ಹೊಸ ವರ್ಷ ಹೊಸ ಹರುಷವ ತರಲಿ ಎನ್ನುವ ಉದ್ದೇಶದಿಂದ ವಿಶು (ಬಿಸು) ಹಬ್ಬದ ಆಚರಣೆ ಮಾಡಲಾಗುತ್ತದೆ.
ಚಂದ್ರನ ಚಲನೆಯನ್ನು ಆಧರಿಸಿ ಚಂದ್ರಮಾನ ಯುಗಾದಿ ಆಚರಿಸುವಂತೆ ತುಳುವರು ಸೂರ್ಯನ ಚಲನೆಯನ್ನು ಆಧರಿಸಿ ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ. ಇದನ್ನು ಬಿಸು ಅಥವಾ ವಿಶು ಎಂದು ಕರೆಯುತ್ತಾರೆ.
ಸೂರ್ಯನು ಮೀನ ರಾಶಿಯಿಂದ, ಮೇಷ ರಾಶಿಯತ್ತ ಚಲಿಸುವನು. ಜ್ಯೋತಿಷ್ಯ ಹಾಗೂ ಕುಂಡಲಿಯಲ್ಲಿ ಸೂರ್ಯನು ಅತ್ಯಂತ ಪ್ರಭಾವಶಾಲಿ ದೈವ ಎಂದು ಪೂಜಿಸುತ್ತಾರೆ. ಸೂರ್ಯನು ಒಂದು ಮನೆಯಿಂದ ಇನ್ನೊಂದು ಮನೆಗೆ ಚಲಿಸುವುದರಿಂದ ದ್ವಾದಶ ರಾಶಿಯ ಎಲ್ಲಾ ಮನೆಯಲ್ಲಿಯೂ ಸಂಚಾರವನ್ನು ಪೂರ್ಣಗೊಳಿಸಲು ಸೂರ್ಯನಿಗೆ ಒಂದು ವರ್ಷ ಕಾಲ ಬೇಕಾಗುವುದು. ವರ್ಷದ ಆರಂಭದಲ್ಲಿ ಸೂರ್ಯನು ಮೇಷ ರಾಶಿಯಿಂದಲೇ ಸಂಚಾರವನ್ನು ಪ್ರಾರಂಭಿಸುವನು. ಪ್ರತಿಯೊಂದು ರಾಶಿಯಲ್ಲಿ ಸೂರ್ಯನು ಸುಮಾರು ಮೂವತ್ತು ದಿನಗಳ ಕಾಲ ನಿಲ್ಲುವನು. ನಂತರ ಇನ್ನೊಂದು ಮನೆಗೆ ಸಂಚಾರವನ್ನು ಮುಂದುವರಿಸುವನು. ಈ ಪ್ರಾರಂಭದಿಂದ ಸೌರಮಾನ ಯುಗಾದಿ ಅಥವಾ ಸೌರಮಾನದ ಹೊಸ ವರ್ಷದ ಆರಂಭ ಎಂದು ಪರಿಗಣಿಸಲಾಗುವುದು.
ಸೂರ್ಯನು ಬೆಳಕು, ಶಾಖ, ಉಷ್ಣತೆ ಗೌರವನ್ನು ಸಂಕೇತಿಸುವನು. ಸೂರ್ಯನು ಪ್ರಭಾವ ಉತ್ತಮವಾಗಿದ್ದರೆ ಎಲ್ಲ ವಿಷಯದಲ್ಲಿ ಧನಾತ್ಮಕ ಫಲವನ್ನು ಪಡೆದುಕೊಳ್ಳುವರು.
ವಿಶು (ಬಿಸು) ದಿನ ತುಂಬಾ ಪವಿತ್ರವಾದ ದಿನ. ಯಾವುದೇ ಹೊಸ ಕೆಲಸವನ್ನು ಆರಂಭಿಸಲು ಈ ದಿನ ಪ್ರಸಕ್ತ. ಆದ್ದರಿಂದಲೇ ತುಳುನಾಡಿನ ಜನರು ಈ ದಿನದಂದು ಮುಂದೆ ಮನೆಯಲ್ಲಿ ಯಾವುದಾದರೂ ಮಂಗಳ ಕಾರ್ಯ ಮಾಡೋದಿದ್ದರೆ ಅಂದು ಮಾತನಾಡಿ ಮುಗಿಸುತ್ತಾರೆ. ವಿವಿಧ ಭಾಗಗಳಲ್ಲಿ ಆಚರಣೆಗೊಳ್ಳುವ ಈ ಬಿಸು ಹಬ್ಬ, ಆಯಾಯ ಸ್ಥಳಕ್ಕೆ ತಕ್ಕಂತೆ ವಿಭಿನ್ನವಾಗಿರುತ್ತದೆ. ಕೇರಳದಲ್ಲಿಯೂ ಈ ಹಬ್ಭವನ್ನು ಬಹಳ ವಿಶೇಷವಾಗಿ ಆಚರಿಸುತ್ತದೆ.
ಈ ಹಬ್ಬದಂದು ವಿಶ್ವ ಕಣಿ ಇಡುವುದೇ ತುಂಬಾ ವಿಶೇಷವಾಗಿರುತ್ತದೆ. ವಿವಿಧ ರೀತಿಯ ಹಣ್ಣು ತರಕಾರಿಗಳನ್ನು ದೇವರ ಕೋಣೆಯಲ್ಲಿಟ್ಟು ಆ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ವಿಷ್ಣು ಕಣಿಯನ್ನು ನೋಡಿ ದೇವರಿಗೆ ನಮಸ್ಕರಿಸಿ, ಹೊಸ ಉಡುಗೆ ಧರಿಸಿ ನಂತರ ಮನೆ ಹಿರಿಯವರಿಗೆಲ್ಲ ನಮಸ್ಕಾರ ಮಾಡುತ್ತಾರೆ.