ಕಥೆಯೊಂದ ಹೇಳಿದೆ ಬರೀ ಗುರುತುಗಳೇ ಕಾಲೇಜಲಿ! ಎನ್ನುವ ಸಾಂಗ್ ಕೇಳಿದಾಗ ಎಲ್ಲರಿಗೂ ಒಂದು ಸಲ ತಮ್ಮ ಕಾಲೇಜು ಜೀವನ ನೆನಪಾಗೊದಂತು ಸುಳಲ್ಲ. ಕಾಲೇಜು ಜೀವನದಲ್ಲಿ ಮಾಡಿದ ತುಂಟಾಟ, ತರಲೆ, ಮೋಜು- ಮಸ್ತಿಗಳೆಲ್ಲ ಕಾಲೇಜು ಮುಗಿದ ಮೇಲೆ ಸಿಹಿ ನೆನಪುಗಳಾಗಿ ಕಾಡುತ್ತವೆ. ಕಾಲೇಜಿನಲ್ಲಿ ನಡೆದ ಕೆಲವು ಘಟನೆಗಳು ನೆನಪಾಗಿ ನಮ್ಮ ಮುಖದಲ್ಲಿ ನಗು ಮೂಡಿಸಿದ್ದರೆ ಮತ್ತೆ ಕೆಲವು ಘಟನೆಗಳು ನಮ್ಮ ಮನಸ್ಸಿಗೆ ನೋವನ್ನು ನೀಡುತ್ತದೆ.
ನನ್ನ ಮೊದಲ ವರ್ಷ ಪಿಜಿಯಲ್ಲಿ ನಡೆದ ಘಟನೆಯೊಂದು ನನನ್ನು ಆಗಾಗ ಕಾಡುತ್ತಲಿರುತ್ತದೆ. ನಾನು ಕಾಲೇಜು ಸೇರಿದ ಪ್ರಾರಂಭದಲ್ಲಿ ನನಗೆ ಯಾರು ಅತ್ಮೀಯ ಗೆಳೆಯರು ಯಾರು ಇರಲಿಲ್ಲ ಆದರೆ ನನ್ನ ಪಕ್ಕ ಕೇರಳದ ಹುಡುಗಿಯೊಬ್ಬಳು ಕುಳಿತುಕೊಳ್ಳುತ್ತಿದ್ದಳು. ನನಗೆ ಮಲಯಾಳಂ ಮಾತನಾಡಲು ಬರುತ್ತಿರಲಿಲ್ಲ ಅವಳಿಗೆ ಕನ್ನಡ ಭಾಷೆಯ ಪರಿಚಯವಿರಲಿಲ್ಲ. ಹಾಗಾಗಿ ನಮ್ಮ ನಡುವೆ ಇಂಗ್ಲೀಷ್ನಲ್ಲಿ ಮಾತುಕತೆ ನಡೆಯುತ್ತಿತ್ತು ಅದು ಕೂಡ ಅಷ್ಟಕಷ್ಟೇ ಇತ್ತು.
ಅವಳಿಗೆ ಒಂದು ದಿನ ಹುಷಾರಿಲ್ಲವೆಂದು ಅವಳ ಹಾಸ್ಟೇಲ್ನಲ್ಲಿ ಇದ್ದ ನನ್ನ ಕ್ಲಾಸಿನ ಗೆಳತಿಯರು ಹಾಸ್ಪಿಟಲ್ಗೆ ಕರೆದುಕೊಂಡು ಹೋಗಿದ್ದಾರೆ ಎನ್ನುವ ಸುದ್ದಿ ತಿಳಿಯಿತು ಅವಳಿಗೆ ಏನಾಗಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನನ್ನಲ್ಲಿ ಇತ್ತು.
ಮಧ್ಯಾಹ್ನದ ಸಮಯದಲ್ಲಿ ನನ್ನ ಕ್ಲಾಸಿನ ಇತರೇ ಗೆಳತಿ ಗೆಳೆಯರ ಜತೆ ನಾನು ಕ್ಯಾಂಟೀನ್ಗೆ ಹೋಗಿದ್ದೆ. ಅದೇ ಸಮಯಕ್ಕೆ ಮಲಯಾಳಿ ಹುಡುಗಿಯ ಜೊತೆ ಅವಳ ಜೊತೆ ಹೋಗಿದ್ದ ಗೆಳತಿಯರು ಬಂದು ನನ್ನ ಬಳಿ ಅವಳನ್ನು ಸ್ಟಾಫ್ ರೂಮ್ಗೆ ಕರೆದುಕೊಂಡು ಹೋಗಲು ಹೇಳಿದರು. ನಾನು ಅವಳನ್ನು ಕರೆದುಕೊಂಡು ನಮ್ಮ ಕ್ಲಾಸ್ ಇರುವ ಪ್ಲೋರ್ಗೆ ಹೋದೆ. ಆದರೆ ಅಂದು ಶನಿವಾರವಾದರಿಂದ ಅದಾಗಲೇ ನಮ್ಮ ಲೆಕ್ಚರರ್ಸ್ ಎಲ್ಲರೂ ಮನೆ ಕಡೆ ಹೊರಟಿದ್ದರು ಅಲ್ಲಿ ಯಾರು ಇರಲಿಲ್ಲ. ನಾನು ಅವಳ ಬಳಿ ಹೇಳಿದೆ ಇಲ್ಲಿ ಲೆಕ್ಚರರ್ಸ್ ಇಲ್ಲ ನಾವು ಇಲ್ಲಿಂದ ಹೋಗೋಣವೆಂದು ಹೇಳಿದೆ. ನನ್ನ ಮಾತು ಕೇಳಿ ಅವಳಿಗೆ ಏನಾಯಿತೋ ಗೊತ್ತಿಲ್ಲ ಒಂದೇ ಸಲ ಜೋರು ಧ್ವನಿಯಲ್ಲಿ ಬೈಯಲು ಪ್ರಾರಂಭಿಸಿದಳು. ನನಗೆ ಅಲ್ಲಿ ಏನು ನಡೆಯುತ್ತಿದೆ ಅಂತ ಅರ್ಥವಾಗುವಷ್ಟರಲ್ಲಿ ಬೇರೆ ವಿಭಾಗದ ವಿದ್ಯಾರ್ಥಿಗಳೆಲ್ಲ ಬಂದು ನಮ್ಮನ್ನೇ ನೋಡಲು ಪ್ರಾರಂಭಿಸಿದರು. ನನಗೆ ಮುಜುಗರವಾಯಿತು ಜೋರಾಗಿ ಅಳುಬಂತು, ನಾನು ಆಳುತ್ತಾ ಅವಳನ್ನು ಅಲ್ಲಿಯೇ ಬಿಟ್ಟು ಹೊರಗೆ ಬಂದೆ ಅಲ್ಲಿ ನನ್ನ ಲೆಕ್ಚರರ್ಸ್ ಇದ್ದರು ಅವರಿಗೆ ವಿಷಯ ತಿಳಿಸಿದೆ. ಅವರು ನನ್ನನ್ನು ಸಮಾಧಾನ ಪಡಿಸಿ ಮನೆಗೆ ಕಳುಹಿಸಿದರು.
ನಾನು ಅಂದಿನಿಂದ ಅವಳ ಜೊತೆಗೆ ಮಾತು ಬಿಟ್ಟೆ. ಅವಳ ಜತೆ ಕುಳಿತುಕೊಳ್ಳುವುದನ್ನು ಬಿಟ್ಟೆ. ಆದರೆ ನನಗೆ ಅಂದು ಏನು ನಡೆಯಿತು ಎಂದು ಅರ್ಥವಾಗಲಿಲ್ಲ. ಸುಮಾರು ದಿನ ಕಳೆದ ಮೇಲೆ ತಿಳಿಯಿತು ಅವಳು ದೂರದ ಕೇರಳದಿಂದ ಕರ್ನಾಟಕಕ್ಕೆ ಬಂದಿದ್ದಳು.ಅವಳಿಗೆ ಕನ್ನಡ ಅರ್ಥವಾಗುತ್ತಿರಲಿಲ್ಲ. ತಂದೆ ತಾಯಿಯಿಂದ ಇದೇ ಮೊದಲ ಬಾರಿಗೆ ದೂರವಾಗಿರುವುದು, ಅದಲ್ಲದೇ ಅವಳಿಗೆ ಕ್ಲಾಸಿನಲ್ಲೂ ಯಾರು ಗೆಳತಿಯರು ಇರಲಿಲ್ಲ. ಆದರಿಂದ ಅವಳ ಮನಸ್ಸಿನ ಭಾವನೆಯನ್ನು ಹೇಳಿಕೊಳ್ಳಲಾಗದೇ ಅವಳು ಮಾನಸಿಕವಾಗಿ ಕುಗ್ಗಿಹೋಗಿದ್ದಳು,ಅದರಿಂದ ಸಿಕ್ಕವರ ಮೇಲೆಲ್ಲ ಹಾರಿಹಾಯುತ್ತಿದ್ದಳು.
ಮಲೆನಾಡಿನ ಮಡಿಲಿನಲ್ಲಿದ್ದ ನಾನು ಏಕಾಏಕಿ ಕರಾವಳಿ ತೀರಕ್ಕೆ ಬಂದಾಗಲೇ ನನಗೆ ಒಗ್ಗಿಕೊಳ್ಳಲು ಕಷ್ಟವಾಗುತ್ತಿರುವಾಗ ತನಗೆ ತಿಳಿಯದ ಭಾಷೆ ವಿಭಿನ್ನ ಜೀವನ ಶೈಲಿಯನ್ನು ಅರಗಿಸಿಕೊಳ್ಳುಲು ಪ್ರಯತ್ನಿಸುವಲ್ಲಿ ಅವಳಿಗೆ ಎಷ್ಟು ಕಷ್ಟವಾಗಿರಬಹುದು, ಅವಳು ಸಿಕ್ಕವರ ಮೇಲೆಲ್ಲ ಹಾರಿಹಾಯುವಾಗ ಅವಳ ಮನಸ್ಸಿನಲ್ಲಿ ಯಾವ ಮಟ್ಟದಲ್ಲಿ ಖಿನ್ನತೆಯು ಉಂಟಾಗಿರಬಹುದು ಎನ್ನುವುದು ನನಗೂ ಅರಿವಾಯಿತು. ಅಂದಿನಿಂದ ಅವಳ ಜೊತೆ ಮಾತನಾಡತೊಡಗಿದೆ. ಅವಳಿಗೆ ಕನ್ನಡ ಕಲಿಸುವ ಪ್ರಯತ್ನಮಾಡಿ ಅವಳೊಂದಿಗೆ ಉತ್ತಮ ಗೆಳೆತನ ಇಂದಿಗೂ ಹೊಂದಿದ್ದೇನೆ.