ಸ್ಮಾರ್ಟ್ಫೋನ್ ಅನ್ನುವುದು ಇಂದು ನಮ್ಮ ಜೀವನದ ಒಂದು ಪ್ರಮುಖ ಅಂಗವಾಗಿ ಬಿಟ್ಟಿದೆ. ದಿನದಲ್ಲಿಯ ಅನೇಕ ಕೆಲಸಗಳನ್ನು ಸ್ಮಾರ್ಟ್ಫೋನ್ ಮೂಲಕವೇ ಮಾಡಿಕೊಳ್ಳಲಾಗುತ್ತದೆ. ಆದರೆ ಈ ಫೋನ್ ಕಾರ್ಯನಿರ್ವಹಿಸಲು ಬ್ಯಾಟರಿ ಚಾರ್ಜ್ ಮಾಡಬೇಕು. ಬ್ಯಾಟರಿ ಚಾರ್ಜ್ ಆಗಲು ವಿದ್ಯುತ್ ಬೇಕೇಬೇಕು. ಸಾಮಾನ್ಯವಾಗಿ ಎಲ್ಲರು ಚಾರ್ಜರ್ ಮೂಲಕ ಬ್ಯಾಟರಿ ಫುಲ್ ಮಾಡುತ್ತಾರೆ. ಆದರೆ, ನೀವು ಎಂದಾದರೂ ಸ್ಮಾರ್ಟ್ಫೋನ್ ಒಮ್ಮೆ ಚಾರ್ಜ್ ಮಾಡಲು ಎಷ್ಟು ಯೂನಿಟ್ ವಿದ್ಯುತ್ ಬೇಕಾಗುತ್ತದೆ ಎಂದು ಚಿಂತಿಸಿದ್ದಿರಾ? ಫೋನ್ ಅನ್ನು ಒಮ್ಮೆ ಚಾರ್ಜ್ ಮಾಡಲು ಎಷ್ಟು ವಿದ್ಯುತ್ ವೆಚ್ಚವಾಗುತ್ತದೆ? ಫೋನ್ ಅನ್ನು ಚಾರ್ಜ್ ಮಾಡಿದಾಗ ಎಷ್ಟು ಹಣ ಖರ್ಚು ಆಗುತ್ತದೆ? ಇದು ಎಷ್ಟು ಯೂನಿಟ್ ವಿದ್ಯುತ್ ಬಳಸುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?
ನಿಮ್ಮ ಸ್ಮಾರ್ಟ್ಫೋನ್ ಯಾವುವು?, ಅದರ ಬ್ಯಾಟರಿ ಎಷ್ಟು ಎಂಬುದರ ಮೇಲೆ ವಿದ್ಯುತ್ ಬಳಕೆ ಬದಲಾಗುತ್ತದೆ. ಆದರೆ ಫಲಿತಾಂಶಗಳು ಹೆಚ್ಚು ಭಿನ್ನವಿರುವುದಿಲ್ಲ. ಚಾರ್ಜಿಂಗ್ನಲ್ಲಿ ಎಷ್ಟು ವಿದ್ಯುತ್ ಖರ್ಚಾಗುತ್ತದೆ ಎಂದು ನೀವು ತಿಳಿದುಕೊಳ್ಳಬೇಕಾದರೆ, ನೀವು ಎಷ್ಟು ಬಾರಿ, ಎಷ್ಟು ಸಮಯ ಫೋನ್ ಚಾರ್ಜ್ ಮಾಡುತ್ತೀರಿ ಎಂಬುದನ್ನು ಗಮನಿಸಿಕೊಳ್ಳಬೇಕು.
ಸರಾಸರಿ ನೋಡುವುದಾದರೆ ಪ್ರತಿಯೊಬ್ಬರೂ ತಮ್ಮ ಫೋನ್ ಅನ್ನು ದಿನಕ್ಕೆ 3 ಗಂಟೆಗಳ ಕಾಲ ಚಾರ್ಜ್ ಮಾಡುತ್ತಾರೆ. ಫಾಸ್ಟ್ ಚಾರ್ಜರ್ ನಿಂದ ಚಾರ್ಜ್ ಮಾಡುವವರು ಕಡಿಮೆ ಸಮಯದಲ್ಲಿ ಅಷ್ಟೇ ಪ್ರಮಾಣದ ವಿದ್ಯುತ್ ಬಳಸುತ್ತಾರೆ. ಇಷ್ಟು ದೀರ್ಘ ಕಾಲ ಫೋನ್ ಚಾರ್ಜ್ ಮಾಡುವುದರಿಂದ 0.15 KWH ವಿದ್ಯುತ್ ಖರ್ಚಾಗುತ್ತದೆ. ಇದಲ್ಲದೆ, ಹೆಚ್ಚಿನ mAh ಬ್ಯಾಟರಿ ಹೊಂದಿರುವ ಫೋನ್ ಹೆಚ್ಚು ಶಕ್ತಿಯನ್ನು ಬಳಸುತ್ತದೆ. ಇದು 0.115 KWH ವರೆಗೆ ಅಷ್ಟೇ ಇರುತ್ತದೆ.
ಉದಾಹರಣೆಗೆ, ಐಫೋನ್ ಅಡಾಪ್ಟರ್ 5W ಆಗಿದೆ, ನೀವು ಅದನ್ನು ಒಂದು ಗಂಟೆ ಚಾರ್ಜ್ ಮಾಡಿದರೆ ಇದು 0.005KWh ವಿದ್ಯುತ್ ಅನ್ನು ಬಳಸುತ್ತದೆ. ಅದೇ 3 ಗಂಟೆಗಳ ಕಾಲ ಬಳಸಿದರೆ 0.015 KWH ವಿದ್ಯುತ್ ಅನ್ನು ಬಳಸುತ್ತದೆ. ಯೂನಿಟ್ ವಾರು ನೋಡಿದರೆ ಒಂದು ವರ್ಷದಲ್ಲಿ ಸುಮಾರು 5 ಯೂನಿಟ್ ವಿದ್ಯುತ್ ಖರ್ಚಾಗುತ್ತದೆ. ಅತ್ಯಂತ ಶಕ್ತಿಶಾಲಿ ಬ್ಯಾಟರಿಗಳಾದರೆ ಹೆಚ್ಚು ಸಮಯ ಫೋನ್ ಚಾರ್ಜ್ ಮಾಡಬೇಕಾಗುತ್ತದೆ. ಇದರಿಂದಾಗಿ ಒಮ್ಮೆಲೇ ವಿದ್ಯುತ್ ಖರ್ಚಾಗುತ್ತದೆ. 3000 ರಿಂದ 5000 MAH ಬ್ಯಾಟರಿ ಹೊಂದಿರುವ ಫೋನ್ ಆದರೆ ಇದು ವರ್ಷಕ್ಕೆ 4-6 ಯೂನಿಟ್ ವಿದ್ಯುತ್ ಅನ್ನು ತೆಗೆದುಕೊಳ್ಳಬಹುದು.
ನಿಮ್ಮ ರಾಜ್ಯದ ಪ್ರತಿ ಯೂನಿಟ್ ವಿದ್ಯುತ್ ದರದ ಆಧಾರದ ಮೇಲೆ ಒಂದು ವರ್ಷದಲ್ಲಿ ಫೋನ್ ಶುಲ್ಕಕ್ಕೆ ಎಷ್ಟು ಹಣ ಖರ್ಚಾಗುತ್ತದೆ ಎಂದು ನೀವು ಅಂದಾಜು ಮಾಡಬಹುದು. ಒಂದು ಯೂನಿಟ್ ವಿದ್ಯುತ್ ಶುಲ್ಕ 8 ರೂಪಾಯಿ ಇದ್ದರೆ, ನಿಮ್ಮ ಫೋನ್ ಅನ್ನು ಚಾರ್ಜ್ ಮಾಡಲು ವರ್ಷಕ್ಕೆ 40 ರೂಪಾಯಿ ವೆಚ್ಚ ತಗುಲಬಹುದು. ಅದೇ ತಿಂಗಳಿಗೆ ಲೆಕ್ಕ ಹಾಕಿದರೆ ಈ ವೆಚ್ಚ ಸುಮಾರು 3.5 ರೂಪಾಯಿ ಆಗಿರಬಹುದು ಅಷ್ಟೇ. ಇದರಿಂದ ನಿಮ್ಮ ವಿದ್ಯುತ್ ಬಿಲ್ ಹೆಚ್ಚೇನು ಬರುವುದಿಲ್ಲ ಎಂದು ಸಮಾಧಾನ ಮಾಡಿಕೊಳ್ಳಬಹುದು.