ಇಂದು ನಾವು ಎಲ್ಲ ಕಡೆ ಕ್ಯೂಆರ್ ಕೋಡ್ ಅನ್ನು ಕಾಣುತ್ತೇವೆ. ಆದರೆ ಈ ಕ್ಯೂಆರ್ ಕೋಡ್ ಭರಾಟೆಯಲ್ಲಿ ಬಾರ್ ಕೋಡ್ ಕ್ಷೀಣಿಸುತ್ತಿರುವುದು ಗಮನಕ್ಕೆ ಬಾರದೆ ಹೋಗಿದೆ.
ಆದರೂ ಇನ್ನು ಸಹ ಬಾರ್ ಕೋಡ್ ಅನ್ನು ಗ್ರಂಥಾಲಯ, ಬ್ಯಾಂಕ್, ಅಂಚೆ ಇಲಾಖೆ ಇನ್ನು ಮುಂತಾದ ಕಡೆಗಳಲ್ಲಿ ಕಾಣಬಹುದಾಗಿದೆ.
ಯಾವುದಾದರು ಮಾಹಿತಿಗಳನ್ನು ಉದ್ದ ಗೆರೆಗಳ ಅಂತರ, ಗಾತ್ರದಲ್ಲಿ ಹುದುಗಿಸಿಡುವ ವಿಧಾನವೇ ಬಾರ್ ಕೋಡ್ ವ್ಯವಸ್ಥೆ.
ಈ ಬಾರ್ ಕೋಡ್ ಚಾಲ್ತಿಗೆ ಬಂದು ಏಪ್ರಿಲ್ 3ಕ್ಕೆ ಐವತ್ತು ವರ್ಷ ಗತಿಸಿದವು. ಕಾಲಾನುಸಾರ ವಿವಿಧ ಬದಲಾವಣೆಗಳನ್ನು ಕಂಡು ಇಷ್ಟು ವರ್ಷ ಉಳಿದುಕೊಂಡು ಬಂದಿರುವುದು ಈ ತಂತ್ರಜ್ಞಾನದ ಹೆಚ್ಚುಗಾರಿಕೆ.
ಬಾರ್ ಕೋಡ್ ನ ಆವಿಷ್ಕಾರ 1973ರಲ್ಲಿ ಆಯಿತು. ಅದಕ್ಕೂ ಮೊದಲೇ ಅಮೇರಿಕಾದ ನಾರ್ಮನ್ ಜೋಸೆಫ್ ವುಡ್ಲ್ಯಾಂಡ್ ಹಾಗೂ ಬರ್ನಾರ್ಡ್ ಸಿಲ್ವರ್ 1952ರಲ್ಲಿ ಬಾರ್ ಕೋಡ್ ಗೆ ಪೇಟೆಂಟ್ ಪಡೆದುಕೊಂದಿದ್ದರು. ಆದರೆ ಅದು ವ್ಯಾಪಾಕವಾಗಿ ಬಳಕೆಗೆ ಬಂದದ್ದು 1973ರಲ್ಲಿ.
ಜಾರ್ಜ್ ಲಾರರ್ ಎಂಬ ಇಂಜಿನಿಯರ್ ಬಾರ್ ಕೋಡ್ ವಿನ್ಯಾಸ ವನ್ನು ಸುಧಾರಿಸಿ, ಅವುಗಳನ್ನು ಗುರುತಿಸುವ ಸ್ಕ್ಯಾನ್ನರ್ ಗಳನ್ನು ಅಭಿವೃದ್ಧಿಪಡಿಸಿದರು. ಮೊದಲು ಬಾರ್ ಕೋಡ್ ವೃತ್ತಾಕಾರದಲ್ಲಿ ಇದ್ದು ಮತ್ತೆ 1973ರಲ್ಲಿ ಅದನ್ನು ಕಪ್ಪು ಬಣ್ಣದ ಆಯತಕಾರದಲ್ಲಿ ಅಭಿವೃದ್ಧಿ ಪಡಿಸಿದರು.
ಸುಮಾರು ಆಹಾರ ತಯಾರಿಕ ಘಟಕಗಳು ಹಾಗೂ ಅಂಗಡಿಗಳು ಈ ಬಾರ್ ಕೋಡ್ ಅನ್ನು ಏಪ್ರಿಲ್ 3, 1973 ರಂದು ಬಳಸಲು ಆರಂಭಿಸಿದವು.
1974 ರಲ್ಲಿ ಅಮೇರಿಕಾ ತನ್ನದೇ ಆದ ಯುಪಿಸಿ (ಯುನಿವೆರ್ಸಲ್ ಪ್ರಾಡಕ್ಟ್ ಕೋಡ್) ಅನ್ನು ಬಳಸಲು ಆರಂಭಿಸಿತು. ಅದೇ ವರ್ಷದ ಜೂನ್ ತಿಂಗಳಲ್ಲಿ ಅಮೇರಿಕಾದಲ್ಲಿ ಮಾರಾಟವಾದ ಚುಯಿಂಗ್ ಗಮ್ ಪೊಟ್ಟಣ ಬಾರ್ ಕೋಡ್ ಸ್ಕ್ಯಾನ್ ಮಾಡಲಾದ ವಿಶ್ವದ ಮೊದಲ ವಸ್ತು.