ ಕಾಲೇಜಿನ ಬೆಂಚ್ಗಳನ್ನು ಗುಪ್ತಚರ ಇಲಾಖೆ ಎಂದೂ ಕರೆಯಬಹುದು.
ನಮ್ಮ ಚಲನಚಿತ್ರ ರಂಗದವರು ಎಷ್ಟೆಷ್ಟೋ ಹಣ ಖರ್ಚು ಮಾಡಿ ಒಂದು ಸಿನಿಮಾದ
ಪ್ರಮೋಷನ್ ಮಾಡುತ್ತಾರೆ, ಆದರೆ ನಮ್ಮ ಕಾಲೇಜಿನ ಸಿನಿ ರಸಿಕ ಬೆಂಚ್ ಬರಹಗಾರರು ಬಿಡುಗಡೆಯಾಗಲಿರುವ ಸಿನಿಮಾದ ಹೆಸರುಗಳನ್ನು ಬರೆದು ಪುಕ್ಕಟ್ಟೆಯಾಗಿ ಜಾಹಿರಾತು ಕೊಡುತ್ತಾರೆ ಎಷ್ಟೋ ಹೊಸ-ಹೊಸ ಹಾಡುಗಳ ಸಾಲುಗಳನ್ನು ಬೆಂಚ ಮೇಲೆ ಬರೆದು
ನನಗೆ ಪರಿಚಯಿಸಿದವರು ಇವರೇ… ನಮ್ಮ ಕಾಲೇಜಿನ ಬೆಂಚ್ಗಳು ಮಿನಿ ಸಾಹಿತ್ಯ ಭಂಡಾರ/ ಮಿನಿ ಲೈಬ್ರರಿಯಂತಾಗಿವೆ. ಬೆಂಚ್ಗಳನ್ನು ತಮ್ಮ ಬರವಣಿಗೆಗೆ ಬಳಸಿಕೊಂಡು ನನ್ನಂಥ
ಓದುಗರಿಗೊಂದು ಹೊಸ ಪ್ರಪಂಚವನ್ನು ಪರಿಚಯಿಸುವ ಈ ಬೆಂಚ್ ಸಾಹಿತಿಗಳ ಕ್ರಿಯಾಶೀಲತೆಗೊಂದು ಸಲಾಮ್!