ಇದರ ಬಗ್ಗೆ ವಿವರಣೆ ನೀಡುವ ಮೊದಲು, ಈ ಕೆಳಗಿನ ಉದಾಹರಣೆಗಳನ್ನು ಗಮನಿಸಿ
• ಒಬ್ಬ ಯೂಟ್ಯೂಬರ್, ತಾನು ಮಾಡಿದ ಎಲ್ಲಾ ವೀಡಿಯೋಗಳನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡುತ್ತಿರುತ್ತಾನೆ ಹಾಗೂ ಆ ಬಳಿಕ, ವೀಡಿಯೋಗಳು ಹೇಗೋ ಯೂಟ್ಯೂಬ್ ನಲ್ಲಿ ಇರುತ್ತಲ್ವಾ ಎಂದು ತನ್ನ ಡಿವೈಸ್ನಿಂದ (ಮೊಬೈಲ್, ಲ್ಯಾಪ್ಟಾಪ್ ಇತ್ಯಾದಿ) ಅವುಗಳನ್ನು ಅಳಿಸಿಹಾಕುತ್ತಾನೆ. ಒಂದು ವೇಳೆ ಮುಂದೊಂದು ದಿನ, ಯೂಟ್ಯೂಬ್ ಸರ್ವರ್ ಕ್ರ್ಯಾಶ್ ಆಯ್ತು ಅಂತ ಇಟ್ಟುಕೊಳ್ಳಿ. ಯೂಟ್ಯೂಬ್ ಅಪ್ಲಿಕೇಶನ್ನಲ್ಲಿರುವ ಎಲ್ಲಾ ಡೇಟಾ ಕರಪ್ಟ್ ಅಥವಾ ಡಿಲೀಟ್ ಆಗಿ ಹೋದರೆ? ಆ ಯೂಟ್ಯೂಬರ್ಗೆ ತನ್ನ ವೀಡಿಯೋಗಳೇ ಸಿಗದೇ ಹೋದರೆ? ಹೇಗಾದೀತು ಅಲ್ವಾ?
• ಮೊಬೈಲ್ ಬಂದ ಮೇಲೆ ನಾವು ಕ್ಲಿಕ್ಕಿಸುವ ಫೋಟೋಗಳಿಗೆ ಲೆಕ್ಕವೇ ಇಲ್ಲ. ಇಂದು ನಮ್ಮ ಹತ್ತಿರ ನೂರಾರು ಫೋಟೋಗಳು ಇವೆ. ಕೆಲವರ ಬಳಿಯಂತೂ ಸಾವಿರಾರು, ಲಕ್ಷಾಂತರ ಫೋಟೋಗಳು ಇರಬಹುದು. ಬಹುತೇಕವು ಜೆಪಿಇಜಿ, ಪಿಎನ್ಜಿ ಫಾಮ್ರ್ಯಾಟ್ನಲ್ಲಿ ಸ್ಟೋರ್ ಆಗಿವೆ. ಮುಂದೆ 30-40 ವರ್ಷಗಳ ಬಳಿಕ ಫೋಟೋಗಳನ್ನು ಸೇವ್ ಮಾಡಿ ಇಡುವ ಫಾಮ್ರ್ಯಾಟ್ಗಳೇ ಬದಲಾದರೆ ಏನಾಗಬಹುದು? ಈಗ ಇರುವ ಫೋಟೋ ಫಾಮ್ರ್ಯಾಟ್ ಅನ್ನು ಅರ್ಥೈಸುವ ಯಾವುದೇ ಡಿವೈಸ್, ಅಪ್ಲಿಕೇಶನ್ ಇಲ್ದೇ ಹೋದರೆ ಏನಾಗಬಹುದು ಆ ಫೈಲ್ಗಳು?
• ನಿಮ್ಮ ಮನೆಯಲ್ಲಿ ನೂರಾರು ಸಿಡಿ, ಡಿವಿಡಿ, ಕ್ಯಾಸೆಟ್ಗಳು ಇರಬಹುದು ಈಗ. ಆದರೆ ಸಿಡಿ ಪ್ಲೇಯರ್ಗಳು, ಕ್ಯಾಸೆಟ್ ಹಾಕಲು ಯಾವುದೇ ಸಾಧನ ಇಲ್ಲದಿದ್ದರೆ, ಆ ಸಿಡಿ, ಡಿವಿಡಿ ಇದ್ದೂ ಏನು ಪ್ರಯೋಜನ, ಅಲ್ವಾ? ಆ ಸಿಡಿಗಳಲ್ಲಿ ಏನಾದರೂ ಉಪಯೋಗಕ್ಕೆ ಬರುವ ಮಾಹಿತಿಗಳು ಇರಬಬಹುದು ಅಥವಾ ನಮ್ಮ ಹೆತ್ತವರದ್ದೋ ಇನ್ಯಾರದ್ದೋ ಮದುವೆ, ಮುಂಜಿ ಸಮಾರಂಭದ ವೀಡಿಯೋಗಳು ಸಿಡಿ, ಕ್ಯಾಸೆಟ್ಗಳಲ್ಲಿ ಇರಬಹುದು. ಸೂಕ್ತ ಡಿವೈಸ್ ಇಲ್ಲದಿದ್ದರೇ ಅವೆಲ್ಲವೂ ವ್ಯರ್ಥ, ಅಲ್ವಾ?
ಹೇಗೆ ಪೆನ್ಡ್ರೈವ್ಗಳು ಹಂತಹಂತವಾಗಿ ಸಿಡಿ, ಕ್ಯಾಸೆಟ್ಗಳನ್ನು ತಳ್ಳಿ ಮುಂದೆ ಬಂತೋ, ಅದೇ ರೀತಿ ಹಲವು ಡಿಜಿಟಲ್ ವ್ಯವಸ್ಥೆಗಳು ಕಾಲಕ್ರಮೇಣ ಬದಲಾಗುತ್ತಾ ಹೋದಂತೆ, ಹಳೇ ಫೈಲ್ಗಳು ಕರಪ್ಟ್ ಆಗುವ ಸಾಧ್ಯತೆ ಇರುತ್ತವೆ. ಇದನ್ನೇ ಡಿಜಿಟಲ್ ಡಾರ್ಕ್ ಏಜ್ ಎಂದು ಕರೆಯುತ್ತಾರೆ.
ಇತಿಹಾಸದಲ್ಲಿ, ಹೆಚ್ಚು ಮಾಹಿತಿಗಳನ್ನು ಕಳೆದುಕೊಂಡಿರುವ ಯುಗವನ್ನು ಕರಾಳ ಯುಗ ಅಥವಾ ಡಾರ್ಕ್ ಏಜ್ ಎಂದು ಕರೆಯುತ್ತಾರೆ. ಗ್ರಂಥಾಲಯಕ್ಕೆ ಬೆಂಕಿ ಬಿದ್ದಿರುವುದು, ಇತಿಹಾಸವನ್ನು ತಿರುಚುವ ಸಲುವಾಗಿ ಕೆಲವು ಸಾಹಿತ್ಯಗಳನ್ನು ಸುಟ್ಟು ಹಾಕಿರುವುದು, ಮಾಹಿತಿಗಳ ಪ್ರಸರಣ ಮಾಡುತ್ತಿದ್ದ ಜ್ಞಾನಿಗಳ ಹತ್ಯೆ ಮಾಡಿರುವುದು ಈ ಕರಾಳ ಯುಗದಲ್ಲಿ ಆಗಿವೆ. ಅದೇ ರೀತಿ, ಡಿಜಿಟಲ್ ಯುಗದಲ್ಲಿ ಆಗುವ ತಾಂತ್ರಿಕ ಬದಲಾವಣೆಗಳಿಂದ ನಾವು ಒಂದಷ್ಟು ಮಾಹಿತಿಗಳನ್ನು, ಅಮೂಲ್ಯ ಡೇಟಾಗಳನ್ನು ಕಳೆದುಕೊಳ್ಳುವ ಸಂದರ್ಭ ಬಂದರೆ ಅದನ್ನು ಡಿಜಿಟಲ್ ಡಾರ್ಕ್ ಏಜ್ ಎಂದು ಕರೆಯುತ್ತಾರೆ.
ಡಿಜಿಟಲ್ ಯುಗದಲ್ಲಿ ಕ್ಲೌಡ್ ಸ್ಟೋರೇಜ್ ಇದೆ. ನಾವು ಎಲ್ಲವನ್ನೂ ಸ್ಟೋರ್ ಮಾಡಿ ಇಡುತ್ತೇವೆ ಎಂಬ ದೈರ್ಯ ನಮಗಿದ್ದರೂ, ಕೆಲವೊಮ್ಮೆ ಎಲ್ಲಾ ಡೇಟಾಗಳನ್ನು ಉಳಿಸಲು ನಮ್ಮಿಂದ ಸಾಧ್ಯವಾಗದೇ ಇರಬಹುದು. ಸ್ಟೋರ್ ಮಾಡಲು ಇರುವ ಇತಿಮಿತಿಗಳೂ ಹಲವು ಬಾರಿ ನಮಗೆ ಈಗಾಗಲೇ ತೊಡಕನ್ನುಂಟು ಮಾಡಿವೆ. ಆದರೆ ಇಂತಹ ಬದಲಾವಣೆಗಳು ಇನ್ನೂ ಯಾವುದೇ ದೊಡ್ಡ ಪರಿಣಾಮ ಬೀರದಿದ್ದರೂ ಸಹ, ಡಿಜಿಟಲ್ ಡಾರ್ಕ್ ಏಜ್ ಆಗುವ ಸಂಭವವನ್ನು ತಳ್ಳಿ ಹಾಕುವ ಹಾಗಿಲ್ಲ ಅನ್ನುತ್ತಾರೆ ವಿಜ್ಞಾನಿಗಳು!
ಕಾರಣಗಳು ಏನು?
ತಂತ್ರಜ್ಞಾನ ಅಥವಾ ಯಾವುದೇ ಡಿವೈಸ್ ಬಳಕೆಯಾಗದೇ ಇರುವುದು
ಬಹಳ ಹಿಂದಿನಿಂದಲೂ ನಾವು ಮಾಹಿತಿ ಸಂಗ್ರಹಣೆಗಾಗಿ ಬೇರೆ ಬೇರೆ ವಿಧಾನಗಳನ್ನು ಬಳಸುತ್ತಿದ್ದೇವೆ. ಮಾಹಿತಿಗಳನ್ನು ಸಂಗ್ರಹಿಸಲು ಹಾಗೂ ಮುಂದಿನ ಜನಾಂಗಕ್ಕೆ ಅದನ್ನು ತಲುಪಿಸಲು ನಾಣ್ಯಗಳು, ಪುಸ್ತಕಗಳಿಂದ ಹಿಡಿದು, ಇಂದಿನ ಕ್ಲೌಡ್ ಸ್ಟೋರೇಜ್ ವರೆಗೂ ಎಲ್ಲವೂ ಬಳಕೆಯಾಗುತ್ತಿವೆ. ಆದರೆ ಯಾವುದಾದರೂ ಡಿವೈಸ್ ಬಳಕೆಯಾಗದೇ ಇದ್ದರೆ ಅದು ಮುಂದೆ ಕರಪ್ಟ್ ಆಗಿ, ಅದರೊಳಗಿನ ಮಾಹಿತಿಗಳು ರೀಡ್ ಆಗದೇ ಇರಬಹುದು. ಉದಾಹರಣೆಗೆ, ಸಿಡಿ. ಮುಂಚೆ ಸಿಡಿ ಪ್ಲೇಯರ್, ಕಂಪ್ಯೂಟರ್ನ ಸಿಪಿಯು ಇತ್ಯಾದಿಗಳಲ್ಲಿ ಸಿಡಿ ಹಾಕಿ, ಅದರೊಳಗಿನ ಮಾಹಿತಿ ನೀಡಬಹುದಾಗಿತ್ತು. ಆದರೀಗ ಪೆನ್ಡ್ರೈವ್ ಬಂದ ಬಳಿಕ, ಕಂಪ್ಯೂಟರ್ನಿಂದ ಲ್ಯಾಪ್ಟಾಪ್ವರೆಗೂ ಸಿಡಿ ಹಾಕುವ ಸ್ಲಾಟ್ಗಳೇ ಇಲ್ಲ. ಸಿಡಿ ಪ್ಲೇಯರ್ಗಳ ಬಳಕೆಯೂ ಬಹಳ ವಿರಳ. ಇನ್ನೂ ಒಂದಷ್ಟು ವರ್ಷ ಕಳೆದರೆ, ಸಿಡಿ ಪ್ಲೇಯರ್ ಇದ್ದರೂ, ಸಿಡಿ ನಿಷ್ಕ್ರಿಯ ಆದೀತು!
ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ವೈಫಲ್ಯಗಳು
ಹಾರ್ಡ್ ಡ್ರೈವ್ಗಳು ಮತ್ತು ಎಸ್ಎಸ್ಡಿಯಂತಹ ಸ್ಟೋರೇಜ್ ಸಿಸ್ಟಮ್ಗಳೂ ವೈಫಲ್ಯ ಅನುಭವಿಸಬಹುದು. ಇದೂ ಸಹ ನಮ್ಮ ಡೇಟಾ ನಷ್ಟಕ್ಕೆ ಕಾರಣವಾಗಬಹುದು. ಸಾಫ್ಟ್ ವೇರ್ನಲ್ಲಿನ ದೋಷ, ಮಾಲ್ವೇರ್, ವೈರಸ್ ಅಟ್ಯಾಕ್ನಂತಹ ಸಮಸ್ಯೆಗಳೂ ಸಹ ಡಿಜಿಟಲ್ ಡಿವೈಸ್ಗಳಲ್ಲಿ ಸಂಗ್ರಹವಾಗಿರುವ ಮಾಹಿತಿಗಳು ಕರಪ್ಟ್ ಮಾಡಿಸಬಹುದು.
ಕೈತಪ್ಪಿನಿಂದ ಮಾಹಿತಿ ನಷ್ಟ
ಕೆಲವೊಮ್ಮೆ, ನಮ್ಮದೇ ಕೈತಪ್ಪಿನಿಂದ, ಏನೋ ಮಾಡಲು ಹೋಗಿ ಡಿಲೀಟ್ ಆಗಬಹುದು. ಡೇಟಾ ಕನ್ವರ್ಟ್ ಮಾಡುವಾಗ ಎದುರಾಗುವ ತೊಂದರೆಗಳೂ ಮಾಹಿತಿ ನಷ್ಟಕ್ಕೆ ಕಾರಣವಾಗಬಹುದು.
ಡಿಜಿಟಲ್ ಸಂರಕ್ಷಣೆ ಮಾಡುವ ವಿಧಾನದ ಅರಿವಿನ ಕೊರತೆ:
ಹಲವು ಮಾಹಿತಿಗಳು, ವೆಬ್ಸೈಟ್ಗಳು ಹಾಗೂ ಇನ್ನಿತರ ಡಿಜಿಟಲ್ ವಿಷಯಗಳ ಸರಿಯಾದ ಸಂರಕ್ಷಣೆ ಆಗುತ್ತಿಲ್ಲ. ಹೀಗನ್ನುವುದಕ್ಕಿಂತ, ಸಂರಕ್ಷಣೆ ಮಾಡುವ ವಿಧಾನ ಅದೆಷ್ಟೋ ಜನರಿಗೆ ತಿಳಿದಿಲ್ಲ. ಫೋನ್ ಬದಲಾವಣೆ ಮಾಡುವಾಗ, ಹಳೇ ಫೋನ್ ನಲ್ಲೇ ಎಷ್ಟೋ ಮಾಹಿತಿಗಳು ಬಾಕಿ ಆಗಿ ಬಿಡುತ್ತದೆ. ಆ ಬಳಿಕ ಫೋನ್ ಫಾಮ್ರ್ಯಾಟ್ ಮಾಡುವಾಗ ಎಲ್ಲವೂ ಅಳಿಸಿಹೋಗುತ್ತದೆ. ಡಿಜಿಟಲ್ ಮಾಹಿತಿಗಳ ಸಂರಕ್ಷಣೆಗೆ ಆದ್ಯತೆ ನೀಡುವ ಕೆಲಸ ಆಗಬೇಕು.
ಹಾಗಾದ್ರೆ ಇದಕೆ ಪರಿಹಾರಗಳೇನು?
ಡೇಟಾ ಬ್ಯಾಕಪ್
ಡೇಟಾ ನಷ್ಟ ಆಗುವುದನ್ನು ತಡೆಗಟ್ಟಲು ಇರುವ ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ನಿಯಮಿತವಾಗಿ ಪ್ರಮುಖ ಮಾಹಿತಿಗಳನ್ನು ಬ್ಯಾಕಪ್ ಮಾಡುವುದು. ಕನಿಷ್ಟ ಎರಡು ಸಾಧನಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿ ಇಡುವುದು ಉತ್ತಮ. ಕ್ಲೌಡ್ ನಲ್ಲಿ ಇಟ್ಟರೂ, ಆಪ್ಲೈನ್ನಲ್ಲೂ ಸೇವ್ ಮಾಡಿ ಇಡುವುದು ಒಳ್ಳೆಯದು.
ಹೊಸ ಫಾರ್ಮಾಟ್ ಗೆ ಕನ್ವರ್ಟ್ ಮಾಡುವುದು,
ಕಾಲಕಾಲಕ್ಕೆ ನಿಮ್ಮ ಸಿಸ್ಟಮ್ ಅಪ್ಡೇಟ್ ಮಾಡಿ, ಹೊಸ ಫಾರ್ಮಾಟ್ಗೆ ನಿಮ್ಮ ಫೈಲ್ಗಳನ್ನೂ ಕನ್ವರ್ಟ್ ಮಾಡಿ ಇಟ್ಟುಕೊಳ್ಳುವುದು ಉತ್ತಮ. ಈಗಾಗಲೇ ಕೆಲವು ಸ್ಮಾರ್ಟ್ಫೋನ್ಗಳ ಕ್ಯಾಮೆರಾಗಳಲ್ಲಿ ತೆಗೆದ ಫೋಟೋ ಜೆಪಿಇಜಿ ಹಾಗೂ ಎಚ್ಇಐಎಫ್ ಫಾಮ್ರ್ಯಾಟ್ನಲ್ಲಿ ಸೇವ್ ಆಗುತ್ತಿದೆ. ಮುಂದೆ, ಜೆಪಿಇಜಿ ಆಯ್ಕೆಯೇ ಸಿಗದಿದ್ದರೂ ಅಚ್ಚರಿಯಿಲ್ಲ! ಹಾಗಾಗಿ, ಈಗಲೇ ಹೊಸ ಫಾಮ್ರ್ಯಾಟ್ ಬಗ್ಗೆ ತಿಳಿದುಕೊಳ್ಳಿ.
ಶಿಕ್ಷಣ ಮತ್ತು ಜಾಗೃತಿ
ಡಿಜಿಟಲ್ ಸಂರಕ್ಷಣೆ ಬಗ್ಗೆ ನಾವು ತಿಳಿದು, ಬೇರೆಯವರಿಗೂ ಅದರ ಮಹತ್ವದ ಬಗ್ಗೆ ತಿಳಿಸಿ, ಜನರಲ್ಲಿ ಜಾಗೃತಿ ಮೂಡಿಸುವುದು. ಈ ಮೂಲಕ ತಮ್ಮ ಡಿಜಿಟಲ್ ಡೇಟಾವನ್ನು ಉತ್ತಮವಾಗಿ ಸಂಗ್ರಹಿಸಿ, ಡೇಟಾ ನಷ್ಟವನ್ನು ತಡೆಯಲು ಸಹಾಯ ಮಾಡುತ್ತದೆ.